ವಿರಾಜಪೇಟೆ: ಬಿಸಿಯೂಟ ನೌಕರರ ಪ್ರತಿಭಟನೆ - ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಲು ಆಗ್ರಹ
admincoorgdaily

ವಿರಾಜಪೇಟೆ: ಶಾಲಾ ಬಿಸಿಯೂಟ ಯೋಜನೆಗೆ 'ಸೆಂಟ್ರಲ್ ಕ್ಲಸ್ಟರ್ ಕಿಚನ್' ರಚಿಸುವ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ವಿರಾಜಪೇಟೆ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ರಾಜ್ಯವ್ಯಾಪಿ ಬಿಸಿಯೂಟ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿAದ ನೌಕರರಿಗೆ ವೇತನವನ್ನೇ ನೀಡಿರಲಿಲ್ಲ. ಇತ್ತೀಚೆಗೆ ವೇತನ ಬಿಡುಗಡೆ ಮಾಡಿದ್ದರೂ, ಅದರಲ್ಲಿ ಸಾವಿರಾರು ರೂಪಾಯಿಗಳನ್ನು ಅನಗತ್ಯವಾಗಿ ಕಡಿತಗೊಳಿಸಿ ಖಾತೆಗೆ ಜಮೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕುಸುಮಾ, ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಶ್ವೇತಾ ಹಾಗೂ ವಿರಾಜಪೇಟೆ ತಾಲೂಕು ಅಧ್ಯಕ್ಷೆ ಉಮೇಶ್ವರಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ಪೊನ್ನಂಪೇಟೆ ತಾಲೂಕು ಅಕ್ಷರ ದಾಸೋಹ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಸಾಬು, "ರಾಜ್ಯದಾದ್ಯಂತ ಬಿಸಿಯೂಟ ನೌಕರರು ಅತ್ಯಂತ ಕಡಿಮೆ ಗೌರವಧನದಲ್ಲಿ ದುಡಿಯುತ್ತಿದ್ದರೂ, ಸಕಾಲಕ್ಕೆ ವೇತನ ನೀಡದೆ ಸರ್ಕಾರ ಸತಾಯಿಸುತ್ತಿದೆ. ಮೂರ್ನಾಲ್ಕು ತಿಂಗಳ ಬಾಕಿ ವೇತನವನ್ನು ಒಟ್ಟಿಗೆ ನೀಡುವ ಬದಲು, ಅದರಲ್ಲೂ ಕಡಿತಗೊಳಿಸಿರುವುದು ನೌಕರರ ಬದುಕಿನ ಜೊತೆ ಚೆಲ್ಲಾಟವಾಡಿದಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ, ಈಗ 'ಸೆಂಟ್ರಲ್ ಕ್ಲಸ್ಟರ್ ಕಿಚನ್' ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಕೂಡಲೇ ವೇತನ ಕಡಿತವನ್ನು ಸರಿಪಡಿಸಿ ಬಾಕಿ ಹಣ ಬಿಡುಗಡೆ ಮಾಡಬೇಕು ಹಾಗೂ ಕ್ಲಸ್ಟರ್ ಕಿಚನ್ ಪ್ರಸ್ತಾವನೆಯನ್ನು ಕೈಬಿಡಬೇಕು," ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕುಸುಮಾ ಮಾತನಾಡಿ, "2001ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೆ ಬಂದಿರುವ ಬಿಸಿಯೂಟ ಯೋಜನೆಯಡಿ, 6 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಅವರು ಇರುವ ಸ್ಥಳದಲ್ಲೇ ಬೇಯಿಸಿ ತಾಜಾ ಮತ್ತು ಬಿಸಿ-ಬಿಸಿ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ನಿಯಮವಿದೆ. ಇದಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಪ್ರತಿ ಶಾಲೆಯಲ್ಲೂ ಅಡುಗೆ ಕೋಣೆ ಹಾಗೂ ಪಾತ್ರೆಗಳನ್ನು ಒದಗಿಸಿದೆ. 2012ರ ಸುತ್ತೋಲೆಯಂತೆಯೂ ಬಿಸಿಯೂಟವನ್ನು ಸ್ವಯಂಸೇವಾ ಸಂಸ್ಥೆಗಳಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ, ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ನ. 7ರಂದು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಕ್ಲಸ್ಟರ್ ಕಿಚನ್ ರಚಿಸುವ ಕುರಿತು ಅಭಿಪ್ರಾಯ ಕೇಳಿ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದು ನಿಧಾನವಾಗಿ ಧಾರ್ಮಿಕ, ಜಾತಿ ಸಂಘಟನೆಗಳು ಹಾಗೂ ಖಾಸಗಿಯವರಿಗೆ ಯೋಜನೆಯನ್ನು ವಹಿಸುವ ಹುನ್ನಾರವಾಗಿದ್ದು, ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘದ ಈ ಸೂಚನೆಯನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ," ಎಂದರು.
ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಶ್ವೇತಾ ಮಾತನಾಡಿ, "ಶಿಕ್ಷಕರು ಪಠ್ಯಕ್ರಮಗಳತ್ತ ಗಮನಹರಿಸಲು ಅನುಕೂಲವಾಗುವಂತೆ, ಮುಖ್ಯೋಪಾಧ್ಯಾಯರಿಗೆ ಬಿಸಿಯೂಟದ ಜವಾಬ್ದಾರಿ ಬೇಡವೆಂದರೆ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಅಡುಗೆಯವರ ಜಂಟಿ ಖಾತೆ ತೆರೆಯಬೇಕು. ಸರ್ಕಾರಿ ಶಾಲೆಗಳಿರುವ ತನಕ ಬಿಸಿಯೂಟ ಮಕ್ಕಳ ಮೂಲಭೂತ ಹಕ್ಕಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಅನುಭವಿ ಹಾಗೂ ವಿದ್ಯಾವಂತ ಅಡುಗೆಯವರಿಗೆ ವಹಿಸಿ, ಅಗತ್ಯವಿದ್ದರೆ ಕೆಲಸದ ಅವಧಿಯನ್ನು ವಿಸ್ತರಿಸಬೇಕು. ಅಲ್ಲದೆ, ಶಾಲಾ ಶಿಕ್ಷಕರು ಎದುರಿಸುತ್ತಿರುವ ಕೋಳಿ ಮೊಟ್ಟೆ ಬೆಲೆ ಏರಿಕೆ ಸಮಸ್ಯೆ ನಿವಾರಿಸಲು, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವಂತೆ ಕುಕ್ಕುಟ ಮಹಾಮಂಡಳಿಯಿಂದಲೇ ಶಾಲೆಗಳಿಗೆ ಮೊಟ್ಟೆ ಸರಬರಾಜು ಮಾಡಲು ಇಲಾಖೆ ಕ್ರಮ ಕೈಗೊಳ್ಳಬೇಕು," ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿರಾಜಪೇಟೆ ತಾಲೂಕು ಅಧ್ಯಕ್ಷೆ ಉಮೇಶ್ವರಿ ಸೇರಿದಂತೆ ಅಕ್ಷರ ದಾಸೋಹ ನೌಕರರು, sಶಾಜಿ ರಮೇಶ್, ಸಾದಿಕ್ ಸೇರಿದಂತೆ ಇನ್ನಿತರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.