ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ, ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
admincoorgdaily

ವಿರಾಜಪೇಟೆ:ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪರ್ಶತೆ ಹಾಗೂ ಶೋಷಣೆಯನ್ನು ತೊಡೆದುಹಾಕಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಕ್ರಾಂತಿಕಾರಿ ಬದಲಾವಣೆ ತಂದವರು. ಅವರ ಇತಿಹಾಸ ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ವಾಗ್ಮಿ ಸ್ಮಿತೇಶ್ ಅಭಿಪ್ರಾಯಪಟ್ಟರು.
ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ನಾರಾಯಣ ಗುರು ಜಯಂತಿ, ವಿಶೇಷ ಉಪನ್ಯಾಸ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸ್ಮಿತೇಶ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ,
ವಿದ್ಯಾರ್ಥಿಗಳು ಹಾಗೂ ಜನಾಂಗದ ಬಂಧುಗಳು ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು, ಓದಿನ ಕಡೆ ಗಮನಹರಿಸಬೇಕು, ಮೊಬೈಲ್ ಚಟಕ್ಕೆ ದಾಸರಾಗದೆ ತಮ್ಮ ಅಮೂಲ್ಯ ಸಮಯವನ್ನು ವಿದ್ಯಾರ್ಜನೆಗೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದರು.
"ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ವಿಶ್ವಮಾನವ ತತ್ವವನ್ನು ಸಾರಿದರು. ಮನುಷ್ಯರೆಲ್ಲರೂ ಒಂದೇ ಜಾತಿಗೆ ಸೇರಿದವರು, ನಮಗೆ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದು ಪ್ರತಿಪಾದಿಸಿದರು. ಅಂದಿನ ಕಾಲದಲ್ಲಿ ಕೆಳವರ್ಗದ ಜನರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಗುರುಗಳು, 1888 ರಲ್ಲಿ ಕೇರಳದ ಅರುವಿಪ್ಪುರಂನಲ್ಲಿ ನದಿಯಿಂದ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಿದರು. ದೇವಾಲಯ ಪ್ರತಿಷ್ಠಾಪನೆ ಮೇಲ್ವರ್ಗದವರ ಹಕ್ಕು ಮಾತ್ರವಲ್ಲ ಎಂಬುದನ್ನು ನಿರೂಪಿಸಿದರು.
"ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ" ಎಂದು ಸಮಾಜಕ್ಕೆ ಕರೆ ನೀಡಿದರು. ಆಡಂಬರದ ಗುಡಿಗಳಿಗಿಂತ ಶಾಲೆಗಳು, ಗ್ರಂಥಾಲಯಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವುದು ಮುಖ್ಯ ಎಂದು ಅವರು ಸಾರಿದರು. ಅಸ್ಪರ್ಶತೆ, ಮೇಲು-ಕೀಳು ಭಾವನೆ, ಪ್ರಾಣಿ ಬಲಿ ಮತ್ತು ಅನಗತ್ಯ ಆಚರಣೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಿದರು.
ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ ಎಂಬುದನ್ನು ಜಾಗೃತಗೊಳಿಸಿದರು. ಕೇರಳದ ವರ್ಕಲಾದಲ್ಲಿ ಶಿವಗಿರಿ ಮಠವನ್ನು ಸ್ಥಾಪಿಸಿ, ತಮ್ಮ ಕೊನೆಯ ದಿನಗಳವರೆಗೆ ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದರು ಎಂದು ನಾರಾಯಣ ಗುರುಗಳ ಬಗ್ಗೆ ಅರಿವಿಕೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ನ್ಯಾಯಾಧೀಶರಾದ ಬಿ.ಎಂ. ರಾಜು ಮಾತನಾಡಿ ನಮ್ಮ ಸಮಾಜದ ಗುರುವಾದ ನಾರಾಯಣ ಗುರುಗಳು ತಳಮಟ್ಟದ ಹಾಗೂ ಶೋಷಿತ ವರ್ಗವನ್ನು ಮುನ್ನೆಲೆಗೆ ತರಲು ಶ್ರಮಿಸಿದವರು. ಆದರೆ ಅವರ ದಿವ್ಯ ಜೀವನ ಚರಿತ್ರೆ ಇಂದಿಗೂ ಸಮಾಜದ ಹಲವರಿಗೆ ತಿಳಿದಿಲ್ಲ, ಅದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನವನ್ನು ಪೂರ್ಣಗೊಳಿಸಲು ಎಲ್ಲರೂ ತಮ್ಮ ಕೈಲಾದ ಆರ್ಥಿಕ ಬೆಂಬಲ ನೀಡಿ ನಮ್ಮತನವನ್ನು ಗಟ್ಟಿಗೊಳಿಸಬೇಕು"ಎಂದು ಮನವಿ ಮಾಡಿದರು.
ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಬಿ.ಎಂ. ಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ"ನಮ್ಮ ನೂತನ ಸಮುದಾಯ ಭವನಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ ಸರಕಾರದಿಂದ ಸಿಕ್ಕಿದ್ದ ಅನುದಾನದಲ್ಲಿ ಒಂದಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಇನ್ನು ಸಂಪೂರ್ಣ ಅನುದಾನ ನಮಗೆ ಸಿಗಬೇಕಾಗಿದೆ. ಹಾಗಾಗಿ ಅರ್ಧಕ್ಕಿರುವ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಜನಾಂಗದ ಪ್ರತಿಯೊಬ್ಬ ಬಂಧುಗಳ ಪೂರ್ಣ ಸಹಕಾರ ಹಾಗೂ ಧನಸಹಾಯ ಅಗತ್ಯವಿದೆ. ಎಲ್ಲರೂ ಕೈಜೋಡಿಸಿದರೆ ಬರುವ ವರ್ಷದ ನಾರಾಯಣ ಗುರು ಜಯಂತಿಯನ್ನು ಇದೇ ನೂತನ ಸಮುದಾಯ ಭವನದಲ್ಲೇ ಆಚರಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಭವನಕ್ಕಾಗಿ ಈ ಹಿಂದೆ ತಮ್ಮ ಒಂದು ಎಕರೆ ಸ್ಥಳವನ್ನು ಖರೀದಿಸಿ ಸಹಕಾರ ನೀಡಿದ ಮಹನೀಯರನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರಲ್ಲದೆ, "ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಮತ್ತು ಸಮಾಜದಲ್ಲಿ ಜನಾಂಗದ ಅಸ್ಮಿತೆಯನ್ನು ಗುರುತಿಸಲು ಒಗ್ಗಟ್ಟು ಅತಿ ಮುಖ್ಯ. ಸಮುದಾಯದ ಕಾರ್ಯಕ್ರಮಗಳಲ್ಲಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುನ್ನೆಲೆಗೆ ಬರಬೇಕು. ಜನಾಂಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಹಾಗೂ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ಮುಖ್ಯ ಭಾಷಣ ಮಾಡಿದ ವಾಗ್ಮಿ ಸ್ಮಿತೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ವೆಂಕಪ್ಪ ಪೂಜಾರಿ, ಗೋಣಿಕೊಪ್ಪದ ಸಾಂಭಶಿವ, ವಿರಾಜಪೇಟೆ ಎಸ್.ಎನ್.ಡಿ.ಪಿ. ಅಧ್ಯಕ್ಷರಾದ ನಾರಾಯಣ, ಆರೋಗ್ಯ ಇಲಾಖೆ ನಿವೃತ್ತ ನೌಕರರಾದ ಸರೋಜ ಗಣೇಶ್, ಅಬಕಾರಿ ಇಲಾಖೆ ನಿವೃತ್ತ ನೌಕರರಾದ ನಾರಾಯಣ, ನಿವೃತ್ತ ಬ್ಯಾಂಕ್ ಉದ್ಯೋಗಿ ಎಂ.ಕೆ. ಮೋಹನ್, ಸಂಘದ ಗೌರವಾಧ್ಯಕ್ಷರಾದ ಬಿ.ಆರ್. ರಾಜ, ಉಪಾಧ್ಯಕ್ಷರಾದ ಪುರುಷೋತ್ತಮ ಬಿ.ಎಸ್., ಕಾರ್ಯದರ್ಶಿ ಜನಾರ್ಧನ ಹಾಗೂ ಮಹಿಳಾ ಕಾರ್ಯಕಾರಿ ಸಮಿತಿಯ ಚಿತ್ರ ಜನಾರ್ಧನ್ ಉಪಸ್ಥಿತರಿದ್ದರು.
ಸಮಾಜದ ಪದಾಧಿಕಾರಿಗಳಾದ ಅಶ್ವತ್ ಬಿ.ಎಲ್., ಸತೀಶ್ ಪೂಜಾರಿ ಹಾಗೂ ಲಾಸ್ಯ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಮಾಜದ ನಿರ್ದೇಶಕರಾದ ನಾರಾಯಣ ಪೂಜಾರಿ, ಕಿಶೋರ್ ಸೇರಿದಂತೆ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.