ವಿಶ್ವಕರ್ಮ ಎಂದರೆ ಸೃಜನಶೀಲತೆಯ ಸಂಕೇತ: ಜಗದೀಶ್ ಜೋಡುಬೀಟಿ
admincoorgdaily

ಗೋಣಿಕೊಪ್ಪ: ವಿಶ್ವಕರ್ಮ ಎಂಬ ಹೆಸರು ಕೇವಲ ಒಂದು ಧಾರ್ಮಿಕ ಪರಿಕಲ್ಪನೆಯಲ್ಲ. ಅದು ಸೃಜನಶೀಲತೆ, ನಿರ್ಮಾಣಶಕ್ತಿ, ಕೌಶಲ್ಯ ಮತ್ತು ಪರಿಶ್ರಮದ ಸಂಕೇತವಾಗಿದೆ ಎಂದು ಪತ್ರಕರ್ತ ಹಾಗೂ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಅಧ್ಯಕ್ಷ ಜಗದೀಶ್ ಜೋಡುಬೀಟಿ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಪಿ.ಎಸ್. ಬೀರಪ್ಪ, ದಿವಂಗತ ಪುಟ್ಟಮ್ಮ ಹಾಗೂ ದಿವಂಗತ ಹೆಬ್ಬಾಲೆ ನಂಜಾಚಾರ್ ದತ್ತಿ ಕಾರ್ಯಕ್ರಮದಲ್ಲಿ 'ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ' ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ವಿಶ್ವಕರ್ಮರು ಕೇವಲ ವಸ್ತುಗಳನ್ನು ನಿರ್ಮಿಸಿದವರಲ್ಲ. ಅವರು ಸಮಾಜದ ಬದುಕಿಗೆ ರೂಪ ಕೊಟ್ಟವರು. ಕಲ್ಲಿಗೆ ಕಲೆಯ ರೂಪ ನೀಡಿದವರು, ಮರಕ್ಕೆ ಜೀವ ತುಂಬಿದವರು, ಲೋಹಕ್ಕೆ ಉಪಯುಕ್ತತೆ ನೀಡಿದವರು. ತಮ್ಮ ಕೌಶಲ್ಯದ ಮೂಲಕ ನಾಗರಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿಶ್ವಕರ್ಮ ಸಮುದಾಯದ ಸೇವೆಯನ್ನು ಸ್ಮರಿಸಿದರು.
ಭಾರತದ ಸಾಂಪ್ರದಾಯಿಕ ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ವಿಶ್ವಕರ್ಮರ ಪಾತ್ರ ದೊಡ್ಡದು. ಒಂದು ಗ್ರಾಮದಲ್ಲಿ ಕೃಷಿ ಚಟುವಟಿಕೆ ನಡೆಯಬೇಕಾದರೆ ರೈತನಿಗೆ ಕೃಷಿ ಉಪಕರಣಗಳು ಬೇಕು. ಮನೆ ನಿರ್ಮಾಣವಾಗಬೇಕಾದರೆ ಬಡಿಗರು, ಕಮ್ಮಾರರು ಸೇರಿದಂತೆ ವಿವಿಧ ಕುಶಲಕರ್ಮಿಗಳ ಅಗತ್ಯವಿದೆ. ಮದುವೆ ಸಮಾರಂಭಗಳಿಗೆ ಆಭರಣಗಳು ಬೇಕು. ಧಾರ್ಮಿಕ ಆಚರಣೆಗಳಿಗೆ ಲೋಹದ ಪಾತ್ರೆಗಳು ಮತ್ತು ಪೂಜಾ ಸಾಮಗ್ರಿಗಳು ಅಗತ್ಯ. ಹೀಗೆ ಮಾನವನ ಹುಟ್ಟಿನಿಂದ ಹಿಡಿದು ಬದುಕಿನ ಪ್ರತಿಯೊಂದು ಹಂತದಲ್ಲಿಯೂ ವಿಶ್ವಕರ್ಮ ಸಮುದಾಯದ ಕೌಶಲ್ಯದ ಸ್ಪರ್ಶವಿದೆ. ಈ ಎಲ್ಲ ಕಾರಣಗಳಿಂದ ಅವರು ಸಮಾಜದ ದೈನಂದಿನ ಬದುಕಿನ ಜೀವನಾಡಿಯಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಕೆ. ಕುಮಾರ್ ಅವರು 'ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ' ವಿಷಯವಾಗಿ ಉಪನ್ಯಾಸ ನೀಡಿದರು.
ಶಿಕ್ಷಣವೆಂಬುದು ಪ್ರತಿಯೊಬ್ಬ ಮನುಷ್ಯನ ಬದುಕಿನ ಅತ್ಯಮೂಲ್ಯ ಆಸ್ತಿ. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ. ಅದು ಇಡೀ ಸಮಾಜದ ಅಭಿವೃದ್ಧಿಗೆ ಹಾಕುವ ಭದ್ರ ಬುನಾದಿಯಾಗಿದೆ. ಒಂದು ಹೆಣ್ಣು ಮಗು ಶಿಕ್ಷಣ ಪಡೆದರೆ ಒಂದು ಕುಟುಂಬವೇ ಶಿಕ್ಷಣ ಪಡೆದಂತೆ ಎಂಬ ಮಾತು ಅಕ್ಷರಶಃ ಸತ್ಯ.
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದವು. ಹೆಣ್ಣು ಮಕ್ಕಳು ಮನೆಯ ಕೆಲಸ, ಕುಟುಂಬದ ಜವಾಬ್ದಾರಿ ಮತ್ತು ಮಕ್ಕಳ ಪಾಲನೆಗೆ ಮಾತ್ರ ಸೀಮಿತವಾಗಿರಬೇಕು ಎಂಬ ಮನೋಭಾವ ಸಮಾಜದಲ್ಲಿತ್ತು. ಆದರೆ ಇಂದು ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಆಡಳಿತ, ರಾಜಕೀಯ, ಕ್ರೀಡೆ ಹಾಗೂ ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಉದ್ಘಾಟಿಸಿ ಮಾತನಾಡಿ, ಮನಸ್ಸಿನ ಇಚ್ಛೆಗೆ ಅನುಗುಣವಾಗಿ ಕನ್ನಡ ಮಾತನಾಡುವುದನ್ನು ಪ್ರೀತಿಸಬೇಕು. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪರಭಾಷಾ ವ್ಯಾಮೋಹ ಹೆಚ್ಚಾಗುತ್ತಿದೆ. ಇತರ ರಾಜ್ಯಗಳಿಗೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಬೆಳವಣಿಗೆ ಕಾಣುತ್ತಿಲ್ಲ. ಹೀಗಾಗಿ ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆ ಆತಂಕ ಹೆಚ್ಚಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಕುಶಾಲಪ್ಪ ಮಾತನಾಡಿ, ಪ್ರತಿಯೊಂದು ಭಾಷೆಯನ್ನೂ ಕಲಿಯುವುದು ಅಗತ್ಯ. ಆದರೆ ಕನ್ನಡವನ್ನು ಪ್ರೀತಿಸುವುದನ್ನು ಮತ್ತು ಮಾತನಾಡುವುದನ್ನು ಬದುಕಿನ ಉಸಿರಾಗಿಸಿಕೊಳ್ಳಬೇಕು ಎಂದು ಹೇಳಿದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಕಟ್ಟುವ ಕೆಲಸ ಮಕ್ಕಳ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಓದಿನ ಮೂಲಕ ಮಕ್ಕಳು ಸಾಬೀತುಪಡಿಸಬೇಕು. ಈ ನಾಡಿನಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನವಿದೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಸಮಾಜದಲ್ಲಿ ಸಮಾನತೆಯ ಮಹತ್ವವನ್ನು ಅರಿತು, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿನಿಧಿಗಳ ಸದುಪಯೋಗ ಹಾಗೂ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹದ ಕುರಿತು ವಿವರಿಸಿದರು. ಸಾಹಿತ್ಯ ಪರಿಷತ್ತು ಇನ್ನಷ್ಟು ದತ್ತಿನಿಧಿಗಳನ್ನು ಹೆಚ್ಚಿಸುವ ಕನಸು ಹೊಂದಿದೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ. ಲೋಕೇಶ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಕೊಡುಗೆಯನ್ನು ತಿಳಿದುಕೊಳ್ಳಬೇಕಾದರೆ ಬೇಲೂರು ಮತ್ತು ಹಳೇಬೀಡಿನ ಶಿಲ್ಪಕಲೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ವಿ.ಟಿ. ಮಂಜುನಾಥ್, ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ. ಮಣಿಕಂಠ, ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕಾಮತ್, ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ, ಸದಸ್ಯ ಚಂದನ್ ಕಾಮತ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶನಿವಾರಸಂತೆಯ ಶ್ರೀ ವಿಶ್ವೇಶ್ವರ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಕೆ. ನವ್ಯ ಅವರನ್ನು ಸನ್ಮಾನಿಸಲಾಯಿತು.