Kodagu

ಕೊಡ್ಲಿಪೇಟೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಶಾಸಕ ಮಂತರ್ ಗೌಡ ಭಾಗಿ, ಸಮುದಾಯ ಭವನಕ್ಕೆ ಅನುದಾನ ಭರವಸೆ

admincoorgdaily

ಕೊಡ್ಲಿಪೇಟೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಶಾಸಕ ಮಂತರ್ ಗೌಡ ಭಾಗಿ, ಸಮುದಾಯ ಭವನಕ್ಕೆ ಅನುದಾನ ಭರವಸೆ
1002453295.jpg


ಕೊಡ್ಲಿಪೇಟೆ: ವಿಶ್ವಕರ್ಮ ಜಯಂತಿ ಅಂಗವಾಗಿ ಕೊಡ್ಲಿಪೇಟೆಯ ಚೌಡೇಶ್ವರಿ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯವು ತನ್ನ ಕಲೆ, ಕೌಶಲ್ಯ ಮತ್ತು ಶ್ರಮದ ಮೂಲಕ ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ ಎಂದು ಅವರು ಸ್ಮರಿಸಿದರು. ಪಾರಂಪರಿಕ ಕಲೆ ಮತ್ತು ವೃತ್ತಿ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಹಾಗೂ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಬಾಂಧವರು ಸಮುದಾಯ ಭವನ ಕೋರಿ ಶಾಸಕರಿಗೆ ಮನವಿ ಸಲ್ಲಿಸಿದರು. ಸ್ಥಳ ಗುರುತಿಸಿದರೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕರು ಘೋಷಿಸಿದರು.

ಕೊಡ್ಲಿಪೇಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಮತ್ತು ಔರಂಗಜೇಬ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಹೋಬಳಿ ವಿಶ್ವಕರ್ಮ ಸಮಿತಿ ಅಧ್ಯಕ್ಷ ಕೆ.ಎ. ನಾಗೇಶ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವಾಧ್ಯಕ್ಷ ಸುಬ್ರಹ್ಮಣ್ಯಾಚಾರ್ ವಂದಿಸಿದರು.

ವೇದಿಕೆಯಲ್ಲಿ ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆಡಿಪಿ ಸದಸ್ಯ ವೇದಕುಮಾರ್, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹರೀಶ್, ಹಿರಿಯರಾದ ಜಯರಾಂ ಆಚಾರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಅರ್ಚಕರಾದ ಸಂದೀಪ್ ವಿಶೇಷ ಪೂಜಾ ವಿಧಿವಿಧಾನ ನೆರವೇರಿಸಿದರು. ಸಮಿತಿಯ ಖಜಾಂಚಿ ಸಂದೀಪ್ ಆಚಾರ್ಯ ದಂಪತಿ ಪೂಜಾ ಸೇವೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಿತಿ ಕಾರ್ಯದರ್ಶಿಗಳಾದ ಶಿವಕುಮಾರ್, ಕೇಶವ ಡಿ.ಜಿ., ಆಚರಣಾ ಸಮಿತಿ ಪದಾಧಿಕಾರಿಗಳಾದ ರಮೇಶ್, ಸಂತೋಷ್, ನವೀನ, ರವಿಕುಮಾರ್, ಹರೀಶ್ ಮತ್ತು ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಕಾರ್ಮಿಕ ಇಲಾಖೆಯ ಸಂಚಾರಿ ಆರೋಗ್ಯ ಘಟಕದ ವಾಹನದಲ್ಲಿ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.