Kodagu

ಮತದಾರರು ಬಿಜೆಪಿಯನ್ನು ಕೈಬಿಟ್ಟಿಲ್ಲ; ಕೆ.ಜಿ. ಬೋಪಯ್ಯ

admincoorgdaily

ಮತದಾರರು ಬಿಜೆಪಿಯನ್ನು ಕೈಬಿಟ್ಟಿಲ್ಲ; ಕೆ.ಜಿ. ಬೋಪಯ್ಯ
1002801021.jpg


ವಿರಾಜಪೇಟೆ:ರಾಜ್ಯದ ಜನತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಧೋರಣೆಗಳು ಮತ್ತು ಇಲಾಖೆ ಸೇರಿದಂತೆ ಯೋಜನೆಗಳ ಅನುಷ್ಠಾನಗಳಲ್ಲಿನ ವೈಫಲ್ಯದಿಂದಾಗಿ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಆರೋಪ ಮಾಡಿದರು.

ಅಮ್ಮತ್ತಿ ಸಮೀಪದ ಇಂಜಿಲಗೆರೆಯ ಪುಲಿಯೇರಿ ಗ್ರಾಮದ ಎಸ್.ಎನ್.ಡಿ.ಪಿ. ಶಾಖೆಯ ಸಭಾಂಗಣದಲ್ಲಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತವು ಜನ ವಿರೋಧಿ ಆಡಳಿತವಾಗಿದ್ದು, ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದರು.

ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನದ ಹೆಸರಿನಲ್ಲಿ ರಾಜ್ಯ ಬೊಕ್ಕಸ ಖಾಲಿಯಾಗಿದೆ. ಇದನ್ನು ಮರೆಮಾಚಲು ಹಾಲು ದರ, ಬಸ್ಸು ದರ ಸೇರಿದಂತೆ ಇತರ ದಿನ ಉಪಯೋಗಿ ವಸ್ತುಗಳ ಬೆಲೆ ಏರಿಕೆಗೊಳಿಸಿ ಜನತೆಯ ಜೀವನ ಅಸ್ತವ್ಯಸ್ತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ರೂಪಿಸಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ದೀರ್ಘಾವಧಿ ಯೋಜನೆಗಳಿಗೆ ನೀಡುತ್ತಿರುವ ಅನುದಾನಗಳಿಂದ ಪ್ರಸ್ತುತ ಕಾಮಗಾರಿಗಳು ನಡೆಯುತ್ತಿವೆ. ಆದರೆ ಹಣದ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯ ಸರ್ಕಾರವು ನಾವೇ ಮಾಡುತ್ತಿರುವುದು ಎಂದು ಬಿಂಬಿಸಿಕೊಂಡು ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದೆ ಎಂದು ದೂರಿದರು.

ಮತದಾರರು ಬಿ.ಜೆ.ಪಿ. ಪಕ್ಷವನ್ನು ಇನ್ನೂ ಕೂಡ ಬಿಟ್ಟಿರುವುದಿಲ್ಲ. ಬಿ.ಜೆ.ಪಿ. ಪಕ್ಷ ಆಡಳಿತದ ಅವಧಿಯಲ್ಲಿ ಎಲ್ಲಾ ಜನಾಂಗದವರಿಗೂ ಸಮಾನವಾಗಿ ಅನುದಾನಗಳನ್ನು ನೀಡುತ್ತಿದ್ದೆವು, ಯಾವುದೇ ತಾರತಮ್ಯ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ಬರಗಾಲದ ಹೆಸರಿನಲ್ಲಿ ನೀಡುತ್ತಿರುವ ಸಣ್ಣ ಪ್ರಮಾಣದ ಪರಿಹಾರಕ್ಕೆ ಹಲವಾರು ಷರತ್ತುಗಳನ್ನು ವಿಧಿಸುತ್ತಿರುವುದು ಖಂಡನೀಯ ಎಂದರು. ಬಿ.ಜೆ.ಪಿ. ಸರ್ಕಾರವು ಅಧಿಕಾರದಲ್ಲಿರುವ ಸಂದರ್ಭದಲ್ಲಿ ರೈತರಿಗೆ ಕಾಫಿ ಹಾಗೂ ಭತ್ತದ ಕೃಷಿಕರಿಗೆ ಸುಮಾರು ರೂ. 50 ಸಾವಿರಕ್ಕೂ ಅಧಿಕ ಪರಿಹಾರವನ್ನು ನೀಡಲಾಗಿತ್ತು ಎಂದು ವಿವರಿಸಿದರು. ಕೇಂದ್ರ ಸರ್ಕಾರವು ಕೂಡ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ವಿರಾಜಪೇಟೆ ತಾಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ,
ಇತ್ತೀಚೆಗೆ ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಯೊಬ್ಬರು ನಿವೃತ್ತಿ ಹೊಂದಿದ್ದು, ಅವರಿಗೆ ಕ್ಷೇತ್ರದ ಶಾಸಕರು ಸನ್ಮಾನ ಮಾಡುವ ಹೆಸರಿನಲ್ಲಿ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಬಿ.ಜೆ.ಪಿ. ಪಕ್ಷದ ಕೆಲವು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.

ಕಾಂಗ್ರೆಸ್ ಅಮ್ಮತ್ತಿ ವ್ಯಾಪ್ತಿಯ ಪುಲಿಯೇರಿ ಇಂಜಿಲಗೆರೆ ಗ್ರಾಮದಲ್ಲಿ ಬಲಿಷ್ಠವಾಗಿಲ್ಲ, ಅದು ಬಿ.ಜೆ.ಪಿ. ಪಕ್ಷದ ಭದ್ರಕೋಟೆಯಾಗಿದೆ ಎಂದರು. ಇದಲ್ಲದೆ ಬಿಟ್ಟಂಗಾಲ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರು ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರಲ್ಲ ಎಂದು ತಿಳಿಸಿದರು.

ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳು ಗುಂಡಿ ಹೊಂಡಗಳಿಂದ ಕೂಡಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮುಂಬರುವ 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡದಿರುವ ಪಕ್ಷದಲ್ಲಿ ರಸ್ತೆ ರೊಕೋ ಮಾಡುವುದಾಗಿ ಎಚ್ಚರಿಸಿದರು.

ಅಮ್ಮತ್ತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ಪ್ರಶಾಂತ್ ಮಾತನಾಡಿ,
ಅಮ್ಮತ್ತಿ ಪಂಚಾಯಿತಿಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ಆಡಳಿತ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಇತ್ತೀಚೆಗೆ ಪುಲಿಯೇರಿ ಇಂಜಿಲಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವ್ಯಕ್ತಿಯೊಬ್ಬರು ತಪ್ಪು ಮಾಹಿತಿ ನೀಡಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರಿಗೆ ಆಮಿಷವೊಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪಕ್ಷದ ಕಾರ್ಯಕರ್ತರು ಕಿವಿಗೊಡಬಾರದು ಎಂದು ಕರೆ ನೀಡಿದರು.

ಸಭೆಯಲ್ಲಿ ವಿರಾಜಪೇಟೆ ತಾಲೂಕು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿ.ಜೆ.ಪಿ. ಪಕ್ಷದ ಪದಾಧಿಕಾರಿಗಳಾದ ವಸಂತ್, ನಿತೀಶ್, ರೀಶಾ ಸುರೇಂದ್ರ, ಸುಗುಣ, ಪ್ರಸಾದ್ ಚೆಂಗಪ್ಪ, ಶಾಂತ ಸೇರಿದಂತೆ ಇನ್ನಿತರರು ಹಾಜರಿದ್ದರು. ರೀಶಾ ಸುರೇಂದ್ರ ಸ್ವಾಗತಿಸಿ ವಂದಿಸಿದರು.