ಹಾರಂಗಿ ನಾಲೆಗಳಿಗೆ ನೀರು ಬಿಡುಗಡೆ
admincoorgdaily

ಮಡಿಕೇರಿ:-ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸಲು ತಿರ್ಮಾನಿಸಲಾಗಿದೆ.
ಅದರಂತೆ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹಣೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಬರಬಹುದಾದ (ಕಳೆದ 20 ವರ್ಷಗಳ ಕನಿಷ್ಟ ಒಳಹರಿವಿನ ಪ್ರಮಾಣವನ್ನು ಆಧರಿಸಿ) ನಿರೀಕ್ಷಿತ ಒಳಹರಿವಿನ ಪರಿಮಾಣ ಪರಿಗಣಿಸಿ ನವೆಂಬರ್ 30 ರ ವರೆಗೆ ಹಾರಂಗಿ ಬಲದಂಡೆ ಮತ್ತು ಎಡದಂಡೆ ನಾಲೆಗಳಲ್ಲಿ ಕಟ್ಟು ನೀರಿನ ಪದ್ಧತಿಯಲ್ಲಿ (ಮಾಹೆಯಲ್ಲಿ 20 ದಿನ ನೀರನ್ನು ಹರಿಸುವುದು ಉಳಿದ 10 ದಿನ ನೀರನ್ನು ನಿಲ್ಲಿಸುವುದು) ಕೇವಲ ಖಾರೀಫ್ ಅರೆ-ಖುಷ್ಕಿ ಬೆಳೆಗಳಿಗೆ ಮಾತ್ರ ನೀರು ಹರಿಸಲಾಗುವುದು ಎಂದು ಹಾರಂಗಿ ಜಲಾಶಯದ ಅಧೀಕ್ಷಕ ಎಂಜಿನಿಯರ್ ಸತೀಶ್ ಅವರು ತಿಳಿಸಿದ್ದಾರೆ.
ಜಲಾಶಯಕ್ಕೆ ನೀರಿನ ಒಳಹರಿವು ಕ್ಷೀಣಿಸಿದ್ದಲ್ಲಿ ಪರಿಷ್ಕರಣೆಗೆ ಒಳಪಡುತ್ತದೆ. ಹಾರಂಗಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸುವಂತೆ ಅಧೀಕ್ಷಕ ಎಂಜಿನಿಯರ್ ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಶೇಷ ಮನವಿ: ಹಾರಂಗಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಆದೇಶ ಆಧರಿಸಿ ಯಾವುದೇ ದೀರ್ಘಾವಧಿ ಬೆಳೆಯಾದ ಭತ್ತ ಮತ್ತು ಕಬ್ಬು ಬೆಳೆ ಬೆಳೆಯದಂತೆ ರೈತ-ಬಾಂಧವರಲ್ಲಿ ವಿನಂತಿಸಲಾಗಿದೆ.
ಭತ್ತ ಮತ್ತು ಕಬ್ಬಿಗೆ ಬದಲಾಗಿ ಅರೆ-ಖುಷ್ಕಿ ಬೆಳೆಗಳಾದ ಕಡಿಮೆ ನೀರು ಬಳಸಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ಈ ಮೂಲಕ ತಿಳಿಸಲಾಗಿದೆ.