ಕೊಡಗಿನಲ್ಲಿ ವನ್ಯಜೀವಿ ಹಾವಳಿ: ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಸರ್ಕಾರ, ಅರಣ್ಯ ಇಲಾಖೆಗೆ ರಂಜಿ ಪೂಣಚ್ಚ ಪ್ರಶ್ನೆ
admincoorgdaily

ವಿರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾಗೂ ಹುಲಿ ದಾಳಿಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಅವರು, ಜನರ ಹಾಗೂ ಸಾಕುಪ್ರಾಣಿಗಳ ಜೀವ ರಕ್ಷಣೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
"ಜಿಲ್ಲೆಯಲ್ಲಿ ರೈತರು, ಕಾರ್ಮಿಕರು ಹಾಗೂ ಸಾಕುಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ನಿರಂತರವಾಗಿ ವನ್ಯಜೀವಿ ದಾಳಿಗಳು ನಡೆಯುತ್ತಿದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಜನರ ಜೀವ ಹೋದ ನಂತರ ಕೇವಲ ಪರಿಹಾರ ನೀಡುವುದಷ್ಟೇ ಸರ್ಕಾರದ ಜವಾಬ್ದಾರಿಯಲ್ಲ, ಜೀವಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮೊದಲ ಆದ್ಯತೆಯಾಗಬೇಕು" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
"ಇದು ರಾಜಕೀಯ ಮಾಡುವ ಸಮಯವಲ್ಲ. ಜಿಲ್ಲೆಯ ಶಾಸಕರು ರಾಜಕೀಯವನ್ನು ಬದಿಗಿಟ್ಟು ಒಮ್ಮೆ ಕೊಡಗಿನ ಜನರ ಮತ್ತು ಸಾಕುಪ್ರಾಣಿಗಳ ಜೀವದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಜನರ ಜೀವ ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದು ಕೊಡಗಿನ ಜನರ ಬದುಕು ಮತ್ತು ಜೀವದ ಪ್ರಶ್ನೆ" ಎಂದು ಅವರು ಹೇಳಿದ್ದಾರೆ.