Kodagu

ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ; ಗ್ರಾಮಸ್ಥರ ಬೃಹತ್ ಪ್ರತಿಭಟನೆ!

admincoorgdaily

ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ; ಗ್ರಾಮಸ್ಥರ ಬೃಹತ್ ಪ್ರತಿಭಟನೆ!
ಮಡಿಕೇರಿ: ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಜಿಲ್ಲಾ ಪಂಚಾಯಿತಿ ಜಂಕ್ಷನ್‌ನಲ್ಲಿ ಗಾಳಿಬೀಡು, ಕೆ.ನಿಡುಗಣೆ ಮತ್ತು ವಣಚಲು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಗಾಳಿಬೀಡು ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ದಿನಾಂಕ ೧೪-೧೧-೨೦೨೫ ರಂದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು.

 ೧೪-೧೧-೨೦೨೬ಕ್ಕೆ ಗುದ್ದಲಿ ಪೂಜೆ ನೆರವೇರಿ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಆದರೆ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಾರ್ವಜನಿಕರಿಗೆ ನಿರೀಕ್ಷಿತ ರಸ್ತೆ ಸೌಲಭ್ಯ ದೊರೆತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗಾಳಿಬೀಡು ಗ್ರಾಮದ ಗ್ರಾಮಸ್ಥರಾದ ದಿಶಾಂತ್ ಮಾತನಾಡಿ, ಶಾಸಕರು ಈ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂಬ ಮಾಹಿತಿ ನಮಗಿದೆ. ಹಾಗಾದರೆ ಈಗ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು? ಟೆಂಡರ್ ಪಡೆದ ಗುತ್ತಿಗೆದಾರರು ತಮ್ಮ ಜವಾಬ್ದಾರಿಯನ್ನು ಯಾವಾಗ ನಿರ್ವಹಿಸುತ್ತಾರೆ? ಕಾಮಗಾರಿ ಆರಂಭಿಸಲು ಏನು ಅಡ್ಡಿಯಿದೆ? ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಕೈಗೊಂಡಿರುವ ಕ್ರಮಗಳೇನು? ಇವುಗಳಿಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಉತ್ತರ ಬೇಕಾಗಿದೆ ಎಂದು ಆಗ್ರಹಿಸಿದರು.

ಸುಮಾರು ೨.೩೦ ಗಂಟೆಗೆ ಕಾಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕೆ.ಟಿ.ಪ್ರಭು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಅವರು, ನ.೧೬ರಂದು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಉಮೇಶ್, ಪೂಜಾರಿರ ಸಂತೋಷ್, ಕೆ.ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಡೀನ್ ಬೋಪಣ್ಣ, ಜಯಂತಿಶೆಟ್ಟಿ ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.