Kodagu

ಮೀನುಗಳಿಗೆ ಆಹಾರ ಹಾಕಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು

admincoorgdaily

ಮೀನುಗಳಿಗೆ ಆಹಾರ ಹಾಕಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು
ಗೋಣಿಕೊಪ್ಪ: ಮೀನುಗಳಿಗೆ ಆಹಾರ ಹಾಕಲು ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಟಿ. ಶೆಟ್ಟಿಗೇರಿ, ತಾವಳಗೇರಿ ಗ್ರಾಮದ ನಿವಾಸಿ ಮಚ್ಚಿಮಾಡ ನಾಣಯ್ಯ (ಮರಿ) ಅವರ ಧರ್ಮಪತ್ನಿ ಹೇಮಾವತಿ (40) ಮೃತಪಟ್ಟ ದುರ್ದೈವಿ.

ನಾಣಯ್ಯ ಅವರು ತಮ್ಮ ತೋಟದ ಕೆರೆಯಲ್ಲಿ ಮೀನು ಸಾಕಣೆ ನಡೆಸುತ್ತಿದ್ದು, ಎಂದಿನಂತೆ ಶನಿವಾರ ಬೆಳಗ್ಗೆ ಹೇಮಾವತಿ ಅವರು ಮೀನುಗಳಿಗೆ ಆಹಾರ ಹಾಕಲು ಕೆರೆ ಬಳಿ ತೆರಳಿದ್ದರು. ಕೆರೆ ಇಳಿಜಾರು ಇದ್ದ ಕಾರಣ ಕಾಲು ಜಾರಿ ಕೆರೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನೆ ತಿಳಿದು ಸ್ಥಳೀಯರು ಕೆರೆ ಬಳಿ ಧಾವಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಮೃತ ಹೇಮಾವತಿ ಅವರು ಟಿ. ಶೆಟ್ಟಿಗೇರಿ ಗ್ರಾ.ಪಂ ಮಾಜಿ ಸದಸ್ಯೆಯಾಗಿದ್ದು, ಪತಿ ನಾಣಯ್ಯ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.