ಮೀಸಲು ಅರಣ್ಯದಲ್ಲಿ ಕಸ ಚೆಲ್ಲಿದ ಮಹಿಳೆಗೆ 10 ಸಾವಿರ ದಂಡದ ಬಿಸಿ
admincoorgdaily

ಕುಶಾಲನಗರ:ಚಿಕ್ಲಿಹೊಳೆ ಜಲಾಶಯದ ರಸ್ತೆ ಬದಿಯ ಮೀಸಲು ಅರಣ್ಯದಲ್ಲಿ ಕಸ ಎಸೆದ ಮಹಿಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಗ್ರಾಮ ಪಂಚಾಯಿತಿ ಮೂಲಕ ದಂಡ ವಿಧಿಸಿರುವ ಘಟನೆ ಸೋಮವಾರ ನಡೆದಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಳ್ಳಿ ಶಾಖೆಯ ವ್ಯಾಪ್ತಿಗೆ ಒಳಪಡುವ ಚಿಕ್ಲಿಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ 7ನೇ ಹೊಸಕೋಟೆ ನಿವಾಸಿಯೊಬ್ಬರು ಪ್ಲಾಸ್ಟಿಕ್ ಕಸಗಳನ್ನು ಎಸೆದಿರುವುದು ಅರಣ್ಯ ಇಲಾಖೆ ವತಿಯಿಂದ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಮೀನುಕೊಳ್ಳಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ದೂರು ನೀಡಿದ ಮೇರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳೆಗೆ ರೂ. 10 ಸಾವಿರ ದಂಡ ವಿಧಿಸಿದೆ.