Kodagu

ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಿಂಪಡೆಯಲು ವಿಮೆನ್ ಇಂಡಿಯಾ ಮೂವ್‌ಮೆಂಟ್ ಒತ್ತಾಯ

admincoorgdaily

ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಿಂಪಡೆಯಲು ವಿಮೆನ್ ಇಂಡಿಯಾ ಮೂವ್‌ಮೆಂಟ್ ಒತ್ತಾಯ
ಮಡಿಕೇರಿ ನ.6 : ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ನಿರ್ಧಾರವನ್ನು ತಕ್ಷಣ ಹಿಂಪಡೆದು ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ನ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.

ಈ ಸಂದರ್ಭ ಮಾತನಾಡಿದ ಸಂಘಟನೆಯ ಪ್ರಮುಖರು, ಹಾಲು ಕೇವಲ ಆಹಾರ ಪದಾರ್ಥವಲ್ಲ. ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ವೃದ್ಧರಿಗೆ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಹಾಲಿನ ಬೆಲೆ ಹೆಚ್ಚಳದಿಂದ ಮಕ್ಕಳ ಪೌಷ್ಟಿಕ ಆಹಾರದ ಲಭ್ಯತೆ ಮೇಲೆ ಪರಿಣಾಮ ಬೀರುವುದಲ್ಲದೆ, ಕುಟುಂಬದ ದೈನಂದಿನ ಖರ್ಚು ನಿರ್ವಹಿಸುವ ಮಹಿಳೆಯರ ಮೇಲೂ ಹೆಚ್ಚುವರಿ ಆರ್ಥಿಕ ಒತ್ತಡ ಉಂಟಾಗಲಿದೆ ಎಂದು ತಿಳಿಸಿದರು.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ ಎಂದರು.

ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿರುವಂತೆ ಗ್ರಾಹಕರ ಹಿತಾಸಕ್ತಿಯನ್ನೂ ರಕ್ಷಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವುದರ ಜೊತೆಗೆ ಗ್ರಾಹಕರಿಗೆ ಹೊರೆಯಾಗದ ಸಮತೋಲಿತ ಬೆಲೆ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಲಾಯಿತು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಿಂಪಡೆಯುವುದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲು ಒದಗಿಸುವುದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆಹಾರ ಭದ್ರತೆ ಹಾಗೂ ಮಕ್ಕಳ ಪೌಷ್ಟಿಕತೆಯನ್ನು ಕಾಪಾಡಲು ವಿಶೇಷ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ವಿಮೆನ್ ಇಂಡಿಯಾ ಮೂವ್‌ಮೆಂಟ್ ನ ಕೊಡಗು ಜಿಲ್ಲಾ ಉಪಾಧ್ಯಕ್ಷೆ ಜಾಕಿಯಾ, ಕಾರ್ಯದರ್ಶಿ ತಾಹಿರಾ ಅಲಿ, ಜಂಟಿ ಕಾರ್ಯದರ್ಶಿ ಮೇರಿ ವೇಗಾಸ್, ಖಜಾಂಚಿ ಸಂಸುನ್ನಿಸಾ ಹಾಗೂ ಸದಸ್ಯೆ ಜೆಸ್ಸಿಲಾ ಹಾಜರಿದ್ದರು.