Kodagu

ಐತಿಹಾಸಿಕ ಮಹಿಳಾ ದಸರಾಗೆ ನಾರಿಯರ ಮೆರುಗು: ವೈವಿಧ್ಯಮಯ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

admincoorgdaily

ಐತಿಹಾಸಿಕ ಮಹಿಳಾ ದಸರಾಗೆ ನಾರಿಯರ ಮೆರುಗು: ವೈವಿಧ್ಯಮಯ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
1002656865.jpg


ಮಡಿಕೇರಿ:-ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಸರಾ ಸಂಭ್ರಮದಿಂದ ನಡೆಯಿತು. ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಯುವತಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರುಗು ತಂದರು. 

      ದಸರಾ ಮಹೋತ್ಸವದ ಅಂಗವಾಗಿ ಮಹಿಳೆಯರ ಪ್ರತಿಭೆ ಹಾಗೂ ಸಾಧನೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಪ್ರಿಯರ ಮನ ಸೆಳೆದವು. 

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ಮಹಿಳೆ ಎಂದರೆ ಕೇವಲ ಕುಟುಂಬದ ಕಣ್ಣಿನ ಬೆಳಕಲ್ಲ, ಜಗತ್ತಿನ ಸಮೃದ್ಧಿಯ ಸಂಕೇತ. ಮಹಿಳೆಯ ಉಪಸ್ಥಿತಿ, ಪ್ರೀತಿ ಹಾಗೂ ಕಾಳಜಿ ಇರುವೆಡೆ ಚೈತನ್ಯ ಮತ್ತು ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಿದರು.

     ದೇಶ ಹಾಗೂ ಸಮಾಜದ ಸವಾರ್ಂಗೀಣ ಪ್ರಗತಿಗೆ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು ಅತ್ಯಗತ್ಯ. ಶಿಕ್ಷಣ ಪಡೆದ ಮಹಿಳೆ ತನ್ನ ಕುಟುಂಬವನ್ನು ಅಲ್ಲದೆ ಇಡೀ ಸಮಾಜವನ್ನೇ ತಿದ್ದಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಬಲ್ಲಳು ಎಂದರು.

       ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು. ಬದುಕಿನಲ್ಲಿ ಎದುರಾಗುವ ಕಷ್ಟ-ನಷ್ಟಗಳು ಹಾಗೂ ಜವಾಬ್ದಾರಿಗಳ ಭಾರವನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ, ತಾಳ್ಮೆಯಿಂದ ಎಲ್ಲವನ್ನೂ ಹಗುರವಾಗಿ ಸ್ವೀಕರಿಸಿ ಮುನ್ನಡೆದರೆ ಕುಟುಂಬ ಮತ್ತು ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.

      ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಸಮಾಜಸೇವಕರಾದ ಎಡಿಕೇರಿ ಪ್ರಸನ್ನ, ಮಹಿಳೆಯರು ಅಬಲೆಯರಲ್ಲ, ಸಬಲರು. ಮಹಿಳೆಯರು ಸಬಲರಾಗಲು ಶಿಕ್ಷಣವೇ ಪ್ರಮುಖ ಕಾರಣ. ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗುಣಮಟ್ಟದ ಶಿಕ್ಷಣ ಅಚಲವಾದ ಬುನಾದಿಯಾಗಿದೆ. ಆದ್ದರಿಂದ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

      ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಗಮನಾರ್ಹ ಸಾಧನೆ ಮಾಡಿದ್ದು, ದೇಶ ಹಾಗೂ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಕೊಡಗಿನಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾನ ಸ್ವಾತಂತ್ರ್ಯ ಹಾಗೂ ಅವಕಾಶಗಳು ದೊರೆಯುತ್ತಿವೆ ಎಂದರು.

      ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಮಾತನಾಡಿ, ಎಲ್ಲಿ ನಾರಿಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಆದರೆ ಮಹಿಳೆಯರನ್ನು ಕೇವಲ ಪೂಜಿಸುವುದಕ್ಕೆ ಸೀಮಿತಗೊಳಿಸದೆ, ಸಮಾಜದಲ್ಲಿ ಅವರಿಗೆ ಸಮಾನ ಅವಕಾಶ ಹಾಗೂ ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದು ಅಗತ್ಯ ಎಂದು ಹೇಳಿದರು.

      ಮಡಿಕೇರಿಯ ಮಹಿಳಾ ದಸರಾಕ್ಕೆ ತನ್ನದೇ ಆದ ವಿಶೇಷತೆಯಿದೆ. ಇದು ಕೇವಲ ಹಬ್ಬವಲ್ಲ. ಮಹಿಳೆಯರ ಪ್ರತಿಭೆ, ಸಾಧನೆ ಹಾಗೂ ಆತ್ಮವಿಶ್ವಾಸವನ್ನು ಉತ್ತೇಜಿಸುವ ಸಂಭ್ರಮದ ವೇದಿಕೆಯಾಗಿದೆ ಎಂದರು.

       ದಸರಾ ಉತ್ಸವ ಜನೋತ್ಸವವಾಗಿದ್ದು, ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗದೆ ಎಲ್ಲರನ್ನೂ ಒಗ್ಗೂಡಿಸುವ ಉತ್ಸವವಾಗಿದೆ. ಇದು ಧೈರ್ಯ, ಸಮೃದ್ಧಿ ಹಾಗೂ ಜ್ಞಾನವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ವಿವಿಧ ಸಂಘ-ಸಂಸ್ಥೆಗಳ ಮೂಲಕ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ತಿಳಿಸಿದರು.

      ಮಹಿಳೆ ಕೇವಲ ಮನೆಯ ಸದಸ್ಯೆಯಲ್ಲ, ಸಮಾಜದ ಶಕ್ತಿ. ಮಹಿಳೆಯರಿಗೆ ಶಿಕ್ಷಣ ಮತ್ತು ಗೌರವ ನೀಡುವುದರೊಂದಿಗೆ ಅವರ ಸಾಧನೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಅವರು ಮಾತನಾಡಿ, ಮಹಿಳೆ ಕುಟುಂಬದ ಶಕ್ತಿಯಾಗಿದ್ದು, ಸಮಾಜದ ಬೆಳಕು ಹಾಗೂ ದೇಶದ ಅಭಿವೃದ್ಧಿಯ ಆಧಾರಸ್ತಂಭವಾಗಿದ್ದಾಳೆ. ತಾಯಿ, ಮಗಳು, ಪತ್ನಿ ಹಾಗೂ ಉದ್ಯೋಗಿ ಸೇರಿದಂತೆ ಹಲವು ಪಾತ್ರಗಳನ್ನು ಮಹಿಳೆ ಯಶಸ್ವಿಯಾಗಿ ನಿರ್ವಹಿಸುತ್ತಾಳೆ ಎಂದರು.

     ಇಂದಿಗೂ ಕೆಲವು ಕಡೆ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯುತ್ತಿಲ್ಲ. ಹೆಣ್ಣುಮಕ್ಕಳ ಶಿಕ್ಷಣ, ಮಹಿಳೆಯರ ಆರೋಗ್ಯ, ಆರ್ಥಿಕ ಸ್ವಾವಲಂಬನೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅವಕಾಶ ಮತ್ತು ಪೆÇ್ರೀತ್ಸಾಹ ದೊರೆತರೆ ಮಹಿಳೆಯರು ಏನನ್ನಾದರೂ ಸಾಧಿಸುವುದರೊಂದಿಗೆ ಸಮಾಜದಲ್ಲೂ ಬದಲಾವಣೆ ತರಬಲ್ಲರು ಎಂದು ಹೇಳಿದರು.

     ಇಂದಿನ ಮಹಿಳೆ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಶಿಕ್ಷಣ, ವಿಜ್ಞಾನ, ಕ್ರೀಡೆ, ಆಡಳಿತ, ರಾಜಕೀಯ ಹಾಗೂ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸುತ್ತಿದ್ದಾಳೆ. ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಪೌಷ್ಟಿಕ ಆಹಾರ ಸೇವಿಸಬೇಕು, ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

     ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಬೆಳವಣಿಗೆಗೆ ಸಹಕರಿಸಬೇಕು. ಮಹಿಳೆಯರ ಯಶಸ್ಸನ್ನು ಕಂಡು ಅಸೂಯೆಪಡುವ ಬದಲು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

     ಸಾಧನಾ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಪುಷ್ಪಾವತಿ ಅವರು ಮಾತನಾಡಿ, ಹಿಂದೆ ಅನುದಾನದ ಕೊರತೆಯ ನಡುವೆಯೂ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಇಂದು ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಅನುದಾನ ದೊರೆಯುತ್ತಿದೆ ಎಂದು ಹೇಳಿದರು.

     ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾದ ಪಿ.ಕಲಾವತಿ ಶುಭ ಹಾರೈಸಿದರು. ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಕ್ಕಳಲ್ಲಿ ಸಮಾನತೆಯ ಭಾವನೆ ಬೆಳೆಸಬೇಕು. ನಮ್ಮ ಸಂಸ್ಕøತಿ ಹಾಗೂ ಪೌಷ್ಟಿಕ ಆಹಾರ ಪದ್ಧತಿಯ ಬಗ್ಗೆ ಅವರಿಗೆ ತಿಳಿಸಿಕೊಡಬೇಕು ಎಂದರು.

      ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸವಿತಾ ರಾಕೇಶ್, ಚಿತ್ರಾವತಿ, ಕೆ.ಉಷಾ, ವೈ.ಡಿ. ಶ್ವೇತಾ, ಎಚ್.ಎನ್. ಶಾರದ, ನಾಮನಿರ್ದೇಶಿತ ಸದಸ್ಯೆ ಜುಲೇಕಾಬಿ, ಮಡಿಕೇರಿ ದಸರಾ ಸಮಿತಿ ಖಜಾಂಚಿ ಸಬಿತಾ ವಿಜಯ್, ಉಸ್ತುವಾರಿ ಅನಿತಾ ಪೂವಯ್ಯ ಹಾಗೂ ಓಡಿಪಿ ಸಂಸ್ಥೆಯ ಮುಖ್ಯಸ್ಥೆ ಜಾಯ್ಸ್ ಮೆನೆಜಸ್ ಉಪಸ್ಥಿತರಿದ್ದರು. ಪ್ರಗತಿ ಪ್ರಾರ್ಥಿಸಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿದರು. ಚೋಕಿರ ಅನಿತಾ ನಿರೂಪಿಸಿದರು. ಬಾಳೆಯಡ ದಿವ್ಯ ಮಂದಪ್ಪ ವಂದಿಸಿದರು.

    ಸಾಧಕ ಮಹಿಳೆಯರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಖಾಯಂ ಪೌರಕಾರ್ಮಿಕರಾದ ರಂಗಮ್ಮ, ಡಿ. ಲಕ್ಷ್ಮಿ, ಕೆಂಗಪ್ಪಗಾರಿ ಲಕ್ಷ್ಮಮ್ಮ ಹಾಗೂ ಮರಡಿ ಹನುಮಕ್ಕ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಬಿ. ಉಮಾವತಿ, ಬಿ. ಕುಸುಮ, ಬಿ.ಎಂ. ಪುಷ್ಪಾವತಿ ಹಾಗೂ ಡಿ. ಜಯಲಕ್ಷ್ಮಿ, ಸಹಾಯಕಿಯರಾದ ಅಮೀನ, ನೀಲಮ್ಮ ಹಾಗೂ ಪಿ.ಜಯಂತಿ ಮತ್ತು ಆಶಾ ಕಾರ್ಯಕರ್ತೆಯರಾದ ಬಿ.ಎಲ್.ದಿವ್ಯ, ಕೆ.ಎನ್. ಸುಶೀಲ, ಬಿ.ಸಿ.ರೋಹಿಣಿ ಹಾಗೂ ಬಿ.ಆರ್.ಪ್ರೇಮ ಅವರನ್ನು ಗೌರವಿಸಲಾಯಿತು.

    ಗಮನ ಸೆಳೆದ ಸ್ಪರ್ಧೆಗಳು: 

ಮಹಿಳಾ ದಸರಾ ಅಂಗವಾಗಿ ಆಯೋಜಿಸಿದ್ದ ವಿವಿಧ ಮನರಂಜನಾ ಸ್ಪರ್ಧೆಗಳು ಗಮನ ಸೆಳೆದವು. ಬಟ್ಟೆ ಹಿಂಡಿ ನೀರನ್ನು ಬಾಟಲಿಗೆ ತುಂಬಿಸುವುದು, ಒಂಟಿ ಕಾಲಿನಲ್ಲಿ ನೀರಿನ ಕಪ್ ಹಿಡಿದು ಸಮತೋಲನ ಕಾಯ್ದುಕೊಳ್ಳುವುದು, ಕಣ್ಣಿಗೆ ಬಟ್ಟೆ ಕಟ್ಟಿ ವೃತ್ತದೊಳಗೆ ಬಟ್ಟೆ ಹಾಕುವುದು, 'ಕೆರೆ ದಡ', 'ಬಾಂಬ್ ಇನ್ ದ ಸಿಟಿ', ಬಲೂನ್ ಅನ್ನು ಬೆನ್ನ ಹಿಂದೆ ಇರಿಸಿಕೊಂಡು ರಕ್ಷಿಸಿಕೊಳ್ಳುವುದು ಹಾಗೂ ಹಣೆಯ ಮೇಲಿಟ್ಟ ಬಿಸ್ಕತ್ತನ್ನು ಕೆಳಕ್ಕೆ ಜಾರಿಸಿ ತಿನ್ನುವ ಸ್ಪರ್ಧೆಗಳು ಮಹಿಳೆಯರನ್ನು ರಂಜಿಸಿದವು.
   ಇದರೊಂದಿಗೆ ಮೆಹಂದಿ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಕೇಶವಿನ್ಯಾಸ, ಜಾನಪದ ಗುಂಪು ನೃತ್ಯ, ಫ್ಯಾಷನ್ ಶೋ, ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅಮ್ಮ-ಮಗಳ ಪ್ರದರ್ಶನ, ವಿಷದ ಚೆಂಡು ಹಾಗೂ ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆಗಳು ನಡೆದವು.

      ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ರೋಟರಿ ಸಂಸ್ಥೆಯ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವೂ ನಡೆಯಿತು.