ಸಿಐಟಿಯಲ್ಲಿ ‘ಜನರೇಟಿವ್ ಎಐ ಮತ್ತು ಎಐ ಏಜೆಂಟ್ ಅಭಿವೃದ್ಧಿ’ ಕಾರ್ಯಾಗಾರ
admincoorgdaily

ಪೊನ್ನಂಪೇಟೆ,13: ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲಗಳನ್ನು ವೃದ್ಧಿಸುವ ಉದ್ದೇಶದಿಂದ ಕೊಡವ ಎಜುಕೇಷನ್ ಸೊಸೈಟಿಯ ಅಧೀನದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ತೃತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಐದು ದಿನಗಳ ‘ಜನರೇಟಿವ್ ಎಐ ಮತ್ತು ಎಐ ಏಜೆಂಟ್ ಅಭಿವೃದ್ಧಿ’ ತರಬೇತಿ ಕಾರ್ಯಾಗಾರವನ್ನು ಅ.5ರಿಂದ 9ರವರೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರಿನ ಥಣಿಯ ಟೆಕ್ನಾಲಜೀಸ್ನ ನಿರ್ದೇಶಕ ಶೈಲೇಶ್ ಶೆಟ್ಟಿ ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ, ಆಳವಾದ ಕಲಿಕೆ, ಜನರೇಟಿವ್ ಎಐ ಹಾಗೂ ಏಜೆಂಟಿಕ್ ಎಐ ತಂತ್ರಜ್ಞಾನಗಳ ಕುರಿತು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಗಳು, ಪ್ರಾಂಪ್ಟ್ ಎಂಜಿನಿಯರಿಂಗ್, ರಿಟ್ರೀವಲ್ ಆಗ್ಮೆಂಟೆಡ್ ಜನರೇಷನ್ (ಆರ್ಎಜಿ), ಲ್ಯಾಂಗ್ಚೈನ್, ಲ್ಯಾಂಗ್ಗ್ರಾಫ್ ಹಾಗೂ ಮಲ್ಟಿ-ಏಜೆಂಟ್ ವ್ಯವಸ್ಥೆಗಳ ಅಭಿವೃದ್ಧಿಯ ಬಗ್ಗೆ ಮಾಹಿತಿ ಒದಗಿಸಲಾಯಿತು.
ಎಐ ಆಧಾರಿತ ಚಾಟ್ಬಾಟ್ಗಳ ನಿರ್ಮಾಣ, ದಾಖಲೆಗಳಿಂದ ಮಾಹಿತಿ ಸಂಗ್ರಹಣೆ, ಕಾರ್ಯಪ್ರವಾಹದ ಸ್ವಯಂಚಾಲಿತ ನಿರ್ವಹಣೆ ಹಾಗೂ ಎಐ ಅಪ್ಲಿಕೇಶನ್ಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಯಿತು. ಜತೆಗೆ ಎಐ ವ್ಯವಸ್ಥೆಗಳ ಸುರಕ್ಷತೆ, ದತ್ತಾಂಶ ಗೌಪ್ಯತೆ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ತಿಳಿಸಲಾಯಿತು.
ಕಾರ್ಯಾಗಾರದ ಕೊನೆಯ ದಿನ ವಿದ್ಯಾರ್ಥಿಗಳು ತಂಡಗಳಾಗಿ ವಿವಿಧ ಎಐ ಯೋಜನೆಗಳನ್ನು ರೂಪಿಸಿ, ಕಲಿತ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅನ್ವಯಿಸಿದರು. ಈ ಮೂಲಕ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ, ಸೃಜನಶೀಲತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹಾಗೂ ಉದ್ಯಮ ಕ್ಷೇತ್ರಕ್ಕೆ ಅಗತ್ಯವಾದ ಜ್ಞಾನವನ್ನು ಹೆಚ್ಚಿಸಲು ಕಾರ್ಯಾಗಾರ ಸಹಕಾರಿಯಾಯಿತು.
ರ್ಯಾಂಕ್ ವಿಜೇತೆ ಕವಿನಾ ಅವರಿಗೆ ಸನ್ಮಾನ
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಸಿಐಟಿ ವಿದ್ಯಾರ್ಥಿನಿ ಕು. ಕವಿನಾ ಎ.ಸಿ. ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಪ್ರೊ. ಡೈನಾ ಕೆ.ಕೆ., ಸಂಪನ್ಮೂಲ ವ್ಯಕ್ತಿಗಳಾದ ಜನರೇಟಿವ್ ಎಐ ಡೆವಲಪರ್ ವೈಶಾಖ್ ರತನ್ ಶೆಟ್ಟಿ ಹಾಗೂ ಏಜೆಂಟಿಕ್ ಎಐ ಸಾಫ್ಟ್ವೇರ್ ಡೆವಲಪರ್ ಶಿಶಿರ್ ಆರ್., ಕಾರ್ಯಾಗಾರದ ಸಂಯೋಜಕಿ ಪ್ರೊ. ಲಿಖಿತಾ ಎ.ಬಿ., ವಿಭಾಗದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.