Kodagu

ವಿಶ್ವ ಬೆನ್ನುಹುರಿ ಗಾಯ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಕಾರ್ಯಕ್ರಮ ಯಾವುದೇ ರೀತಿಯ ಗಾಯ/ ನೋವಿಗೆ ಆರಂಭದಲ್ಲಿ ಚಿಕಿತ್ಸೆ ಅಗತ್ಯ: ಡಾ.ಲೋಕೇಶ್

admincoorgdaily

ವಿಶ್ವ ಬೆನ್ನುಹುರಿ ಗಾಯ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಕಾರ್ಯಕ್ರಮ ಯಾವುದೇ ರೀತಿಯ ಗಾಯ/ ನೋವಿಗೆ ಆರಂಭದಲ್ಲಿ ಚಿಕಿತ್ಸೆ ಅಗತ್ಯ: ಡಾ.ಲೋಕೇಶ್
ಮಡಿಕೇರಿ ಸೆ.10:-ಮಾದಕ ದ್ರವ್ಯದ ಹಾವಳಿ ತಡೆಯಲು ‘ನಶಾ ಮುಕ್ತ ಭಾರತ’ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿ, ಯುವ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಎ.ಜೆ.ಲೋಕೇಶ್ ಅವರು ಅಭಿಪ್ರಾಯಪಟ್ಟರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ಪ್ರಾಜೆಕ್ಟ್ ಸಮರ್ಥ್-ನಯರಾ ಎನರ್ಜಿ ಲಿಮಿಟೆಡ್‍ನ ಸಿಎಸ್‍ಆರ್ ಉಪಕ್ರಮ ಹಾಗೂ ಸಮುದಾಯ ಸಹಭಾಗಿತ್ವದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಬೋಧನಾ ಕೊಠಡಿಯಲ್ಲಿ ಗುರುವಾರ ನಡೆದ ವಿಶ್ವ ಬೆನ್ನುಹುರಿ ಗಾಯ ದಿನಾಚರಣೆ ಮತ್ತು ನಶಾ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ದಾಸರಾಗಲು ಕಾರಣಗಳು ಮತ್ತು ಹಿರಿಯರು ವ್ಯಸನಕ್ಕೆ ಒಳಗಾಗಲು ಕಾರಣಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಕಾಲೇಜುಗಳು, ಪ್ರಾಥಮಿಕ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವಿವಿಧ ಎನ್‍ಜಿಒಗಳ ಸಹಕಾರದೊಂದಿಗೆ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಬೆನ್ನುಹುರಿಯ ಗಾಯ ಹಾಗೂ ಪಾಶ್ರ್ವವಾಯು ಸೇರಿದಂತೆ ನರ ಸಂಬಂಧಿತ ಸಮಸ್ಯೆಗಳ ಕುರಿತು ವಿವರಿಸಿದ ಅವರು, ರೋಗಿಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಬೆನ್ನುಹುರಿಯ ಗಾಯವು ಆಘಾತಕಾರಿ ಕಾರಣಗಳಿಂದ ಉಂಟಾಗಬಹುದು. ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸಿ ಫಿಸಿಯೋಥೆರಪಿ ಹಾಗೂ ಅಗತ್ಯ ಚಿಕಿತ್ಸೆಯನ್ನು ನೀಡಿದಲ್ಲಿ ಹಾನಿಗೊಳಗಾದ ಅಂಗಗಳ ಕಾರ್ಯಕ್ಷಮತೆಯನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು  ಅವರು ಹೇಳಿದರು.

ರಸ್ತೆ ಅಪಘಾತದ ಇತಿಹಾಸದೊಂದಿಗೆ ರೋಗಿಯೊಬ್ಬರು ಆಸ್ಪತ್ರೆಗೆ ಬಂದ ತಕ್ಷಣ ಅದನ್ನು ಕೇವಲ ಬೆನ್ನುಹುರಿಯ ಗಾಯ ಎಂದು ಪರಿಗಣಿಸಬಾರದು. ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ವೈದ್ಯಕೀಯ ಅವರು ಸಲಹೆ ನೀಡಿದರು.

ಕೆಲವೊಮ್ಮೆ ಕೈಕಾಲುಗಳಲ್ಲಿ ನಿಶ್ಯಕ್ತಿ ಉಂಟಾದ ಪರಿಣಾಮ ರೋಗಿ ಬಿದ್ದಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ರೋಗಿಯ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ನೇರವಾಗಿ ‘ಬೆನ್ನುಹುರಿಯ ಗಾಯ’ ಎಂದು ನಿರ್ಧರಿಸಿ ಎಂಆರ್‍ಐ ಅಥವಾ ಸಿಟಿ ಸ್ಕ್ಯಾನ್‍ಗೆ ಸೂಚಿಸುವುದು ಸರಿಯಾದ ಕ್ರಮವಲ್ಲ ಎಂದು ಡಾ.ಲೋಕೇಶ್ ಅವರು ತಿಳಿಸಿದರು.  

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಡಿ.ಎಸ್.ನಂಜುಂಡಯ್ಯ ಅವರು ಮಾತನಾಡಿ, ಬೆನ್ನುಹುರಿಯು ಮಾನವ ಶರೀರದ ಪ್ರಮುಖ ಅಂಗವಾಗಿದ್ದು, ದೇಹದ ವಿವಿಧ ಚಲನವಲನಗಳು ಹಾಗೂ ಕಾರ್ಯಚಟುವಟಿಕೆಗಳಿಗೆ ಬೆನ್ನುಹುರಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳ ಒಳಭಾಗದಲ್ಲಿರುವ ಬೆನ್ನುಹುರಿಯನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

 ಅಪಘಾತಗಳು ಸೇರಿದಂತೆ ವಿವಿಧ ಕಾರಣಗಳಿಂದ ಬೆನ್ನುಹುರಿಗೆ ಗಾಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.

ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶವು ಡ್ರಗ್ಸ್ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ಮುಕ್ತವಾದ ಸಮಾಜ ನಿರ್ಮಿಸುವುದಾಗಿದೆ. ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಬೆನ್ನುಹುರಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅತೀಶ್ ಅವರು ಮಾತನಾಡಿ, ನಶಾ ಮುಕ್ತ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ವೈದ್ಯರು, ತಜ್ಞರು, ಪ್ರಾಧ್ಯಾಪಕರು, ನಸಿರ್ಂಗ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಹೇಳಿದರು.

ಈ ಹಿಂದೆ ಕೊಯಿಮ್ಸ್‍ನಲ್ಲಿ ಯಾವುದೇ ಉತ್ತಮ ವೈದ್ಯಕೀಯ ಸೇವೆ ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳಿದ್ದವು. ಆದರೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ಲ್ಯಾಪ್ರೋಸ್ಕೋಪಿ ಮೂಲಕ ಕಿಡ್ನಿ ಕಲ್ಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವುದು ಸಂಸ್ಥೆಯ ಮತ್ತೊಂದು ಮಹತ್ವದ ಸಾಧನೆಯಾಗಿದೆ. ಇದೀಗ ಸಂಸ್ಥೆಯಲ್ಲಿ ಹಂತ ಹಂತವಾಗಿ ಪ್ರತಿಯೊಂದು ವಿಭಾಗದಲ್ಲೂ ಸುಧಾರಣೆ ತರಲಾಗುತ್ತಿದ್ದು, ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಹೊಸ ಸಾಧನೆ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೋತಜ್ಞರಾದ ಡಾ.ರೂಪೇಶ್ ಅವರು ಮಾತನಾಡಿ, ನಶಾ ಮುಕ್ತ ಭಾರತ ಅಭಿಯಾನವು ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ತಲುಪುವ ಉದ್ದೇಶದಿಂದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಶಾ ಮುಕ್ತ ಭಾರತದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವಿಮಲ ಅವರು ಮಾತನಾಡಿ, ಬೆನ್ನುಹುರಿ ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ದೇಹದ ಚಲನವಲನ ಹಾಗೂ ವಿವಿಧ ಕಾರ್ಯಗಳಿಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಪಘಾತ, ಗಾಯ ಸೇರಿದಂತೆ ಹಲವು ಕಾರಣಗಳಿಂದ ಬೆನ್ನುಹುರಿಗೆ ಹಾನಿಯಾದ ಸಂದರ್ಭದಲ್ಲಿ ವ್ಯಕ್ತಿಗಳು ದೈಹಿಕವಾಗಿ ಮಾತ್ರವಲ್ಲದೆ, ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ದೇಹದಲ್ಲಾಗುವ ಬದಲಾವಣೆಯಿಂದ ಬೆನ್ನುಹುರಿ ಸಮಸ್ಯೆ ಎದುರಾಗಲಿದ್ದು, ಯೋಗ, ವ್ಯಾಯಾಮದಿಂದ ಆಯೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಕೆ.ಆರ್.ಶಂಕರ್ ಅವರು, ಪ್ರಸ್ತುತ ದಿನದಲ್ಲಿ ದೇಶ ನಶಾಮುಕ್ತಗೊಂಡರೆ ಬೆನ್ನುಹುರಿ ಸಮಸ್ಯೆಗಳು ಕಡಿಮೆಯಾಗುತ್ತದೆ. ಬೆನ್ನುಹುರಿ ಸಮಸ್ಯೆಯನ್ನು ತಡೆಯಲು ಜಾಗೃತಿ ಅಗತ್ಯ. ಬೆನ್ನುಹುರಿಗೆ ಗಾಯ ಅಥವಾ ಸಮಸ್ಯೆಯಾದ ಸಂದರ್ಭದಲ್ಲಿ ವ್ಯಕ್ತಿಯ ದೈನಂದಿನ ಚಟುವಟಿಕೆಗಳಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಕುಟುಂಬದವರ ಸಹಕಾರ, ಪ್ರೋತ್ಸಾಹ ಹಾಗೂ ಮಾನಸಿಕ ಬೆಂಬಲ ಅತ್ಯಂತ ಅಗತ್ಯವಾಗಿರುತ್ತದೆ. ಸಮಸ್ಯೆಗೊಳಗಾದವರನ್ನು ಪ್ರತ್ಯೇಕವಾಗಿ ಕಾಣದೆ, ಕುಟುಂಬದ ಇತರ ಸದಸ್ಯರಂತೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭ ಬೆನ್ನುಹುರಿ ಸಮಸ್ಯೆ ಎದುರಿಸಿ, ಚೇತರಿಸಿಕೊಂಡಿರುವ ಮಾದಾಪುರದ ಸೈಫುದ್ದೀನ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸನತ್ ಕುಮಾರ್, ಬಿಎಸ್‍ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುನೀತಾ ಪ್ರಾರ್ಥಿಸಿದರು,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.