ಮಡಿಕೇರಿಯಲ್ಲಿ ಅ.17, 18 ರಂದು ಯುವ ದಸರಾ-2026 ಸಂಭ್ರಮ
admincoorgdaily

ಮಡಿಕೇರಿ: ದಸರಾ ಉತ್ಸವದ ಪ್ರಯುಕ್ತ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 17 ಮತ್ತು 18 ರಂದು ಯುವ ದಸರಾ-2026 ಆಚರಣೆ ನಡೆಯಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ತಿಳಿಸಿದ್ದಾರೆ.
ಅ.17 ರಂದು ಮೊದಲ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನದ ಎರಡನೇ ಆವೃತ್ತಿ ಜರುಗಲಿದೆ. ಹಲವು ತಳಿಗಳ ನಾಯಿಗಳು ಇಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಪ್ರೇಕ್ಷಕರನ್ನು ಸೆಳೆಯಲಿದೆ. ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಪರ್ಧಿಸಿದ ಎಲ್ಲಾ ಶ್ವಾನಗಳಿಗೂ ಪ್ರಮಾಣಪತ್ರ ಹಾಗೂ ಪದಕ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ಖ್ಯಾತ ಪೆಟ್ ಕಂಪನಿಗಳು ಮತ್ತು ಮಳಿಗೆಗಳು ಮಳಿಗೆಗಳನ್ನು ತೆರೆಯಲಿವೆ.
ಅ.18 ರಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಆರಂಭದಲ್ಲಿ ಫ್ಯಾಷನ್ ಶೋ, ಬಳಿಕ ಸಭಾ ಸಮಾರಂಭ ನಡೆಯಲಿದೆ. ಅದೇ ವೇದಿಕೆಯಲ್ಲಿ 10 ತಂಡಗಳ ನಡುವೆ ರಾಜ್ಯಮಟ್ಟದ ನೃತ್ಯ ಕೂಟವೂ ಇರಲಿದೆ. ಪೈಕಿ ಶೇ.60ರಷ್ಟು ಕೊಡಗಿನ ತಂಡಗಳೇ ಆಗಿದ್ದು, ಉಳಿದವು ಹೊರ ಜಿಲ್ಲೆಗಳಿಂದ ಬರಲಿವೆ.
ಖ್ಯಾತ ಗಾಯಕ ಚೇತನ್ ನಾಯಕ್ ನೇತೃತ್ವದ ಸಕ್ಕರೆ ಮಿಠಾಯಿ ತಂಡದಿಂದ ಸಂಗೀತ ರಸದೌತಣ ಹಾಗೂ ಡ್ರಮ್ಯಾನೋ ಪರ್ಕ್ಯೂಷನ್ ಬಳಗದಿಂದ ಲೈವ್ ಡ್ರಮ್ ವಾದನದ ವಿಶೇಷ ಮನರಂಜನೆ ಇರಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ದಸರಾ ಪದಾಧಿಕಾರಿಗಳಾದ ಲೀನೇಶ್, ಅರ್ಜುನ್, ಸುನಿಲ್, ಅತುಲ್ ಶರಣ್ ಉಪಸ್ಥಿತರಿದ್ದರು.