ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಹುಚ್ಚಾಟ: ಯುವಕನಿಗೆ ರೂ.2500 ದಂಡ
admincoorgdaily

ಮಡಿಕೇರಿ;ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೆ ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ ಯುವಕನನ್ನು ಪತ್ತೆಹಚ್ಚಿರುವ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ವಿವಿಧ ಸಂಚಾರಿ ನಿಯಮ ಉಲ್ಲಂಘನೆಗಾಗಿ ಒಟ್ಟು ರೂ. 2500 ದಂಡ ವಿಧಿಸಿದ್ದಾರೆ.
ಮೈಸೂರಿನ ಕೆ.ಆರ್. ಮೊಹಲ್ಲಾ ನಿವಾಸಿ ವರುಣ್ ಕೆ (ಬೈಕ್ ಮಾಲೀಕ ವಿನೀತ್ ಕೆ) ಎಂಬಾತ
ಈ ಪ್ರಮಾದಕ್ಕಾಗಿ ದಂಡ ತೆತ್ತವನಾಗಿದ್ದಾನೆ.
ಈತ ದಿನಾಂಕ 20-10-2026 ರಂದು KA O9J G3807 ಬೈಕ್ ನಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದವನು ಸುಂಟಿಕೊಪ್ಪ - ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಡುವೆ
ಅಪಾಯಕಾರಿಯಾಗಿ ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ.
ಈತನ ಈ ಘನಂಧಾರಿ ಕೃತ್ಯ ಹಿಂದೆ ಬರುತ್ತಿದ್ದ ವಾಹನವೊಂದರ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಬೆನ್ನು ಹತ್ತಿದ ಸುಂಟಿಕೊಪ್ಪ ಪಿ.ಎಸ್.ಐ. ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಬೈಕ್ ಸವಾರನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೆಲ್ಮೆಟ್ ಧರಿಸದಿರುವುದಕ್ಕೆ ರೂ. 500 ಸೇರಿದಂತೆ ಇತರೆ ಸಂಚಾರಿ ನಿಯಮ ಉಲ್ಲಂಘನೆಗಾಗಿ ಒಟ್ಟು ರೂ. 2500 ದಂಡ ವಿಧಿಸಲಾಗಿದೆ.