ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಷ್ಟು ಶಿಕ್ಷಕರ ಹುದ್ದೆ ಖಾಲಿ ! ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕರೇ ಆಸರೆ!
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಮುಂಗಾರು ಅಬ್ಬರಿಸಿದೆ.ಮಳೆಯ ನಡುವೆಯೂ ಕೂಡ ವಿದ್ಯಾರ್ಥಿಗಳು ಎರಡು ತಿಂಗಳ ಬೇಸಿಗೆ ರಜೆಯ ನಂತರ ಶಾಲೆಯತ್ತ ಮುಖಮಾಡುತ್ತಿದ್ದಾರೆ.ಆದರೆ ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ 623 ಸರ್ಕಾರಿ ಶಾಲೆಗಳು ಇವೆ.ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ 568 ಶಿಕ್ಷಕರ ಹುದ್ದೆ ಖಾಲಿ ಇವೆ.ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ.ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 143 ಹಾಗೂ ಪ್ರೌಢಶಾಲೆಗಳಲ್ಲಿ 425 ಶಿಕ್ಷಕರ ಹುದ್ದೆ ಖಾಲಿ ಇವೆ.ಮಡಿಕೇರಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 97 ಶಿಕ್ಷಕರ ಹುದ್ದೆ ಮಂಜೂರಾತಿ ಆಗಿದೆ. ಆದರೆ ಕೇವಲ 51 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 46 ಮಂದಿ ಶಿಕ್ಷಕರ ಹುದ್ದೆ ಖಾಲಿ ಇವೆ.ಸೋಮವಾರಪೇಟೆ ತಾಲ್ಲೂಕಿನಲ್ಲಿ 195 ಶಿಕ್ಷಕರ ಹುದ್ದೆಯಲ್ಲಿ 132 ಮಂದಿ ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು,63 ಮಂದಿ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ.ವಿರಾಜಪೇಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 120 ಶಿಕ್ಷಕರ ಹುದ್ದೆಗಳಲ್ಲಿ 86 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 34 ಮಂದಿ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ.ಮಡಿಕೇರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ 417 ಮಂದಿ ಶಿಕ್ಷಕರು ಮಂಜೂರಾತಿ ಆಗಿದ್ದು ಆದರೆ ಪ್ರಸಕ್ತ ಸಾಲಿನಲ್ಲಿ 270 ಮಂದಿ ಶಿಕ್ಷಕರು ಇದ್ದು, 148 ಮಂದಿ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ.ಸೋಮವಾರಪೇಟೆ ತಾಲ್ಲೂಕಿನಲ್ಲಿ 510 ಶಿಕ್ಷಕರ ಹುದ್ದೆ ಮಂಜೂರಾತಿ ಆಗಿದೆ.ಆದರೆ 423 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 87 ಮಂದಿ ಶಿಕ್ಷಕರ ಹುದ್ದೆ ಖಾಲಿ ಇದೆ.ವಿರಾಜಪೇಟೆ ತಾಲ್ಲೂಕಿನಲ್ಲಿ 484 ಮಂದಿ ಶಿಕ್ಷಕರ ಹುದ್ದೆ ಮಂಜೂರಾತಿಯಾಗಿದ್ದು 294 ಮಂದಿ ಕಾರ್ಯನಿರ್ವಹಿಸುತ್ತಿದ್ದು 190 ಮಂದಿ ಶಿಕ್ಷಕರು ನೇಮಕಗೊಳ್ಳಬೇಕಿದೆ.ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 412 ಖಾಯಂ ಶಿಕ್ಷಕರು ಹುದ್ದೆ ಮಂಜೂರಾತಿ ಆಗಿದ್ದು ಕೇವಲ 269 ಮಂದಿ ಕಾರ್ಯನಿರ್ವಹಿಸುತ್ತಿದ್ದು ಇನ್ನೂ 143 ಖಾಯಂ ಶಿಕ್ಷಕರ ನೇಮಕ ಆಗಬೇಕಿದೆ.ಸರ್ಕಾರಿ ಪ್ರೌಢಶಾಲೆಗಳಲ್ಲಿ 1412 ಮಂದಿ ಖಾಯಂ ಶಿಕ್ಷಕರ ಕಾರ್ಯನಿರ್ವಹಿಸಬೇಕಾಗಿದ್ದು 987 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಇನ್ನೂ 425 ಮಂದಿ ಶಿಕ್ಷಕರು ನೇಮಕಗೊಳ್ಳಬೇಕಿದೆ.
ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ!
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಒತ್ತಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಖಾಯಂ ಶಿಕ್ಷಕರು ಇಲ್ಲದೆ,ಮತ್ತೊಂದೆಡೆ ಸರ್ಕಾರ ಬೇಡಿಕೆ ಇರುವ ಅತಿಥಿ ಶಿಕ್ಷಕರನ್ನೂ ಕೂಡ ನೇಮಕ ಮಾಡದೆ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ.ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರೆಯಿಂದಾಗಿಯೇ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್ಎಲ್.ಸಿ ಫಲಿತಾಂಶ ಕುಸಿತ ಕಾಣುತ್ತಿದೆ.ಮತ್ತೊಂದೆಡೆ ಖಾಯಂ ಶಿಕ್ಷಕರಿಲ್ಲದೆ ಸರ್ಕಾರಿ ಶಾಲೆಗಳ ಶಿಕ್ಷಕರ ಒಂದಕ್ಕಿಂತ ಹೆಚ್ಚು ವಿಷಯವನ್ನು ಪಾಠ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.ಕೆಲವೊಂದು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು,ದೈಹಿಕ ಶಿಕ್ಷಕರು ಕೂಡ ಒಂದೆರಡು ವಿಷಯವನ್ನು ಬೋಧಿಸುತ್ತಿದ್ದಾರೆ.ಇನ್ನೂ ಬಹುತೇಕ ಕಡೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದೆ,ವಿದ್ಯಾರ್ಥಿಗಳ ಶೈಕ್ಷಣಿಕ ಕ್ರೀಡಾಕೂಟದ ಸಾಧನೆಗೆ ಕೂಡ ಹಿನ್ನಡೆಯಾಗುತ್ತಿದೆ.ಜಿಲ್ಲೆಯಲ್ಲಿ ಏಕೋಪಾಧ್ಯಯ ಸರ್ಕಾರಿ ಶಾಲೆಗಳು ಕೂಡ ಇದೆ.ಖಾಯಂ ಶಿಕ್ಷಕರ ನೇಮಕಗೊಳ್ಳದಿರುವುದರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗಣಿತ,ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯದಲ್ಲಿ ಪ್ರತೀ ಬಾರಿ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ.ಅದಲ್ಲದೇ ಕನ್ನಡ ಶಿಕ್ಷಕರೇ ಇಂಗ್ಲಿಷ್ ಪಾಠ ಮಾಡಬೇಕಾದ ಒತ್ತಡಕ್ಕೆ ಸಿಲುಕೊಂಡಿದ್ದಾರೆ.ಅನುದಾನ ರಹಿತ ಶಾಲೆಗಳಲ್ಲಿ ಖಾಸಗಿ ಅವರ ಸಹಭಾಗಿತ್ವದಲ್ಲಿ ಶಿಕ್ಷಕರನ್ನ ನೇಮಿಸುತ್ತಾರೆ.ಆದರೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರವೇ ಅತಿಥಿ ಶಿಕ್ಷಕನ್ನ ನೇಮಿಸಬೇಕು.ಶಿಕ್ಷಕರು ತಮ್ಮ ವಿಷಯದ ಹೊರತಾಗಿಯೂ ಕೂಡ ಇತರೆ ವಿಷಯಗಳನ್ನು ಕೂಡ ಪಾಠ ಮಾಡುತ್ತಿದ್ದಾರೆ.ಕೆಲವೊಂದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಕೂಡ ಖಾಲಿ ಉಳಿದಿದೆ.ಸಹ ಶಿಕ್ಷಕರೇ ಪ್ರಭಾರ ಮುಖ್ಯೋಪಾಧ್ಯಾಯರ ಹುದ್ದೆಯನ್ನು ಕೂಡ ನಿಭಾಯಿಸುತ್ತಿದ್ದಾರೆ.
384 ಅತಿಥಿ ಶಿಕ್ಷಕರ ನೇಮಕ!
ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಾತ್ರ 568 ಶಿಕ್ಷಕರ ಹುದ್ದೆ ಖಾಲಿ ಇದೆ.ಆದರೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೇರಿ 384 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಶಿಕ್ಷಣ ಇಲಾಖೆ ಸಿದ್ಧತ ನಡೆಸುತ್ತಿದೆ.ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ,ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ 500 ಅಧಿಕ ಅತಿಥಿ ಶಿಕ್ಷಕರ ಬೇಡಿಕೆ ಇತ್ತು ಆದರೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಕೇವಲ 384 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಯೇ ಜಿಲ್ಲೆಯಲ್ಲಿ 568 ಖಾಯಂ ಶಿಕ್ಷಕರು ಹುದ್ದೆ ಖಾಲಿ ಇದೆ.ಆದರೆ ಇಡೀ ಜಿಲ್ಲೆಯಲ್ಲಿ ಸರ್ಕಾರ 384 ಅತಿಥಿ ಶಿಕ್ಷಕರ ಹುದ್ದೆಯನ್ನು ಮಂಜೂರಾತಿ ಮಾಡಲಾಗಿದೆ.ಪ್ರಸಕ್ತ ಸಾಲಿನಲ್ಲಿ ಇಡೀ ಶೈಕ್ಷಣಿಕ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ರಾಜ್ಯದಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ತೀರ್ಮಾನ ಕೈಗೊಂಡಿದೆ.ಆದರೆ ಖಾಯಂ ಶಿಕ್ಷಕರ ನೇಮಕ ಮಾಡಲು ಮುಂದಾಗುತ್ತಿಲ್ಲ.
ರಾಜ್ಯದಲ್ಲಿ 40905 ಪ್ರಾಥಮಿಕ ಮತ್ತು 4,871 ಪ್ರೌಢಶಾಲೆ ಸೇರಿ ಒಟ್ಟು 46776 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ.ಪ್ರಾಥಮಿಕ ಶಾಲೆಗಳಿಗೆ 1,88,531 ಹುದ್ದೆಗಳು ಮಂಜೂರಾಗಿದ್ದು 1,38,802 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 49,729 ಹುದ್ದೆಗಳು ಖಾಲಿ ಇವೆ.ಪ್ರೌಢಶಾಲೆಗಳಿಗೆ 44,4056 ಹುದ್ದೆಗಳು ಮಂಜೂರಾಗಿದೆ.ಆದರೆ 32,610 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.11796 ಪ್ರೌಢಶಾಲಾ ಶಿಕ್ಷಕರ ಹುದ್ದೆ ಖಾಲಿ ಇವೆ.ರಾಜ್ಯದಲ್ಲಿ ಒಟ್ಟು 61,525 ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿ ಶಿಕ್ಷಕರ ಹುದ್ದೆ ಖಾಲಿಇದೆ. ಸರ್ಕಾರ ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತಿದ್ದಾರೆ.ಆದರೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವ ಗೋಜಿಗೆ ಹೋಗುತ್ತಿಲ್ಲ.ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.ಆದರೂ ಕೂಡ ರಾಜ್ಯದಲ್ಲಿ ಇನ್ನೂ ಹತ್ತು ಸಾವಿರ ಶಿಕ್ಷಕರ ಕೊರತೆ ಇದೆ.
ಕೊಡಗು ಜಿಲ್ಲೆಗೆ ಈಗಾಗಲೇ 384 ಅತಿಥಿ ಶಿಕ್ಷಕರ ಹುದ್ದೆ ಮಂಜೂರಾತಿಯಾಗಿದೆ.ಇನ್ನೂ ಬೇಡಿಕೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು.ಈಗಾಗಲೇ ಜಿಲ್ಲೆಗೆ ಶೇಕಡಾ 70% ರಷ್ಟು ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಯಾಗಿದೆ.ಎಲ್ಲಾ ಶಾಲೆಗಳಿಗೆ ಪೂರೈಕೆ ಮಾಡುವ ಕೆಲಸ ನಡೆಯುತ್ತಿದೆ.
ಸಿ.ರಂಗದಾಮಪ್ಪ, ಡಿಡಿಪಿಐ ಕೊಡಗು.
What's Your Reaction?






