ಮುಂದಿನ 6 ತಿಂಗಳು ನಡೆಯಲ್ಲ ಗ್ರಾ.ಪಂ ಚುನಾವಣೆ ;ಆಡಳಿತಾಧಿಕಾರಿ ಅವಧಿ ಆರು ತಿಂಗಳ ಕಾಲ ವಿಸ್ತರಿಸಿ ಸರ್ಕಾರ ಆದೇಶ
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ; ರಾಜ್ಯಾದ್ಯಂತ ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಆರು ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಿಸಿದ್ದರು.ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಡಳಿತಾಧಿಕಾರಿಗಳ ಅವಧಿ ಕೂಡ ಮುಕ್ತಾಯಗೊಳ್ಳುತ್ತಿತ್ತು.ಇದೀಗ ಸರ್ಕಾರ ಆಡಳಿತಾಧಿಕಾರಿಗಳ ಅವಧಿಯನ್ನು,
'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993' ರ ಪ್ರಕರಣ 321ರ ಅನ್ವಯ ಸರ್ಕಾರಕ್ಕಿರುವ ಅಧಿಕಾರವನ್ನು ಚಲಾಯಿಸಿ, ಇದೇ ಕಾಯ್ದೆಯ ಪ್ರಕರಣ 8 (2)ರ ಪ್ರಕಾರ ಅಧಿಕಾರಾವಧಿಯನ್ನು ಮತ್ತೆ 6 ತಿಂಗಳು ಮುಂದುವರಿಸಲು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕೆ.ಎಚ್ ಅವರು ಆದೇಶಕ್ಕೆ ಅನುಮೋದನೆ ನೀಡಿ ಸುತ್ತೋಲೆ ಹೊರಡಿಸಿ,ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ಇದರಿಂದಾಗಿ ಮುಂದಿನ ಆರು ತಿಂಗಳ ಕಾಲ ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯುವುದು ಅನುಮಾನವಾಗಿದೆ.ಮುಂದಿನ ಆರು ತಿಂಗಳವರೆಗೆ ಗ್ರಾ.ಪಂ ಗಳಲ್ಲಿ ಅಧಿಕಾರಿಗಲೇ ದರ್ಬಾರ್ ನಡೆಸಲಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್ ಹೊರತುಪಡಿಸಿ ಈಗಾಗಲೇ ಜನಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡಿರುವ 101 ಗ್ರಾಮ ಪಂಚಾಯತಿಗಳಿಗೆ ವಾರ್ಡ್ ವಾರು ಮೀಸಲು ಪಟ್ಟಿಯನ್ನು ಜಿಲ್ಲಾಧಿಕಾರಿ ಕಳೆದ ತಿಂಗಳು ಪ್ರಕಟಿಸಿದ್ದರು.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಒಂದೇ ಬಾರಿ ನಡೆಸಲು ಸರ್ಕಾರ ಮೊದಲು ಸಿದ್ಧತೆ ನಡೆಸಿದ್ದರು.ಆದರೆ ಇತ್ತೀಚೆಗೆ ಸರ್ಕಾರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಮೊದಲು ನಡೆಸಲು ತೀರ್ಮಾನಿಸಿ ಕ್ಷೇತ್ರವಾರು ಮೀಸಲು ಪಟ್ಟಿಯನ್ನು ಕೂಡ ಪ್ರಕಟಿಸಿದೆ.
ಗ್ರಾಮ ಪಂಚಾಯತ್ ಚುನಾವಣಾ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ನಡೆಯವುದು ಅನುಮಾನವಾಗಿದೆ.
2027ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಗ್ರಾ.ಪಂ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿದು ಒಂದು ವರ್ಷ ಪೂರ್ಣಗೊಳ್ಳಲಿದೆ.
2020ರಲ್ಲಿ ಕೂಡ ಗ್ರಾ.ಪಂಗಳಿಗೆ ನೇಮಕವಾಗಿತ್ತು ಆಡಳಿತಾಧಿಕಾರಿ;
2015ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರ ಅಧಿಕಾರವಧಿ 2020ರ ಜೂನ್ ತಿಂಗಳಿಗೆ ಮುಕ್ತಾಯಗೊಂಡಿತ್ತು.ಆದರೆ 2020ರ ಜೂನ್-ಜುಲೈ ತಿಂಗಳಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣಾ ಆಯೋಗವು ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲಾಗಿತ್ತು.ಅಂದಿನ ಬಿಜೆಪಿ ಸರ್ಕಾರ ಗ್ರಾ.ಪಂಗಳಿಗೆ ಜಿಲ್ಲಾಧಿಕಾರಿ ಮೂಲಕ ಆಡಳಿತಾಧಿಕರಿಗಳನ್ನು ನೇಮಕ ಮಾಡಲಾಗಿತ್ತು.ಆರು ತಿಂಗಳ ಕಾಲ 2020ರಲ್ಲಿ ಗ್ರಾ.ಪಂಗಳಲ್ಲಿ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದರು.
ಬಳಿಕ 2020ರ ನವೆಂಬರ್ 30ರಂದು ರಾಜ್ಯ ಚುನಾವಣಾ ಆಯೋಗ ಚುನಾವಣಾ ಘೋಷಣೆ ಮಾಡಿದ್ದರು.
2020ರಲ್ಲಿ ಗ್ರಾ.ಪಂ ಚುನಾವಣೆಯ ವಾರ್ಡ್ ವಾರು ಮೀಸಲು ಪಟ್ಟಿಯನ್ನು ಆ.27ರಂದು ಪ್ರಕಟಿಸಲಾಗಿತ್ತು.ಆಯೋಗ ನಿಯಮದಂತೆ
ಮೀಸಲು ಹೊರಡಿಸಿದ 45 ದಿನಗಳ ಬಳಿಕ ಚುನಾವಣಾ ದಿನಾಂಕ ಹೊರಡಿಸಬೇಕಾಗುತ್ತದೆ.
2020ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿತ್ತು.2020 ಡಿಸೆಂಬರ್ ತಿಂಗಳ 27ರಂದು ಗ್ರಾ.ಪಂ ಗಳಿಗೆ ಚುನಾವಣೆ ನಡೆದು 30 ರಂದು ಫಲಿತಾಂಶ ಪ್ರಕಟಗೊಂಡಿತ್ತು.ವಾರ್ಡ್ ವಾರು ಮೀಸಲು ಪಟ್ಟಿ ಪ್ರಕಟಗೊಂಡಿದ್ದರೂ ಕೂಡ ಸರ್ಕಾರ ಚುನಾವಣೆ ನಡೆಸಲು ಒಲವು ತೋರದೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ನೇಮಕವಾಗಿರುವ ಆಡಳಿತಾಧಿಕಾರಿಗಳ ಅವಧಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಗ್ರಾಮ ಪಂಚಾಯತ್ ಕಡೆ ಮುಖಮಾಡದ ಆಡಳಿತಾಧಿಕಾರಿಗಳು
ಜಿಲ್ಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಗ್ರಾ.ಪಂಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳೇ ಆಡಳಿತ ನಡೆಸುವಂತಾಗಿದೆ.ಬೇರೆ ಬೇರೆ ಇಲಾಖಾ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗು ನೇಮಕ ಮಾಡಲಾಗಿದೆ.ಆದರೆ ಆಡಳಿತಾಧಿಕಾರಿಗಳು ತಮ್ಮ ಇಲಾಖಾ ಕೆಲಸಗಳೊಂದಿಗೆ ತಾವು ನೇಮಕವಾಗಿರುವ ಗ್ರಾ.ಪಂ ಆಡಳಿತ ಕೆಲಸವನ್ನು ನಿಭಾಯಿಸಬೇಕಾಗಿದೆ.ವಾರಕ್ಕೆ ಕನಿಷ್ಠ ಎರಡ ದಿನ ಮಾತ್ರ ಆಡಳಿತಾಧಿಕಾರಿಗಳು ಗ್ರಾ.ಪಂಗಳಲ್ಲಿ ಲಭ್ಯವಿರುತ್ತಾರೆ. ಇದರಿಂದಾಗಿ ಜನಸಾಮಾನ್ಯರ ಕೆಲಸ ವಿಳಂಬವಾಗುತ್ತಿದೆ.ಜಿಲ್ಲೆಯ ಬಹುತೇಕ
ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ಮುಖಮಾಡುವುದೇ ಅಪರೂಪವಾಗಿದೆ.
ಮುಂದಿನ ಆರು ತಿಂಗಳು ಕೂಡ ಜನಪ್ರತಿನಿಧಿಗಳಿಲ್ಲದೆ ಗ್ರಾಮ ಪಂಚಾಯತ್ ಗಳಲ್ಲಿ ಆಡಳಿತಾಧಿಕಾರಿಗಳ ಆಡಳಿತವೇ ನಡೆಯಲಿದೆ.