SPECIAL STORY

650 ವರ್ಷದ ಹಿಂದಿನ ಶಿವಲಿಂಗ ಪತ್ತೆ;ಕೊಡಗಿನ ಐಮಂಗಲದ ಕಾಡಿನಲ್ಲಿ ಪುರಾತನ ಮಹದೇವ ದೇಗುಲದ ಕುರುಹು

admincoorgdaily

650 ವರ್ಷದ ಹಿಂದಿನ ಶಿವಲಿಂಗ ಪತ್ತೆ;ಕೊಡಗಿನ ಐಮಂಗಲದ ಕಾಡಿನಲ್ಲಿ ಪುರಾತನ ಮಹದೇವ ದೇಗುಲದ ಕುರುಹು
ಮಡಿಕೇರಿ:-ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಲ್ಲಿ ಪುರಾತನ ಶಿವಲಿಂಗವೊಂದು ಪತ್ತೆಯಾಗಿದೆ. ಸುಮಾರು 650 ವರ್ಷಗಳ ಹಿಂದಿನ ಮಹದೇವ ದೇವಾಲಯ ಇಲ್ಲಿ ಇತ್ತು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದ್ದು, ಕಾಡುಪಾಲಾಗಿದ್ದ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ತಾಂಬೂಲ ಪ್ರಶ್ನೆಯ ಮೂಲಕ ದೇವಾಲಯದ ಇತಿಹಾಸ ಹಾಗೂ ಪುನರ್ ನಿರ್ಮಾಣದ ಕುರಿತು ಮಾಹಿತಿ ಪಡೆದುಕೊಂಡಿರುವ ಗ್ರಾಮಸ್ಥರು, ಇದೀಗ ಮೊದಲ ಹಂತದ ಹೋಮ-ಹವನಗಳನ್ನು ನೆರವೇರಿಸಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.


ಕಾಡಿನ ಮಧ್ಯೆ...
ಚಳಿ, ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ನಿಂತಿರುವ ಶಿವಲಿಂಗ...ಶಿವಲಿಂಗದ ಪಕ್ಕದಲ್ಲೇ ಅದೇ ದಿಕ್ಕಿಗೆ ಬಾಗಿಕೊಂಡು ಕುಳಿತಿರುವ ಬಸವಣ್ಣ...ಇದು ಯಾವುದೋ ಇತ್ತೀಚಿನ ದೇವಾಲಯದ ದೃಶ್ಯವಲ್ಲ.ಕೊಡಗಿನ ವಿರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಿಂದ ಚೆಂಬೆಬೆಳ್ಳೂರು ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಕಂಡುಬಂದಿರುವ ಪುರಾತನ ದೇವಾಲಯದ ಕುರುಹು.
ಕಾಡುಪಾಲಾಗಿದ್ದ ಈ ಪ್ರದೇಶದಲ್ಲಿ ಶಿವಲಿಂಗ, ಬಸವ ಮೂರ್ತಿ, ಗರ್ಭಗುಡಿಯ ಕುರುಹು, ತೀರ್ಥಕುಂಡ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿವೆ. ಶಿವಲಿಂಗಕ್ಕೆ ಯಾವುದೇ ದೊಡ್ಡ ಹಾನಿಯಾಗದೆ ಇಂದಿಗೂ ಉಳಿದಿರುವುದು ವಿಶೇಷವೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಐಮಂಗಲ ಗ್ರಾಮದಲ್ಲಿ ಹಲವು ಪುರಾತನ ದೇವಾಲಯಗಳಲ್ಲಿ ಇಂದಿಗೂ ಪೂಜೆ-ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ರಸ್ತೆಯ ಪಕ್ಕದಲ್ಲೇ ಇದ್ದ ಈ ಮಹದೇವ ದೇವಾಲಯ ಮಾತ್ರ ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕಾಡುಪಾಲಾಗಿತ್ತು ಎನ್ನಲಾಗಿದೆ.ದೇವಾಲಯದಲ್ಲಿ ನಿತ್ಯ ಪೂಜೆ ನಿಂತುಹೋದ ಬಳಿಕ ಸ್ಥಳೀಯರಿಗೆ ಹಲವು ರೀತಿಯ ತೊಂದರೆಗಳು ಎದುರಾಗುತ್ತಿವೆ ಎಂಬ ನಂಬಿಕೆಯೂ ಗ್ರಾಮಸ್ಥರಲ್ಲಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಸಭೆ ನಡೆಸಿ, ದೇವಾಲಯದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ದೇವಾಲಯದ ಇತಿಹಾಸ ಮತ್ತು ಮುಂದಿನ ಕ್ರಮಗಳ ಕುರಿತು ಕೇರಳದ ತಂತ್ರಿಗಳನ್ನು ಸಂಪರ್ಕಿಸಿ ತಾಂಬೂಲ ಪ್ರಶ್ನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹಿಂದೆ ಮಹದೇವ ದೇವಾಲಯವಿದ್ದು, ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು ಎಂಬ ಮಾಹಿತಿ ದೊರೆತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಳೆಯ ಅರ್ಚಕರ ಕುಟುಂಬದವರು ತಲೆತಲಾಂತರಗಳಿಂದ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ನಂತರ ಕುಟುಂಬದ ಸದಸ್ಯರು ಬೇರೆಡೆ ನೆಲೆಸಿದ ಹಿನ್ನೆಲೆಯಲ್ಲಿ ನಿತ್ಯ ಪೂಜೆ ಸ್ಥಗಿತಗೊಂಡು, ದೇವಾಲಯ ಕ್ರಮೇಣ ನಿರ್ಲಕ್ಷ್ಯಕ್ಕೊಳಗಾಯಿತು ಎನ್ನಲಾಗಿದೆ.

ತಾಂತ್ರಿಕರ ಸೂಚನೆಯಂತೆ ಇದೀಗ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ. ಶಿವಲಿಂಗದ ಪೀಠದ ಪುನರ್ ನಿರ್ಮಾಣ, ತೀರ್ಥಕುಂಡ, ಗರ್ಭಗುಡಿ, ಕಲ್ಯಾಣಿ, ದೇವರ ನಡೆ, ಮೆಟ್ಟಿಲುಗಳು, ಪೌಳಿ, ತೀರ್ಥ ಸ್ನಾನಗೃಹ ಹಾಗೂ ಅರ್ಚಕರ ಗೃಹ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.
ಪ್ರಸ್ತುತ ಶಿವಲಿಂಗ ಇರುವ ಸ್ಥಳದಿಂದ ಆಗ್ನೇಯ ದಿಕ್ಕಿಗೆ ಸ್ಥಳಾಂತರಿಸಿ, ಅಗತ್ಯ ವಿಧಿ-ವಿಧಾನ ಹಾಗೂ ಹೋಮ-ಹವನಗಳ ಮೂಲಕ ಪುನರ್ ಪ್ರತಿಷ್ಠಾಪನೆ ಮಾಡುವಂತೆ ತಂತ್ರಿಗಳು ಸೂಚಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುರಾತನ ದೇವಾಲಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಗ್ರಾಮಸ್ಥರು ಹೊಂದಿದ್ದಾರೆ. ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ ದೇವಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇನ್ನು ತಂತ್ರಿಗಳ ಸೂಚನೆಯಂತೆ ಯಾವುದೇ ಜಾತಿ, ಭಾಷೆಯ ತಾರತಮ್ಯವಿಲ್ಲದೆ ಎಲ್ಲಾ ಜನಾಂಗದವರೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಇದರ ಮೊದಲ ಹೆಜ್ಜೆಯಾಗಿ  ದೇವಾಲಯದ ಆವರಣದಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಆಗಮಿಸಿದ್ದ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ಕಾಣಿಕೆ ಸಲ್ಲಿಸಿ, ದೀಪ ಬೆಳಗಿಸಿ ದೇವಾಲಯ ಪುನರುಜ್ಜೀವನ ಕಾರ್ಯಕ್ಕೆ ಕೈಜೋಡಿಸುವ ಸಂಕಲ್ಪ ಮಾಡಿದ್ರು.


ಶತಮಾನಗಳ ಇತಿಹಾಸದ ಕುರುಹು ಹೊತ್ತಿರುವ ಶಿವಲಿಂಗ...
ಕಾಡಿನ ಮಧ್ಯೆ ಪಾಳುಬಿದ್ದಿರುವ ಪುರಾತನ ದೇವಾಲಯ...
ಇದೀಗ ಗ್ರಾಮಸ್ಥರ ಒಗ್ಗಟ್ಟಿನ ಪ್ರಯತ್ನದಿಂದ ಮತ್ತೆ ಪೂಜಾ ಕೈಂಕರ್ಯ ಆರಂಭವಾಗುವ ನಿರೀಕ್ಷೆ ಮೂಡಿದೆ. ಪುರಾತನ ದೇವಾಲಯಕ್ಕೆ ಹೊಸ ರೂಪ ನೀಡುವ ಗ್ರಾಮಸ್ಥರ ಸಂಕಲ್ಪ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ:ಮಲ್ಲಿಕಾರ್ಜುನ್ ಮಡಿಕೇರಿ