ಮಗುವಿನೊಳಗೊಂದು ಮಗು: ಹುಬ್ಬಳ್ಳಿಯಲ್ಲಿ ಜಗತ್ತಿನಲ್ಲಿಯೇ ಕಾಣದ ಅಪರೂಪದ ಪ್ರಕರಣ! | ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣ ಯಶಸ್ವಿಯಾಗಿ ಹೊರತೆಗೆದ ಹುಬ್ಬಳ್ಳಿ ಕಿಮ್ಸ್
ಹುಬ್ಬಳ್ಳಿ,: ಹುಬ್ಬಳ್ಳಿಯ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಆಸ್ಪತ್ರೆಯ ವೈದ್ಯರ ತಂಡವು ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಕೇವಲ 14 ದಿನದ ಗಂಡು ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದ್ದು, ತಜ್ಞ ವೈದ್ಯರ ತಂಡ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಸುರಕ್ಷಿತವಾಗಿ ಹೊರತೆಗೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ಸೆಪ್ಟೆಂಬರ್ 23 ರಂದು ಕಿಮ್ಸ್‌ನಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗೂ ಮುನ್ನ ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಕಿಮ್ಸ್ ನ ತಜ್ಞೆ ಡಾ. ರೂಪಾಲಿ ಅವರು ಶಿಶುವಿನ ಹೊಟ್ಟೆಯೊಳಗೆ ಅಸಹಜ ವಸ್ತು ಕಾಣಿಸಿಕೊಂಡಿರುವುದನ್ನು ಗಮನಿಸಿದ್ದರು. ಆದರೆ ಅದು ಹೆರಿಗೆಗೆ ಅಡ್ಡಿಯಾಗದ ಕಾರಣ ಸಹಜ ಹೆರಿಗೆ ಮಾಡಿಸಲಾಯಿತು.
ಜನನದ ನಂತರ ಶಿಶುವಿನ ಆರೋಗ್ಯ ಸ್ಥಿತಿ ಪರಿಶೀಲನೆಯ ವೇಳೆ, ವೈದ್ಯರು ಮಗುವಿನ ಹೊಟ್ಟೆಯೊಳಗೆ ಸುಮಾರು ಎಂಟು ಸೆಂಟಿಮೀಟರ್ ಉದ್ದದ ಭ್ರೂಣದಂತಿರುವ ರಚನೆ ಪತ್ತೆಹಚ್ಚಿದರು. ತಕ್ಷಣವೇ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ, ಆ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆದಿದೆ. ನವಜಾತ ಶಿಶುವಿಗೆ ಅನಸ್ತೇಶಿಯಾ ನೀಡುವುದು ಹಾಗೂ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯಕೀಯವಾಗಿ ಸವಾಲಿನ ಕೆಲಸವಾಗಿದ್ದರೂ, ಕಿಮ್ಸ್ ವೈದ್ಯರ ತಂಡ ಅದನ್ನು ಯಶಸ್ವಿಯಾಗಿ ನಿಭಾಯಿಸಿದೆ.
ವೈದ್ಯಕೀಯ ಭಾಷೆಯಲ್ಲಿ ಈ ಅಪರೂಪದ ಸ್ಥಿತಿಯನ್ನು ‘ಫೀಟಸ್ ಇನ್ ಫೀಟು (Fetus in Fetu)’ ಎಂದು ಕರೆಯಲಾಗುತ್ತದೆ. ಇದು ಒಂದು ಭ್ರೂಣದ ದೇಹದೊಳಗೆ ಮತ್ತೊಂದು ಭ್ರೂಣ ಬೆಳೆಯುವ ಅತಿ ವಿರಳ ಘಟನೆ. ಜಗತ್ತಿನಾದ್ಯಂತ ಈ ರೀತಿಯ ಪ್ರಕರಣಗಳು ಬೆರಳೆಣಿಕೆಯಷ್ಟೇ ದಾಖಲಾಗಿವೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಈ ಶಸ್ತ್ರಚಿಕಿತ್ಸೆ ವೈದ್ಯಕೀಯ ವಲಯದಲ್ಲಿ ಮಹತ್ವದ ಸಾಧನೆ ಎಂದು ತಜ್ಞರು ಶ್ಲಾಘಿಸಿದ್ದಾರೆ.
What's Your Reaction?
Like
5
Dislike
0
Love
0
Funny
1
Angry
1
Sad
1
Wow
3
