ರಾಹುಲ್ ಗಾಂಧಿ ಸೂಚನೆಯಿಂದ ಲೆಕ್ಕಾಚಾರ ಬದಲಾವಣೆ: ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ:ಎಎಸ್ ಪೊನ್ನಣ್ಣಗೆ ಸಿಗುತ್ತಾ ಮಂತ್ರಿ ಭಾಗ್ಯ
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಮೊದಲ ಬಾರಿಗೆ ಶಾಸಕರಾದ ಹಲವು ಮಂದಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ. 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 38 ಮಂದಿ ಹೊಸಬರು ಶಾಸಕರಾಗಿ ಗೆಲುವು ಸಾಧಿಸಿದ್ದರು.ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹೊಸಬರಿಗೆ ಅವಕಾಶ ನೀಡಿರಲಿಲ್ಲ.ಇದೀಗ ಕಾಂಗ್ರೆಸ್ ಹೈಕಮಾಂಡ್ ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದೆ.
ಈ ತಿಂಗಳ ಅಂತ್ಯದೊಳಗೆ ಅಥವಾ ಆಗಸ್ಟ್ ಮೊದಲ ವಾರ ಸಂಪುಟ ವಿಸ್ತರಣೆ ನಡೆಯುವುದು ಖಚಿತವಾಗಿದ್ದು,ಪ್ರಥಮ ಬಾರಿಗೆ ಶಾಸಕರಾದ ಎಎಸ್ ಪೊನ್ನಣ್ಣ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್ ಗೆ ಶಿಫಾರಸು ಮಾಡಿದ್ದಾರೆ.ಹಿರಿಯ ಶಾಸಕರು ಮತ್ತು ಕಳೆದ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾದವರಿಗೆ ಮತ್ತೊಮ್ಮೆ ಅವಕಾಶ ನೀಡುವುದು ಬಹುತೇಕ ಖಚಿತಗೊಂಡಿತ್ತು.
ಆದರೆ ಕಳೆದ ವಾರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲು ಸಿ.ಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯ ನಾಯಕರು ತಯಾರಿಸಿದ್ದ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಹೊಸ ನಾಯಕತ್ವದ ಸೃಷ್ಟಿಸಲು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂದು ಹೇಳಿದ್ದರು.ಇದೀಗ ಎರಡನೇ ಬಾರಿ ಕೂಡ ಸಚಿವ ಸಂಪುಟ ವಿಸ್ತರಣೆ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಸಂಸತ್ ಕಲಾಪದ ಹಿನ್ನೆಲೆ ಮುಂದೂಡಿದ್ದಾರೆ.ಸಿ.ಎಂ ಡಿಕೆ ಶಿವಕುಮಾರ್, ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಪ್ರಥಮ ಬಾರಿಗೆ ಶಾಸಕರಾದವರ ಪೈಕಿ ಎಎಸ್ ಪೊನ್ನಣ್ಣ ಹಾಗೂ ಶರತ್ ಬಚ್ಚೇಗೌಡ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಮೊದಲ ಬಾರಿಗೆ ಶಾಸಕರಾದವರಿಗೆ ಅವಕಾಶ ನೀಡಿದಲ್ಲಿ ಕೊಡಗಿಗೆ ಮಂತ್ರಿ ಸ್ಥಾನ ಗ್ಯಾರಂಟಿ ಎನ್ನಲಾಗುತ್ತಿದೆ. ಇದೀಗ ಮತ್ತೊಮ್ಮೆ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ಸಿಗುವ ಆಸೆ ಚಿಗುರಿದೆ.
ಹೈಕಮಾಂಡ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಎಎಸ್ ಪೊನ್ನಣ್ಣ!
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎಂಬ ಚರ್ಚೆಗಳು ಮನ್ನಲೆಗೆ ಬಂದ ದಿನಗಳಿಂದ ಎಎಸ್ ಪೊನ್ನಣ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ.ಎಎಸ್ ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಕಾನೂನು ಸಲಹೆಗಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಹಾಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.ಅದಲ್ಲದೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೇವಾಲ ಅವರೊಂದಿಗೆ ಎಎಸ್ ಪೊನ್ನಣ್ಣ ಅವರು ನಿಕಟ ಸಂಪರ್ಕವನ್ನು ಹೊಂದಿದ್ದಾರೆ.ಈ ಮೊದಲು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಎಎಸ್ ಪೊನ್ನಣ್ಣ ಅವರ ಹೆಸರೇ ಇರಲಿಲ್ಲ.ಇದೀಗ ಹೊಸಬರಿಗೆ ಅವಕಾಶ ನೀಡಲಾಗುವುದೆಂಬ ಚರ್ಚೆಗಳು ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವಾಗ ಎಎಸ್ ಪೊನ್ನಣ್ಣ ಅವರ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಅದಲ್ಲದೇ ಪ್ರಮುಖವಾಗಿ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಯಾಟ್ ಬೀಸುತ್ತಿದ್ದಾರೆ.
13 ವರ್ಷಗಳ ಬಳಿಕ ಕೊಡಗಿಗೆ ಸಿಗುತ್ತಾ ಮಂತ್ರಿ ಭಾಗ್ಯ! 2012-13 ರಲ್ಲಿ ಜಗದೀಶ್ ಶೆಟ್ಟರ್ ನೇತೃತ್ವ ಬಿಜೆಪಿ ಸರ್ಕಾರದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ ಅಪ್ಪಚ್ಚು ರಂಜನ್ ಅವರು ಕೇವಲ 10 ತಿಂಗಳ ಕಾಲ ಸಚಿವ ಸ್ಥಾನವನ್ನು ವಹಿಸಿದ್ದರು.ಇದಾದ ಬಳಿಕ ಕಾವೇರಿ ತವರಿಗೆ ಮಂತ್ರಿ ಭಾಗ್ಯ ಲಭಿಸಲೇ ಇಲ್ಲ.2019ರಿಂದ 2023ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಗೆಲುವು ಸಾಧಿಸಿದ್ದರು, ಈ ಅವಧಿಯಲ್ಲಿ ಕೂಡ ಕೊಡಗಿಗೆ ಸಚಿವ ಸ್ಥಾನ ಸಿಗಲಿಲ್ಲ.ಕಳೆದ 13 ವರ್ಷಗಳಿಂದ ಕೊಡಗಿಗೆ ಗೆಸ್ಟ್ ಉಸ್ತುವಾರಿಗಳೇ ಬರುತ್ತಿದ್ದಾರೆ.ಇದೀಗ ಕಾಂಗ್ರೆಸ್ ಹೈಕಮಾಂಡ್ ಪ್ರಥಮ ಬಾರಿಗೆ ಶಾಸಕರಾಗಿ ಗೆಲುವು ಸಾಧಿಸಿರುವ ಶಾಸಕರಿಗೆ ಸಚಿವ ಸ್ಥಾನ ನೀಡಲು ಒಲವು ತೋರಿದ್ದು,ಶಾಸಕ ಎಎಸ್ ಪೊನ್ನಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ.ಹೊಸ ಮುಖಗಳಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಲು ಮುಂದಾದರೆ ಎಎಸ್ ಪೊನ್ನಣ್ಣ ಮಂತ್ರಿಯಾಗುವುದು ಗ್ಯಾರಂಟಿ.
ಕೊಡಗು ಜಿಲ್ಲೆಯ ಒಬ್ಬರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರವಲ್ಲ ಜಿಲ್ಲೆಯ ಜನರಲ್ಲಿದೆ.ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದು,ಜಿಲ್ಲೆಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಹೊಂದಿದ್ದೇವೆ.
ತಿತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ
What's Your Reaction?
Like
0
Dislike
0
Love
0
Funny
1
Angry
0
Sad
0
Wow
0
