INTERNATIONAL

ಗಾಝಾ ಕದನ ವಿರಾಮಕ್ಕೆ ಮೊದಲ ಹಂತದ ಒಪ್ಪಂದ: ಇಸ್ರೇಲ್–ಹಮಾಸ್ ಶಾಂತಿ ಮಾತುಕತೆ ಫಲಪ್ರದ, ಟ್ರಂಪ್ ಘೋಷಣೆ

admincoorgdaily

ಗಾಝಾ: ಮಧ್ಯಪ್ರಾಚ್ಯದಲ್ಲಿ ಶಾಂತಿಯತ್ತ ಮಹತ್ವದ ತಿರುವು ದೊರೆತಿದ್ದು, ಇಸ್ರೇಲ್ ಹಾಗೂ ಹಮಾಸ್ ಗಾಝಾ ಕದನ ವಿರಾಮದ ಮೊದಲ ಹಂತದ ಒಪ್ಪಂದಕ್ಕೆ ತಲುಪಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ಅಧಿಕೃತ ಘೋಷಣೆ ಮಾಡಿ, “ಇದು ಶಾಂತಿಯ ಹೊಸ ಅಧ್ಯಾಯದ ಆರಂಭ” ಎಂದು ಹೇಳಿದ್ದಾರೆ.

ಟ್ರಂಪ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಣೆ ಹೊರಡಿಸಿ, “ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದ ಕದನ ವಿರಾಮದ ಪ್ರಥಮ ಹಂತದ ಒಪ್ಪಂದ ತಲುಪಿದೆ. ಇದು ಜಾಗತಿಕ ಶಾಂತಿಯತ್ತದ ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದ್ದಾರೆ. ಅವರು ಈ ವಾರಾಂತ್ಯದಲ್ಲಿ ಈಜಿಪ್ಟ್‌ಗೆ ಭೇಟಿ ನೀಡಿ, ಅಂತಿಮ ಒಪ್ಪಂದದ ಸಹಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

 ಮಾತುಕತೆಯಲ್ಲಿ ಪ್ರಮುಖ ಮಧ್ಯವರ್ತಿಯಾಗಿದ್ದ ಕತಾರ್ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ, “ಒಪ್ಪಂದದ ಮೊದಲ ಹಂತದ ಎಲ್ಲಾ ಷರತ್ತುಗಳು ಹಾಗೂ ಅನುಷ್ಠಾನ ಕ್ರಮಗಳ ಬಗ್ಗೆ ಎರಡೂ ಪಕ್ಷಗಳು ಸ್ಪಷ್ಟ ಒಪ್ಪಿಗೆ ನೀಡಿವೆ” ಎಂದು ಘೋಷಿಸಿದೆ.

 ಹಮಾಸ್ ತನ್ನ ಪ್ರಕಟಣೆಯಲ್ಲಿ, “ಗಾಝಾದ ಮೇಲಿನ ಯುದ್ಧ ಅಂತ್ಯ, ಇಸ್ರೇಲ್ ಸೇನೆಯ ಹಿಂತೆಗೆತ, ಮಾನವೀಯ ಸಹಾಯದ ನಿರ್ವಿಘ್ನ ಪ್ರವೇಶ ಹಾಗೂ ಕೈದಿಗಳ ವಿನಿಮಯದ ಕುರಿತಂತೆ ಸ್ಪಷ್ಟ ಒಪ್ಪಂದ ತಲುಪಿದೆ” ಎಂದು ತಿಳಿಸಿದೆ.

 ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ತುರ್ತು ಸಚಿವ ಸಂಪುಟ ಸಭೆ ಕರೆಯುವ ಮೂಲಕ ಕದನ ವಿರಾಮದ ಒಪ್ಪಂದಕ್ಕೆ ಅಧಿಕೃತ ಅನುಮೋದನೆ ನೀಡುವ ನಿರೀಕ್ಷೆಯಿದೆ. “ಇದು ಇಸ್ರೇಲ್‌ಗೆ ಮಹತ್ವದ ದಿನ. ನಮ್ಮ ಅಪಹರಿಸಲ್ಪಟ್ಟ ಎಲ್ಲರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಸರ್ಕಾರ ಬದ್ಧವಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.