ಆಧುನಿಕ ಜೀವನದಲ್ಲಿ ಯೋಗದ ಮಹತ್ವ
ಲೇಖನ:ಪಿಪಿ ಸುಕುಮಾರ ಹಾಕತ್ತೂರು
ಯೋಗವು ಭಾರತದ ತವರೂರು. ಪ್ರಾಚೀನ ಋಷಿಗಳ ಅಮೂಲ್ಯ ಕೊಡುಗೆಯಾಗಿರುವ ಯೋಗ ದೇಹ, ಮನಸು ಮತ್ತು ಆತ್ಮದ ಸಮತೋಲನ ಸಾಧಿಸುವ ಜೀವನ ಪದ್ಧತಿಯಾಗಿದೆ. ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ.
ಇಂದಿನ ವೇಗದ ಮತ್ತು ಒತ್ತಡದ ಜೀವನದಲ್ಲಿ ಯೋಗದ ಮಹತ್ವ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಆತಂಕ, ನಿದ್ರಾಹೀನತೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆ ನಿವಾರಿಸಲು ಯೋಗ ಅತ್ಯುತ್ತಮ ಪರಿಹಾರವಾಗಿದೆ.
ಪ್ರತಿದಿನ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಮನಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಅಲ್ಲದೆ ದೇಹದ ಚಟುವಟಿಕೆ ಹೆಚ್ಚುತ್ತದೆ, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.
ಪ್ರಾಣಾಯಾಮ ಮತ್ತು ದೇಹದ ಏಕಾಗ್ರತೆ ಹೆಚ್ಚುವುದರ ಜೊತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನತೆ ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಯೋಗವು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಅತ್ಯಗತ್ಯವಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಉದ್ದೇಶ ಯೋಗದ ಮಹತ್ವ ಜನರಿಗೆ ತಿಳಿಸುವುದು ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುವುದಾಗಿದೆ. ಶಾಲೆಗಳು, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು, ಯುವ ಸಂಘಟನೆಗಳು ಯೋಗ ಶಿಬಿರಗಳ ಮೂಲಕ ಅರಿವು ಮೂಡಿಸುತ್ತಿವೆ.
ಯೋಗವು ಕೇವಲ ವ್ಯಾಯಾಮವಲ್ಲ. ಅದು ಉತ್ತಮ ಆರೋಗ್ಯ, ಆತ್ಮವಿಶ್ವಾಸ ಮತ್ತು ಸಂತೋಷದ ಬದುಕಿನ ಮಾರ್ಗವಾಗಿದೆ. ವಿಶೇಷವಾಗಿ ಯುವಜನತೆ ಯೋಗವನ್ನು ತಮ್ಮ ದಿನದ ಜೀವನದ ಭಾಗವಾಗಿಸುವ ಪ್ರಯತ್ನ ಮಾಡಬೇಕು. ಇದು ಕೇವಲ ದೈಹಿಕ ವ್ಯಾಯಾಮವಲ್ಲ, ಆರೋಗ್ಯಕರ ಮತ್ತು ಸಂತೋಷಭರಿತ ಜೀವನಕ್ಕೆ ದಾರಿ ತೋರಿಸುವ ಜೀವನಶೈಲಿಯಾಗಿದೆ.
ಇಂದಿನ ಯುವಜನತೆ ದೇಶದ ಭವಿಷ್ಯದ ಶಕ್ತಿಯಾಗಿದ್ದು, ಅವರ ಆರೋಗ್ಯ, ಚಿಂತನೆ ಮತ್ತು ಜೀವನಶೈಲಿಯು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯವಂತ ಮತ್ತು ಶಕ್ತಿಶಾಲಿ ಯುವ ಸಮುದಾಯ ನಿರ್ಮಿಸಲು ಯೋಗ ಅತ್ಯವಶ್ಯಕ. ಆಧುನಿಕ ಜೀವನಶೈಲಿ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ, ಅನಿಯಮಿತ ಆಹಾರ ಪದ್ಧತಿಯಿಂದ ಯೋಗ ಇಂದಿನ ಸಮಾಜಕ್ಕೆ ಅತಿ ಮುಖ್ಯವಾಗಿದೆ.

