ಇನ್ನು ಸ್ನ್ಯಾಪ್ ಚಾಟ್ ಮಾಡಿದರೆ ಶುಲ್ಕ ಪಾವತಿಸಬೇಕು!

ಇನ್ನು ಸ್ನ್ಯಾಪ್ ಚಾಟ್ ಮಾಡಿದರೆ ಶುಲ್ಕ ಪಾವತಿಸಬೇಕು!
Photo credit: INDIA TODAY

ಲಂಡನ್: ಜನಪ್ರಿಯ ಮೆಸೇಜಿಂಗ್ ಆಪ್ ಸ್ನ್ಯಾಪ್‌ಚಾಟ್ ತನ್ನಲ್ಲಿ ಸಂಗ್ರಹಿಸಲಾದ ಫೋಟೋ ಹಾಗೂ ವೀಡಿಯೊಗಳಿಗೆ ಶೀಘ್ರದಲ್ಲೇ ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಕ್ರಮವು ಹಲವು ವರ್ಷಗಳಿಂದ ಉಚಿತ ಶೇಖರಣೆಯ ಸೌಲಭ್ಯವನ್ನು ಬಳಸಿಕೊಂಡು ದೊಡ್ಡ ಆರ್ಕೈವ್ ನಿರ್ಮಿಸಿಕೊಂಡಿದ್ದ ಬಳಕೆದಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

2016ರಲ್ಲಿ ಪರಿಚಯವಾದ ಮೆಮೊರೀಸ್ ವೈಶಿಷ್ಟ್ಯವು, ಬಳಕೆದಾರರು ಶೇರ್ ಮಾಡಿದ ಸ್ನ್ಯಾಪ್ ಶಾಶ್ವತವಾಗಿ ಉಳಿಸಿಕೊಳ್ಳಲು ಅವಕಾಶ ನೀಡುತ್ತಿತ್ತು. ಆದರೆ ಈಗ 5 ಜಿಬಿ ಗಿಂತ ಹೆಚ್ಚಿನ ಮೆಮೊರೀಸ್ ಹೊಂದಿರುವವರು ತಮ್ಮ ಡೇಟಾವನ್ನು ಉಳಿಸಿಕೊಳ್ಳಲು ಪಾವತಿಸಬೇಕಾಗಿದೆ.

ಸ್ನ್ಯಾಪ್ ಕಂಪನಿಯ ಪ್ರಕಾರ, 100GB ಶೇಖರಣಾ ಪ್ಲ್ಯಾನ್‌ಗೆ ತಿಂಗಳಿಗೆ ಸುಮಾರು ₹165 ವೆಚ್ಚವಾಗಲಿದೆ.ಅದೇ ವೇಳೆ Snapchat+ ಪ್ಲ್ಯಾನ್ ಸುಮಾರು ₹330 ಪ್ರತಿ ತಿಂಗಳಿಗೆ ದೊರೆಯುತ್ತಿದ್ದು, ಇದರಲ್ಲಿ 250GB ಶೇಖರಣಾ ಮಿತಿಯನ್ನು ಒದಗಿಸಲಾಗಿದೆ.Snapchat Premium ಗ್ರಾಹಕರಿಗೆ ಇನ್ನಷ್ಟು ಶೇಖರಣಾ ಸೌಲಭ್ಯ ಲಭ್ಯವಾಗಲಿದೆ.

 ಸ್ನ್ಯಾಪ್ ತನ್ನ ಬ್ಲಾಗ್‌ನಲ್ಲಿ “ಈ ಬದಲಾವಣೆಗಳು ನಮ್ಮ ಸಮುದಾಯಕ್ಕೆ ಉತ್ತಮ ಅನುಭವ ನೀಡಲು ಅಗತ್ಯ. 5GB ಗಿಂತ ಕಡಿಮೆ ಮೆಮೊರೀಸ್ ಹೊಂದಿರುವ ಬಹುಪಾಲು ಬಳಕೆದಾರರಿಗೆ ಯಾವುದೇ ಬದಲಾವಣೆ ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

 ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ಕ್ರಮವನ್ನು ಟೀಕಿಸಿದ್ದಾರೆ. “ಉಚಿತ ಸೇವೆಯನ್ನು ನೀಡಿದ ನಂತರ ಪಾವತಿ ಕಡ್ಡಾಯಗೊಳಿಸುವುದು ಅನ್ಯಾಯ ಹಾಗೂ ದುರಾಸೆ” ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಹಲವು ವರ್ಷಗಳ ಮೆಮೊರೀಸ್ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಟೆಕ್ ತಜ್ಞರ ಪ್ರಕಾರ, ಭವಿಷ್ಯದಲ್ಲಿ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳೂ ಸಂಗ್ರಹಣೆಗೆ ಶುಲ್ಕ ವಿಧಿಸುವುದು ಅನಿವಾರ್ಯ. “ನಾವು ಕಡಿಮೆ ಪೋಸ್ಟ್ ಮಾಡುತ್ತಿದ್ದರೂ ಹೆಚ್ಚು ಶೇಖರಿಸುತ್ತಿದ್ದೇವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ನ್ಯಾಪ್‌ಚಾಟ್ ಈಗಾಗಲೇ 900 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.