ಪಡಿತರ ಚೀಟಿಗೆ ಇ-ಕೆವೈಸಿಗೆ ನ.10 ಕೊನೆ ಗಡುವು: ಕೊಡಗಿನಲ್ಲಿ 38,044 ಜನ ಬಾಕಿ
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದ್ದು, ಬಾಕಿ ಇರುವವರು ತಪ್ಪದೇ ಗಡುವಿನೊಳಗೆ ಇ-ಕೆವೈಸಿ ಮಾಡಿಸಬೇಕೆಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳ ಪೈಕಿ ನ.3ರವರೆಗೆ 2,26,30,747 ಮಂದಿ ಇ-ಕೆವೈಸಿ ಮಾಡಿಸಿದ್ದಾರೆ. ಇನ್ನೂ 41,33,529 ಮಂದಿ ಬಾಕಿ ಇದ್ದಾರೆ.
ಈಗಾಗಲೇ ಒಂದು ಬಾರಿ ಗಡುವು ವಿಸ್ತರಿಸಲಾಗಿದ್ದು, ನ.10ರ ನಂತರ ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಬಾಕಿ ಉಳಿದವರು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ನ.10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಕೊಡಗಿನಲ್ಲಿ ಶೇ.80.96% ಪೂರ್ಣ;
ಜಿಲ್ಲೆಯಲ್ಲಿ ನ.2ರವರೆಗೆ ಒಟ್ಟು 1,99,801 ಸದಸ್ಯರಲ್ಲಿ 1,61,757 ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿದ್ದು, ಶೇ.80.96% ರಷ್ಟು ಪೂರ್ಣಗೊಂಡಿದೆ.ಇನ್ನೂ 38,044 ಸದಸ್ಯರು ಇಕೆವೈಸಿ ಬಾಕಿ ಇದ್ದಾರೆ.
ಮೊಬೈಲ್ ಆ್ಯಪ್ / ನ್ಯಾಯಬೆಲೆ ಅಂಗಡಿ ಮೂಲಕ 1,58,339 ಸದಸ್ಯರು ಇ-ಕೆವೈಸಿ ಮಾಡಿಸಿಕೊಂಡಿದ್ದು, ಮೊಬೈಲ್ ಅನ್ನ ಸೇವೆ ಆ್ಯಪ್ ಮೂಲಕ ಕೇವಲ 3,418 ಸದಸ್ಯರು ಮಾತ್ರ ಮಾಡಿಸಿಕೊಂಡಿದ್ದಾರೆ. ಮೊಬೈಲ್ ಆ್ಯಪ್ ಬಳಕೆ ಇನ್ನೂ ತೀರಾ ಕಡಿಮೆ ಇದೆ.
ತಾಲ್ಲೂಕುವಾರು ಮಾಹಿತಿ;
ಕೊಡಗು ಜಿಲ್ಲೆಯಲ್ಲಿ ತಾಲೂಕುವಾರು ಇ-ಕೆವೈಸಿ ಪ್ರಗತಿಯಲ್ಲಿ ಸೋಮವಾರಪೇಟೆ ತಾಲೂಕು ಮೊದಲ ಸ್ಥಾನದಲ್ಲಿದ್ದರೆ, ಪೊನ್ನಂಪೇಟೆ ತಾಲೂಕು ಕೊನೆಯ ಸ್ಥಾನದಲ್ಲಿದೆ.
ಸೋಮವಾರಪೇಟೆಯಲ್ಲಿ ಒಟ್ಟು 44,408ರಲ್ಲಿ 37,908 ಮಂದಿ ಪೂರ್ಣಗೊಳಿಸಿದ್ದು, ಶೇ.85.36% ಸಾಧನೆಯಾಗಿದೆ. ಬಾಕಿ 6,500 ಮಂದಿ ಇದ್ದಾರೆ.
ಕುಶಾಲನಗರದಲ್ಲಿ ಒಟ್ಟು 41,998ರಲ್ಲಿ 34,953 ಮಂದಿ ಪೂರ್ಣಗೊಳಿಸಿದ್ದು, ಶೇ.83.23% ಸಾಧನೆಯಾಗಿದೆ. ಬಾಕಿ 7,045 ಮಂದಿ ಇದ್ದಾರೆ.
ಮಡಿಕೇರಿಯಲ್ಲಿ ಒಟ್ಟು 46,405ರಲ್ಲಿ 37,742 ಮಂದಿ ಪೂರ್ಣಗೊಳಿಸಿದ್ದು, ಶೇ.81.33% ಸಾಧನೆಯಾಗಿದೆ. ಬಾಕಿ 8,663 ಮಂದಿ ಇದ್ದಾರೆ.
ವಿರಾಜಪೇಟೆಯಲ್ಲಿ ಒಟ್ಟು 37,930ರಲ್ಲಿ 29,227 ಮಂದಿ ಪೂರ್ಣಗೊಳಿಸಿದ್ದು, ಶೇ.77.06% ಸಾಧನೆಯಾಗಿದೆ. ಬಾಕಿ 8,703 ಮಂದಿ ಇದ್ದಾರೆ.
ಪೊನ್ನಂಪೇಟೆಯಲ್ಲಿ ಒಟ್ಟು 29,060ರಲ್ಲಿ 21,927 ಮಂದಿ ಪೂರ್ಣಗೊಳಿಸಿದ್ದು, ಶೇ.75.45% ಸಾಧನೆಯಾಗಿದೆ. ಬಾಕಿ 7,133 ಮಂದಿ ಇದ್ದಾರೆ.
ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ;
ಪಡಿತರ ಚೀಟಿದಾರರ ಇಕೆವೈಸಿ ಮಾಡಲು ಸರ್ಕಾರ ಗ್ರಾಹಕರಿಗೆ ಸಹಾಯವಾಗಲು ಅನ್ನ ಸೇವೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದೆ.ಆದರೆ ಅನ್ನ ಸೇವೆ ಆ್ಯಪ್ ನಲ್ಲಿ ಇಕೆವೈಸಿ ಮಾಡಲು ಪಡಿತರ ಚೀಟಿಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಇರಲೇಬೇಕು. ಹಾಗೂ ಒಟಿಪಿ ದಾಖಲಿಸಿದ್ದಲ್ಲಿ ಮಾತ್ರ ಅನ್ನಸೇವೆ ಆ್ಯಪ್ ನಲ್ಲಿ ಇಕೆವೈಸಿ ಪೂರ್ಣಗೊಳಿಸಲು ಸಾಧ್ಯ.ಅದಲ್ಲದೇ ಅನ್ನಸೇವೆ ಆ್ಯಪ್ ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ಇಕೆವೈಸಿ ಮಾಡಲು ಸಾಧ್ಯವಾಗುತ್ತಿಲ್ಲ.
ಮೊಬೈಲ್ ಆ್ಯಪ್ ನಲ್ಲಿ ಇಕೆವೈಸಿ ಮಾಡಲು ಸಾಧ್ಯವಾಗದವರೂ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ನವೆಂಬರ್ 10ರೊಳಗೆ ತಮ್ಮ ಇಕೆವೈಸಿ ಪೂರ್ಣಗೊಳಿಸಬೇಕು.