SPECIAL STORY

ಸತ್ತವರಿಗೂ ಗೃಹಲಕ್ಷ್ಮಿ ಹಣ: ಕೊಡಗಿನಲ್ಲಿ ಮೃತರ ಖಾತೆಗೆ ಎಷ್ಟು ಲಕ್ಷ ರೂ ಜಮೆಯಾಗಿದೆ ಗೊತ್ತೇ!

K.M ISMAIL KANDAKKARE

ಸತ್ತವರಿಗೂ ಗೃಹಲಕ್ಷ್ಮಿ ಹಣ: ಕೊಡಗಿನಲ್ಲಿ ಮೃತರ ಖಾತೆಗೆ ಎಷ್ಟು ಲಕ್ಷ ರೂ ಜಮೆಯಾಗಿದೆ ಗೊತ್ತೇ!
(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ;ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ತಿಂಗಳಿಗೆ ಮನೆಯ ಯಜಮಾನಿಗೆ 2000 ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಆಗಸ್ಟ್ ತಿಂಗಳಿಗೆ ಮೂರು ವರ್ಷ ಪೂರ್ಣಗೊಂಡಿದೆ.ಆದರೆ ಇದೀಗ ಗೃಹಲಕ್ಷ್ಮಿ ಫಲಾನುಭವಿಗಳು ಮರಣವೊಂದಿದ ಬಳಿಕವೂ ಅವರ ಖಾತೆಗೆ ಹಣ ಜಮೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಕೊಡಗು ಜಿಲ್ಲೆಯಲ್ಲಿ 2,736 ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು ಮರಣವೊಂದಿದ್ದಾರೆ.ಇದರ ಪೈಕಿ 865 ಮಂದಿ ಫಲಾನುಭವಿಗಳಿಗೆ ಮರಣವೊಂದಿದ ಬಳಿಕವೂ ಅವರ ಖಾತೆಗೆ ಹಣ ಜಮೆಯಾಗಿದೆ. ಜಿಲ್ಲೆಯಲ್ಲಿ ಮರಣವೊಂದಿದ 865 ಫಲಾನುಭವಿಗಳ ಖಾತೆಗೆ 4,399 ಕಂತುಗಳಲ್ಲಿ 87ಲಕ್ಷದ 98 ಸಾವಿರ ರೂ ಜಮೆಯಾಗಿದೆ.
ರಾಜ್ಯದಲ್ಲಿ 117 ಕೋಟಿ ರೂ ಮರಣವೊಂದಿರುವ ಫಲಾನುಭವಿಗಳ ಬ್ಯಾಂಕ್ ಖಾತೆ ಜಮೆಯಾಗಿದೆ.

4.25 ಲಕ್ಷ ರೂ ವಸೂಲು:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರಣವೊಂದಿದ ಬಳಿಕ ಅವರ ಖಾತೆಗೆ ಜಮೆಯಾಗಿರುವ ಹಣವನ್ನು ಅವರ ಖಾತೆಯಿಂದ ಸರ್ಕಾರ ವಸೂಲು ಮಾಡುತ್ತಿದೆ.
ರಾಜ್ಯದಲ್ಲಿ ‌ಮರಣವೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದ 117 ಕೋಟಿ ರೂ ಪೈಕಿ ಇದುವರೆಗೆ  30 ಕೋಟಿ ರೂ ಮಾತ್ರ‌ ವಾಪಾಸ್ ಆಗಿದೆ.ಕೊಡಗು ಜಿಲ್ಲೆಯಲ್ಲಿ ಮೃತಪಟ್ಟವರ ಖಾತೆಯಿಂದ ಇದುವರೆಗೆ ಕೇವಲ 4 ಲಕ್ಷದ 25 ಸಾವಿರ ಮಾತ್ರ ಇದುವರೆಗೆ ವಸೂಲು ಮಾಡಲಾಗಿದೆ.ಇನ್ನೂ 83 ಲಕ್ಷ ರೂ ವಾಪಾಸು ಪಡೆಯಬೇಕಾಗಿದೆ.
ಮೃತಪಟ್ಟವರ ಖಾತೆಯಿಂದ ಹಣ ಮರಳಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಜಿಲ್ಲೆಯಲ್ಲಿ ಒಟ್ಟು 2,736 ಫಲಾನುಭವಿಗಳು ಮರಣ ಹೊಂದಿದೆ.ಇದರಲ್ಲಿ ‌,865 ಮಂದಿಗೆ ಮರಣವೊಂದಿದ ನಂತರವೂ ಹಣ ಜಮೆಯಾಗಿದೆ‌. ಅವರಲ್ಲಿ 57 ಮಂದಿಯ ಖಾತೆಯಿಂದ ಸರ್ಕಾರ ಹಣವನ್ನು ವಾಪಸ್ ಪಡೆದಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 711 ಮಂದಿ ಮೃತಪಟ್ಟಿದ್ದು, 28 ಮಂದಿಯಿಂದ 2,15,000 ರೂ. ವಸೂಲಿ ಮಾಡಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 644 ಮಂದಿ ಮೃತಪಟ್ಟಿದ್ದು, 8 ಮಂದಿಯಿಂದ 54,000 ರೂ. ವಸೂಲಿ ಮಾಡಲಾಗಿದೆ.
ಕುಶಾಲನಗರ ತಾಲ್ಲೂಕಿನಲ್ಲಿ 558 ಮಂದಿ ಮೃತಪಟ್ಟಿದ್ದು, 14 ಮಂದಿಯಿಂದ 1,08,000 ರೂ. ಇದುವರೆಗೆ ವಸೂಲಿ ಮಾಡಲಾಗಿದ್ದು ವಿರಾಜಪೇಟೆ ತಾಲ್ಲೂಕಿನಲ್ಲಿ‌434 ಮಂದಿ ಮೃತಪಟ್ಟಿದ್ದು, ಕೇವಲ 2 ಮಂದಿಯಿಂದ 18,000 ರೂ. ವಸೂಲಿ ಮಾಡಲಾಗಿದೆ.
 ಪೊನ್ನಂಪೇಟೆ ತಾಲ್ಲೂಕಿನಲ್ಲಿ 389 ಮಂದಿ ಮೃತಪಟ್ಟಿದ್ದು, 5 ಮಂದಿಯಿಂದ 30,000 ರೂ. ವಸೂಲಿ ಮಾಡಲಾಗಿದೆ.

ಗೃಹಲಕ್ಷ್ಮಿ ಫಲಾನುಭವಿಗಳ ಸಂಖ್ಯೆ:

ಮಡಿಕೇರಿ:31,549
ಸೋಮವಾರಪೇಟೆ:25,286
ಕುಶಾಲನಗರ; 23,179
ವಿರಾಜಪೇಟೆ: 21,691
ಪೊನ್ನಂಪೇಟೆ :19,167

ಒಟ್ಟು:1,20,872


ಕೊಡಗಿನಲ್ಲಿ 715 ಕೋಟಿ ಗೃಹಲಕ್ಷ್ಮಿ ಹಣ ಪಾವತಿ:

ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾದ ಆಗಸ್ಟ್ 2023 ರಿಂದ ಜೂನ್ 2026ರವರಗೆ  ಒಟ್ಟು 715.41 ಕೋಟಿ ರೂ ಅನುದಾನ ಪಾವತಿಯಾಗಿದೆ.
ಫೆಬ್ರವರಿ-ಮಾರ್ಚ್ 2025 ಮತ್ತು ಮಾರ್ಚ್ 2026 ಹಣ ಇದುವರೆಗೆ ಫಲಾನುಭವಿಗಳ ಖಾತೆಗೆ ಇದುವರೆಗೆ ಜಮೆಯಾಗಿಲ್ಲ.


 ಮೃತಪಟ್ಟ ಮಹಿಳೆಯರ ಖಾತೆಗೂ ಜಮೆ ಆಗಿದ್ದ ಗೃಹಲಕ್ಷ್ಮಿ ಹಣವನ್ನು ಸರ್ಕಾರ ವಸೂಲು ಮಾಡುತ್ತಿದೆ. ಇಂತಹ ಖಾತೆಗಳಿಗೆ ವರ್ಗವಾಗಿದ್ದ 117 ಕೋಟಿ ರೂ. ಪೈಕಿ 30 ಕೋಟಿ ರೂ. ಅನ್ನು ಯಶಸ್ವಿಯಾಗಿ ವಾಪಸ್ ಪಡೆದಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ 117 ಕೋಟಿ ಹಣವು ಮೃತಪಟ್ಟವರ ಖಾತೆಗೆ ಜಮೆ ಆಗಿರುವುದು ಪತ್ತೆ ಆಗಿದ್ದು, ಅದನ್ನು ವಾಪಸು ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 30 ಕೋಟಿ ವಾಪಸು ಬಂದಿದೆ.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಹೋಗಿಲ್ಲ. ಆ ಹಣ ಖಜಾನೆಯಿಂದಲೇ ಬಿಡುಗಡೆಯಾಗಿಲ್ಲ. ಅದನ್ನು ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲಿ ಯಾವುದೇ ದುರುಪಯೋಗ ನಡೆದಿಲ್ಲ.

ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ