ಕೊಡಗಿನಲ್ಲಿ 6 ವರ್ಷದಲ್ಲಿ 310 ಮಕ್ಕಳು ಗರ್ಭದಲ್ಲೇ ಅಂತ್ಯ, 336 ಶಿಶುಗಳು ಹುಟ್ಟಿದ ಬಳಿಕ ಸಾವು
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶಿಶು ಮರಣ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗಿದ್ದು, ಕಳೆದ 6 ವರ್ಷದಲ್ಲಿ 336 ಶಿಶುಗಳು ಹುಟ್ಟಿದ ಬಳಿಕ ಹಾಗೂ 310 ಮಕ್ಕಳು ಹುಟ್ಟುವ ಮುನ್ನವೇ ತಾಯಿಯ ಗರ್ಭದಲ್ಲೇ ಮೃತಪಟ್ಟಿದ್ದಾರೆ. ಒಟ್ಟು 646 ಮಕ್ಕಳು ಬಲಿಯಾಗಿರುವುದು ಆರೋಗ್ಯ ಇಲಾಖೆಯ ಅಧಿಕೃತ ವರದಿಯಿಂದ ಬಹಿರಂಗವಾಗಿದೆ.
ಜಿಲ್ಲೆಯಲ್ಲಿ ಪ್ರತೀ 53ಜನಕ್ಕೆ ಒಂದು ಮಗು ಸಾವನ್ನಪ್ಪುತ್ತಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಜನನ ಪ್ರಮಾಣ ಕಡಿಮೆ ಇದೆ.ಕೊಡಗಿನಲ್ಲಿ 2021ರಿಂದ 26ರ ಜುಲೈವರೆಗೆ 34,469 ಮಕ್ಕಳು ಜನಿಸಿದ್ದಾರೆ.
ಜಿಲ್ಲೆಯಲ್ಲಿ ಶಿಶು ಮರಣ ಹಾಗೂ ಗರ್ಭದಲ್ಲೇ ಕಂದಮ್ಮಗಳು ಸಾವನ್ನಪ್ಪುತ್ತಿರುವ ಘಟನೆಗಳು ಆತಂಕಕಾರಿಯಾಗಿದೆ.
ಆರೋಗ್ಯ ಇಲಾಖೆಯಿಂದ ಲಭ್ಯವಾಗಿರುವ 2021-22 ರಿಂದ 2026-27ರ ಜುಲೈ ವರೆಗಿನ ವರದಿಯ ಪ್ರಕಾರ, 2021-22ರಲ್ಲಿ 6607 ಜನನದಲ್ಲಿ 49 ಶಿಶು ಸಾವು ಮತ್ತು 89 Still Birth(ಹುಟ್ಟುವ ಮೊದಲೇ ಸತ್ತರೆ)
ಸೇರಿ 138 ಸಾವು ಸಂಭವಿಸಿದೆ. 2022-23ರಲ್ಲಿ 6971 ಜನನದಲ್ಲಿ 67 ಶಿಶು ಮರಣ, 79 Still birth ಸೇರಿ 146 ಶಿಶುಗಳು ಸಾವನ್ನಪ್ಪಿದ್ದಾರೆ., 2023-24ರಲ್ಲಿ 6420 ಜನನದಲ್ಲಿ 48 ಶಿಶಿಮರಣ ಹಾಗೂ 29 ಮಕ್ಕಳು ಗರ್ಭದಲ್ಲೇ ಸಾವನ್ನಪ್ಪಿದ್ದಾರೆ. 2024-25ರಲ್ಲಿ 6287 ಜನನದಲ್ಲಿ 60 ಶಿಶು ಮರಣ ಹಾಗೂ 60 Still birth ಸಾವು ಸಂಭವಿಸಿದೆ.
ಆದರೆ 2025-26ರಲ್ಲಿ ಅತೀ ಹೆಚ್ಚು ಶಿಶು ಮರಣ ಸಂಭವಿಸಿದ್ದು, 6436 ಜನನದಲ್ಲಿ 93 ಶಿಶು ಸಾವು ಮತ್ತು 45 Still Birth ಸೇರಿ ಒಟ್ಟು 138 ಮಕ್ಕಳು ಮೃತಪಟ್ಟಿದ್ದಾರೆ. ಇದರ IMR 14.45 ಆಗಿದ್ದು, 5 ವರ್ಷದಲ್ಲೇ ಅತಿ ಹೆಚ್ಚು. ಅದರಲ್ಲೂ ಜೂನ್-25ರಲ್ಲಿ ಒಂದೇ ತಿಂಗಳು 472 ಜನನದಲ್ಲಿ 16 ಶಿಶುಗಳು ಮೃತಪಟ್ಟಿದ್ದಾರೆ.
ಪ್ರಸಕ್ತ ವರ್ಷ 2026-27ರ ಕೇವಲ 4 ತಿಂಗಳಲ್ಲಿ (ಏಪ್ರಿಲ್-ಜುಲೈ) 1748 ಜನನದಲ್ಲಿ 19 ಶಿಶು ಸಾವು ಮತ್ತು 8 Still Birth ಸೇರಿ 27 ಮಕ್ಕಳು ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ 5, ಮೇ ನಲ್ಲಿ 5, ಜೂನ್ ನಲ್ಲಿ 4, ಜುಲೈ ನಲ್ಲಿ 5 ಶಿಶುಗಳು ಮೃತಪಟ್ಟಿದ್ದಾರೆ.
ಒಟ್ಟು 6 ವರ್ಷದಲ್ಲಿ 34469 ಜೀವಂತ ಜನನದಲ್ಲಿ 646 ಮಕ್ಕಳು ಬಲಿಯಾಗಿರುವ ಆಘಾತಕಾರಿ ಸಂಗತಿ ಆರೋಗ್ಯ ಇಲಾಖೆಯ ಮಾಹಿತಿಯಿಂದಲೇ ಬಹಿರಂಗಗೊಂಡಿದೆ.
ಹುಟ್ಟಿದ ಮೊದಲ ದಿನವೇ 55 ಶಿಶುಗಳು ಸಾವು;6 ವರ್ಷದಲ್ಲಿ ಒಟ್ಟು 61 ಮಕ್ಕಳು ಹುಟ್ಟುವಾಗ ಉಸಿರುಕಟ್ಟಿ ಸಾವು:
ಜಿಲ್ಲೆಯಲ್ಲಿ ಕಳೆದ 6 ವರ್ಷದಲ್ಲಿ ಮೃತಪಟ್ಟ 336 ಶಿಶುಗಳಲ್ಲಿ 55 ಮಕ್ಕಳು ಹುಟ್ಟಿದ ಮೊದಲ ದಿನವೇ ಸಾವನ್ನಪ್ಪಿದ್ದರೆ, 167 ಮಕ್ಕಳು 29 ದಿನದಿಂದ 1 ವರ್ಷದೊಳಗೆ ಮೃತಪಟ್ಟಿದ್ದಾರೆ.
6 ವರ್ಷದಲ್ಲಿ ಒಟ್ಟು 61 ಮಕ್ಕಳು ಹುಟ್ಟುವಾಗ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಇದರಲ್ಲಿ 2021-22ರಲ್ಲಿ 3, 2022-23ರಲ್ಲಿ 16, 2023-24ರಲ್ಲಿ 7, 2024-25ರಲ್ಲಿ 8 ಮತ್ತು ಕಳೆದ ವರ್ಷ 2025-26ರಲ್ಲಿ ಅತಿ ಹೆಚ್ಚು 27 ಮಕ್ಕಳು ಆಸ್ಫಿಕ್ಸಿಯಾದಿಂದಲೇ ಬಲಿಯಾಗಿದ್ದಾರೆ.
6 ವರ್ಷದಲ್ಲಿ 130 ಮಕ್ಕಳು ಇತರೆ ಕಾರಣದಿಂದ ಮೃತಪಟ್ಟಿದ್ದಾರೆ.
ಸೆಪ್ಸಿಸ್ (ರಕ್ತ ಸೋಂಕು) ದಿಂದ 6 ವರ್ಷದಲ್ಲಿ 34 ಮಕ್ಕಳು ಬಲಿಯಾಗಿದ್ದಾರೆ. 2025-26ರಲ್ಲಿ 16, 2022-23ರಲ್ಲಿ 8 ಮಕ್ಕಳು ಇದರಿಂದ ಮೃತಪಟ್ಟಿದ್ದಾರೆ.
ನ್ಯುಮೋನಿಯಾದಿಂದ 29 ಮಕ್ಕಳು ಬಲಿಯಾಗಿದ್ದು, 2021-22ರಲ್ಲಿ ಅತಿ ಹೆಚ್ಚು 12, ನಂತರ 4, 3, 4, 6 ಮಕ್ಕಳು ವರ್ಷವಾರು ಬಲಿಯಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ 28 ಮಕ್ಕಳು ಸಾವನ್ನಪ್ಪಿದ್ದಾರೆ. 2022-23, 2023-24, 2024-25ರಲ್ಲಿ ತಲಾ 9, 9, 10 ಮಕ್ಕಳು ಬಲಿಯಾಗಿದ್ದಾರೆ.
ಕಡಿಮೆ ತೂಕದಿಂದ 21 ಮಕ್ಕಳು, ಅಕಾಲಿಕ ಜನನದಿಂದ 15 ಮಕ್ಕಳು ಬಲಿಯಾಗಿದ್ದಾರೆ. 2023-24ರಲ್ಲಿ ಕಡಿಮೆ ತೂಕದಿಂದ 13 ಮಕ್ಕಳು ಮತ್ತು 2024-25ರಲ್ಲಿ ಅಕಾಲಿಕ ಜನನದಿಂದ 14 ಮಕ್ಕಳು ಮೃತಪಟ್ಟಿದ್ದಾರೆ.
ಕಾಮಾಲೆಯಿಂದ 8 ಮಕ್ಕಳು (2021-22ರಲ್ಲಿ 6, 2025-26ರಲ್ಲಿ 2) ಮತ್ತು ಪೋಲಿಯೋದಿಂದ 10 ಮಕ್ಕಳು (ಎಲ್ಲಾ 10 ಮಕ್ಕಳು 2025-26ರಲ್ಲಿ) ಮೃತಪಟ್ಟಿದ್ದಾರೆ.
ಒಟ್ಟು 6 ವರ್ಷದಲ್ಲಿ 336 ಶಿಶು ಸಾವುಗಳಲ್ಲಿ ಆಸ್ಫಿಕ್ಸಿಯಾ 61, ಇತರೆ 130, ಸೆಪ್ಸಿಸ್ 34, ನ್ಯುಮೋನಿಯಾ 29, ಹೃದಯ 28, ಕಡಿಮೆ ತೂಕ 21, ಅಕಾಲಿಕ 15, ಪೋಲಿಯೋ 10, ಕಾಮಾಲೆ 8 ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲೇ 235 ಮಕ್ಕಳು ಸಾವು:
ಕೊಡಗು ಜಿಲ್ಲೆಯಲ್ಲಿ ಕಳೆದ 6 ವರ್ಷದಲ್ಲಿ ಮೃತಪಟ್ಟ 336 ಶಿಶುಗಳಲ್ಲಿ 335 ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲೇ ಆಗಿದ್ದು, ಮನೆಯಲ್ಲಿ ಕೇವಲ 1 ಹೆರಿಗೆ ನಡೆದಿದೆ. ಆದರೆ ಸಾವು ಮಾತ್ರ ಆಸ್ಪತ್ರೆಯಲ್ಲಿ 235 ಮತ್ತು ಮನೆಯಲ್ಲಿ 101 ಆಗಿದೆ.
ಆರೋಗ್ಯ ಇಲಾಖೆಯ 2021-22ರಿಂದ 2026-27ರ ಜುಲೈವರೆಗಿನ ವರದಿಯ ಪ್ರಕಾರ, 2021-22ರಲ್ಲಿ 49 ಸಾವುಗಳಲ್ಲಿ 49 ಹೆರಿಗೆ ಆಸ್ಪತ್ರೆಯಲ್ಲಿ, ಸಾವು 33 ಆಸ್ಪತ್ರೆಯಲ್ಲಿ, 16 ಮನೆಯಲ್ಲಿ. 2022-23ರಲ್ಲಿ 67 ಸಾವುಗಳಲ್ಲಿ 67 ಹೆರಿಗೆ ಆಸ್ಪತ್ರೆಯಲ್ಲಿ, ಸಾವು 48 ಆಸ್ಪತ್ರೆಯಲ್ಲಿ, 19 ಮನೆಯಲ್ಲಿ. 2023-24ರಲ್ಲಿ 48 ಸಾವುಗಳಲ್ಲಿ 48 ಹೆರಿಗೆ ಆಸ್ಪತ್ರೆಯಲ್ಲಿ, ಸಾವು 32 ಆಸ್ಪತ್ರೆಯಲ್ಲಿ, 16 ಮನೆಯಲ್ಲಿ. 2024-25ರಲ್ಲಿ 60 ಸಾವುಗಳಲ್ಲಿ 60 ಹೆರಿಗೆ ಆಸ್ಪತ್ರೆಯಲ್ಲಿ, ಸಾವು 41 ಆಸ್ಪತ್ರೆಯಲ್ಲಿ, 19 ಮನೆಯಲ್ಲಿ. 2025-26ರಲ್ಲಿ 93 ಸಾವುಗಳಲ್ಲಿ 92 ಹೆರಿಗೆ ಆಸ್ಪತ್ರೆಯಲ್ಲಿ, 1 ಮನೆಯಲ್ಲಿ, ಸಾವು 67 ಆಸ್ಪತ್ರೆಯಲ್ಲಿ, 26 ಮನೆಯಲ್ಲಿ. 2026-27ರ 4 ತಿಂಗಳಲ್ಲಿ 19 ಸಾವುಗಳಲ್ಲಿ 19 ಹೆರಿಗೆ ಆಸ್ಪತ್ರೆಯಲ್ಲಿ, ಸಾವು 14 ಆಸ್ಪತ್ರೆಯಲ್ಲಿ, 5 ಮನೆಯಲ್ಲಾಗಿದೆ.
6 ವರ್ಷದ ಒಟ್ಟು 336ರಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ 335 (ಶೇ.99.7), ಮನೆಯಲ್ಲಿ 1 (ಶೇ.0.3). ಸಾವು ಆಸ್ಪತ್ರೆಯಲ್ಲಿ 235 (ಶೇ.70), ಮನೆಯಲ್ಲಿ 101 (ಶೇ.30) ಸಾವು ದಾಖಲಾಗಿದೆ.336 ಶಿಶು ಮರಣದಲ್ಲಿ 191 ಗಂಡು ಹಾಗೂ 145 ಹೆಣ್ಣು ಶಿಶುಗಳು ಸಾವನ್ನಪ್ಪಿದ್ದಾರೆ.
5 ವರ್ಷದಲ್ಲಿ 20 ಬಾಣಂತಿಯರ ಬಲಿ: ರಕ್ತಸ್ರಾವವೇ ಪ್ರಮುಖ ಕಾರಣ
ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 20 ತಾಯಂದಿರು ಹೆರಿಗೆ ಮತ್ತು ಬಾಣಂತನದ ವೇಳೆ ಮೃತಪಟ್ಟಿದ್ದಾರೆ.
2021-22ರಲ್ಲಿ 6607 ಜನನದಲ್ಲಿ 4, 2022-23ರಲ್ಲಿ 6971 ಜನನದಲ್ಲಿ 6,2023-24ರಲ್ಲಿ 6420 ಜನನದಲ್ಲಿ 4 , 2024-25ರಲ್ಲಿ 6313 ಜನನದಲ್ಲಿ 1 ಮತ್ತು 2025-26ರಲ್ಲಿ 6436 ಜನನದಲ್ಲಿ 5 ತಾಯಂದಿರು ಬಲಿಯಾಗಿದ್ದಾರೆ.
ಒಟ್ಟು ಐದು ವರ್ಷದಲ್ಲಿ 32747 ಜನನದಲ್ಲಿ 20 ಸಾವು ಸಂಭವಿಸಿದ್ದು, ಅತಿಯಾದ ರಕ್ತಸ್ರಾವ (Atonic PPH), ಆಮ್ನಿಯೋಟಿಕ್ ದ್ರವ ರಕ್ತನಾಳ ಸೇರುವುದು, ಹೃದಯ-ಉಸಿರಾಟ ವೈಫಲ್ಯ ಮತ್ತು ಎಕ್ಲಾಂಪ್ಸಿಯಾವೇ ಕಾರಣದಿಂದ ಬಾಣಂತಿಯರು ಸಾವನ್ನಪ್ಪಿದ್ದಾರೆ.