ಸರ್ವರ್ ಕಾಟ;ಪಡಿತರ ಚೀಟಿದಾರರಿಗೆ ಇಕೆವೈಸಿ ಕಿರಿಕಿರಿ ; ಕೊಡಗಿನಲ್ಲಿ ಎಷ್ಟು ಮಂದಿ ಪಡಿತರ ಚೀಟಿ ಫಲಾನುಭವಿಗಳ ಇ.ಕೆವೈಸಿ ಪೆಂಡಿಂಗ್ ಇದೆ ಗೊತ್ತಾ?
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಅಕ್ಟೋಬರ್ 20ರೊಳಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳು ಇ.ಕೆವೈಸಿ ಮಾಡಲು ಆಹಾರ ಇಲಾಖೆ ಸೂಚಿಸಿದ್ದು,ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಪರದಾಡುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.ಕೇಂದ್ರ ಸರ್ಕಾರದ ನಿಯಮದಂತೆ ಪಡಿತರ ಚೀಟಿ ಫಲಾನುಭವಿಗಳು ಐದು ವರ್ಷಳಿಗೊಮ್ಮೆ ಕಡ್ಡಾಯವಾಗಿ ಇ.ಕೆವೈಸಿ ಮಾಡಬೇಕು.ಕಳೆದ ಐದು ವರ್ಷಗಳಲ್ಲಿ ಇ.ಕೆವೈಸಿ ಮಾಡದ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳು ಸೆಪ್ಟೆಂಬರ್ 01ರಿಂದ ಇ.ಕೆ.ವೈಸಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ನೀಡಿದ್ದು,ಸೆಪ್ಟೆಂಬರ್ 01ರಿಂದ ಜಿಲ್ಲೆಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಇ.ಕೆವೈಸಿ ಮಾಡಲಾಗುತ್ತಿದೆ.ಏತನ್ಮಧ್ಯೆ ಸರ್ವರ್ ಸಮಸ್ಯೆಯಿಂದ ಇ.ಕೈವೈಸಿ ಆಗದೆ ಪಡಿತರ ಚೀಟಿದಾರರು ಪರದಾಡುವಂತಾಗಿದೆ.ಎಪಿಎಲ್ ಪಡಿತರ ಚೀಟಿದಾರರಿಗೆ ಇ.ಕೆವೈಸಿ ಕಡ್ಡಾಯವಲ್ಲ.
ಕೊಡಗಿನಲ್ಲಿ ಶೇ.26 ರಷ್ಟು ಮಾತ್ರ ಪೂರ್ಣ;
ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರ ಇ.ಕೆವೈಸಿ ಪ್ರಕ್ರಿಯೆ
ನಿಧಾನಗತಿಯಲ್ಲಿ ಸಾಗಿದ್ದು,ಸೆಪ್ಟೆಂಬರ್ 10ರವರೆಗೆ ಶೇ.26.31 ರಷ್ಟು ಮಾತ್ರ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 1,99,801 ಮಂದಿ ಪಡಿತರ ಚೀಟಿ ಸದಸ್ಯರ ಇಕೆವೈಸಿ ಮಾಡಬೇಕಿದೆ.ಇ.ಕೆವೈಸಿ ಮಾಡಬೇಕಾದ ಪಡಿತರ ಚೀಟಿ ಸದಸ್ಯರ ಪಟ್ಟಿಯನ್ನು ಆಯಾ ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಈವರೆಗೆ 52,564 ಮಂದಿಯ ಇ.ಕೆವೈಸಿ. ಪೂರ್ಣಗೊಂಡಿದ್ದು, ಇನ್ನೂ 1,47,237 ಮಂದಿಯ ಇ.ಕೆ.ವೈಸಿ ಬಾಕಿ ಇದೆ.
ಮಡಿಕೇರಿ ತಾಲ್ಲೂಕಿನಲ್ಲಿ 46,405 ರಲ್ಲಿ 14,899 ಪೂರ್ಣಗೊಂಡಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 44,408 ರಲ್ಲಿ 13,560 ಮಂದಿಯ ಇ.ಕೆ.ವೈಸಿ ಇದುವರೆಗೆ ಮಾಡಲಾಗಿದೆ.
ಕುಶಾಲನಗರ ತಾಲ್ಲೂಕಿನಲ್ಲಿ 41,998 ರಲ್ಲಿ 12,455 ಫಲಾನುಭವಿಗಳದ್ದು ಪೂರ್ಣಗೊಂಡಿದೆ.ವಿರಾಜಪೇಟೆ ತಾಲ್ಲೂಕಿನಲ್ಲಿ 37,930 ರಲ್ಲಿ 7,542,ಪೊನ್ನಂಪೇಟೆ ತಾಲ್ಲೂಕಿನಲ್ಲಿ 29,060 ರಲ್ಲಿ 4,108 ಫಲಾನುಭವಿಗಳ ಇ.ಕೆವೈ.ಸಿ ಇದುವರೆಗೆ ಮಾಡಲಾಗಿದೆ.
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಇ.ಕೆವೈಸಿ ಪ್ರಕ್ರಿಯೆ ಕುಂಠಿತವಾಗಿದೆ.
ಸರ್ವರ್ ಸಮಸ್ಯೆ,ಕೂಲಿ ಕಾರ್ಮಿಕರಿಗೆ ಸಂಕಷ್ಟ:
ಪಡಿತರ ಚೀಟಿ ಫಲಾನುಭವಿಗಳ ಇ.ಕೆ.ವೈ.ಸಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.ಇ.ಕೆವೈ.ಸಿ ಮಾಡಿಸಲು ಪಡಿತರ ಚೀಟಿದಾರರು ಅಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಒಟಿಪಿ) ಪಡೆಯಲು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿದೆ.
ಕೂಲಿ ಬಿಟ್ಟು ನ್ಯಾಯಬೆಲೆ ಅಂಗಡಿಯ ಮುಂದೆ ಕ್ಯೂ ನಿಂತರೂ ಕೂಡ ಇ.ಕೆವೈ.ಸಿ ಪೂರ್ಣಗೊಳ್ಳುವ ವಿಶ್ವಾಸ ಇಲ್ಲ.ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ರಜೆ ಹಾಕಿ ಇ.ಕೆ.ವೈಸಿ ಮಾಡಲು
ನ್ಯಾಯಬೆಲೆ ಅಂಗಡಿಯ ಮುಂದೆ ಕ್ಯೂ ನಿಲ್ಲುವಂತಾಗಿದೆ.
ಅದಲ್ಲದೇ ಕೆಲವು ಭಾಗಗಳಲ್ಲಿ ಸಂಜೆ 3 ರಿಂದ 6 ಗಂಟೆಯವರೆಗೆ ಮಾತ್ರ ನ್ಯಾಯಬೆಲೆ ಅಂಗಡಿ ತೆರೆದಿರುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಮಾತ್ರ ನ್ಯಾಯ ಬೆಲೆ ಅಂಗಡಿಗಳಲ್ಲಿ ಇ.ಕೆವೈಸಿ ಮಾಡಲಾಗುತ್ತಿದೆ.
ಸೆಪ್ಟೆಂಬರ್ 15ರಿಂದ ಪಡಿತರ ವಿತರಣೆ ಮಾಡಬೇಕಿದ್ದು,ಅದರೊಂದಿಗೆ ಇ.ಕೆವೈಸಿ ಪ್ರಕ್ರಿಯೆ ಕೂಡ ಮಾಡುವುದು ಸವಾಲಿನ ಕೆಲಸವಾಗಿದೆ.
ಕೊಡಗು ಜಿಲ್ಲೆಯಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆ
ಮಡಿಕೇರಿ ತಾಲೂಕು:
ಅಂತ್ಯೋದಯ ಕಾರ್ಡ್: 1,893 ಸದಸ್ಯರು: 7,543
ಬಿಪಿಎಲ್ ಕಾರ್ಡ್: 21,850 ಸದಸ್ಯರು: 70,944
ಎಪಿಎಲ್ ಕಾರ್ಡ್: 14,486 ಸದಸ್ಯರು: 42,533
ಒಟ್ಟು ಕಾರ್ಡ್: 38,229 ಒಟ್ಟು ಸದಸ್ಯರು: 1,21,020
ಸೋಮವಾರಪೇಟೆ ತಾಲೂಕು:
ಅಂತ್ಯೋದಯ ಕಾರ್ಡ್: 1,169 ಸದಸ್ಯರು: 4,034
ಬಿಪಿಎಲ್ ಕಾರ್ಡ್: 22,249 ಸದಸ್ಯರು: 67,664
ಎಪಿಎಲ್ ಕಾರ್ಡ್: 5,637 ಸದಸ್ಯರು: 15,514
ಒಟ್ಟು ಕಾರ್ಡ್: 29,055
ಒಟ್ಟು ಸದಸ್ಯರು: 87,212
ವಿರಾಜಪೇಟೆ ತಾಲೂಕು;
ಅಂತ್ಯೋದಯ ಕಾರ್ಡ್: 2,012 ಸದಸ್ಯರು: 6,158
ಬಿಪಿಎಲ್ ಕಾರ್ಡ್: 17,012 ಸದಸ್ಯರು: 53,055
ಎಪಿಎಲ್ ಕಾರ್ಡ್: 7,300 ಸದಸ್ಯರು: 20,435
ಒಟ್ಟು ಕಾರ್ಡ್: 26,324
ಒಟ್ಟು ಸದಸ್ಯರು: 79,648
ಕುಶಾಲನಗರ ತಾಲೂಕು:
ಅಂತ್ಯೋದಯ ಕಾರ್ಡ್: 1,481 ಸದಸ್ಯರು: 5,076
ಬಿಪಿಎಲ್ ಕಾರ್ಡ್: 20,412 ಸದಸ್ಯರು: 65,457
ಎಪಿಎಲ್ ಕಾರ್ಡ್: 5,942 ಸದಸ್ಯರು: 17,823
ಒಟ್ಟು ಕಾರ್ಡ್: 27,835
ಒಟ್ಟು ಸದಸ್ಯರು: 88,356
ಪೊನ್ನಂಪೇಟೆ ತಾಲೂಕು:
ಅಂತ್ಯೋದಯ ಕಾರ್ಡ್: 2,054 ಸದಸ್ಯರು: 5,546
ಬಿಪಿಎಲ್ ಕಾರ್ಡ್: 14,943
ಸದಸ್ಯರು: 41,895
ಎಪಿಎಲ್ ಕಾರ್ಡ್: 8,537 ಸದಸ್ಯರು: 21,853
ಒಟ್ಟು ಕಾರ್ಡ್: 25,534
ಒಟ್ಟು ಸದಸ್ಯರು: 69,294
ಜಿಲ್ಲೆಯ ಒಟ್ಟು: 1,46,977 ಕಾರ್ಡ್,
4,45,530 ಸದಸ್ಯರು
ಇ.ಕೆವೈಸಿ ಮಾಹಿತಿ;
ಮಡಿಕೇರಿ ತಾಲೂಕು;
ಮಾಡಬೇಕಿರುವ ಸದಸ್ಯರು: 46,405
ಪೂರ್ಣಗೊಂಡಿದ್ದು: 14,899
ಬಾಕಿ: 31,506
ಪ್ರಗತಿ: 32.11%
ಸೋಮವಾರಪೇಟೆ ತಾಲೂಕು;
ಮಾಡಬೇಕಿರುವ ಸದಸ್ಯರು: 44,408
ಪೂರ್ಣಗೊಂಡಿದ್ದು: 13,560
ಬಾಕಿ: 30,848
ಪ್ರಗತಿ: 30.54%
ವಿರಾಜಪೇಟೆ ತಾಲೂಕು;
ಮಾಡಬೇಕಿರುವ ಸದಸ್ಯರು: 37,930
ಪೂರ್ಣಗೊಂಡಿದ್ದು: 7,542
ಬಾಕಿ: 30,388
ಪ್ರಗತಿ: 19.88%
ಕುಶಾಲನಗರ ತಾಲೂಕು:
ಮಾಡಬೇಕಿರುವ ಸದಸ್ಯರು: 41,998
ಪೂರ್ಣಗೊಂಡಿದ್ದು: 12,455
ಬಾಕಿ: 29,543
ಪ್ರಗತಿ: 29.66%
ಪೊನ್ನಂಪೇಟೆ ತಾಲೂಕು;
ಮಾಡಬೇಕಿರುವ ಸದಸ್ಯರು: 29,060
ಪೂರ್ಣಗೊಂಡಿದ್ದು: 4,108
ಬಾಕಿ: 24,952
ಪ್ರಗತಿ: 14.14%
ಜಿಲ್ಲೆಯ ಒಟ್ಟು:
ಮಾಡಬೇಕಿರುವುದು: 1,99,801
ಪೂರ್ಣಗೊಂಡಿದ್ದು: 52,564
ಬಾಕಿ: 1,47,237
ಒಟ್ಟು ಪ್ರಗತಿ: 26.31%
ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಇ.ಕೆ.ವೈಸಿ ಮಾಡದ ಫಲಾನುಭವಿಗಳ ಇ.ಕೆವೈಸಿ ಪ್ರಕ್ರಿಯೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ನಡೆಯುತ್ತಿದೆ.ಇ.ಕೆವೈಸಿ ಮಾಡದ ಫಲಾನುಭವಿಗಳ ಮಾಹಿತಿಯನ್ನು ಆಯಾ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿ ಮಾಲೀಕರು ಸದಸ್ಯರಿಗೆ ತಿಳಿಸಿದ್ದಾರೆ.
ಇ.ಕೆ.ವೈಸಿ ಪ್ರಕ್ರಿಯೆಯಲ್ಲಿ ಕೊಡಗು ರಾಜ್ಯದಲ್ಲಿ 10ನೇ ಸ್ಥಾನದಲ್ಲಿ ಇದೆ.ಸೆಪ್ಟೆಂಬರ್ 15ರ ನಂತರ ಪಡಿತರ ವಿತರಣೆ ನಡೆಯಲಿದೆ.
ರಮ,ಪ್ರಭಾರ ಜಂಟಿ ನಿರ್ದೇಶಕರು ಆಹಾರ ಇಲಾಖೆ ಕೊಡಗು ಜಿಲ್ಲೆ.