SPECIAL STORY

ಎಸ್ಐಆರ್;ಕೊಡಗು ಜಿಲ್ಲೆಯಲ್ಲಿ ನೋಟಿಸ್ ವಿಚಾರಣೆಯಲ್ಲಿ ಎಷ್ಟು ಮಂದಿ ಮತದಾರರು ಅನರ್ಹರಾಗಿದ್ದಾರೆ ಗೊತ್ತೇ!

K.M ISMAIL KANDAKKARE

ಎಸ್ಐಆರ್;ಕೊಡಗು ಜಿಲ್ಲೆಯಲ್ಲಿ ನೋಟಿಸ್ ವಿಚಾರಣೆಯಲ್ಲಿ ಎಷ್ಟು ಮಂದಿ ಮತದಾರರು ಅನರ್ಹರಾಗಿದ್ದಾರೆ ಗೊತ್ತೇ!
(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ;ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನೋಟಿಸ್ ವಿಚಾರಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ 622 ಮಂದಿ ಅನರ್ಹರಾಗಿದ್ದಾರೆ.ನೋಟಿಸ್ ವಿಚಾರಣೆ ಸಂದರ್ಭದಲ್ಲಿ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಹಿನ್ನಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿದ್ದ 622 ಮತದಾರರು ಅಂತಿಮ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.ಆಗಸ್ಟ್ 24ರಂದು ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿತ್ತು.ಈ ಸಂದರ್ಭದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ಅನ್ ಮ್ಯಾಪಿಂಗ್ ಎಂದು ಕೊಡಗು ಜಿಲ್ಲೆಯಲ್ಲಿ 58,883 ಮತದಾರರಿಗೆ ನೋಟಿಸ್ ಜನರೇಟ್ ಮಾಡಲಾಗಿತ್ತು.
ಆಗಸ್ಟ್ 24 ರಿಂದ ಅ.12ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು.
ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ 9,252 ಹಾಗೂ ಅನ್ ಮ್ಯಾಪಿಂಗ್ 9,533 ಮತದಾರರು ಸೇರಿ 18,785 ಮತದಾರರಿಗೆ ನೋಟಿಸ್ ನೀಡಲಾಗಿತ್ತು.
ವಿರಾಜಪೇಟೆ ಕ್ಷೇತ್ರದಲ್ಲಿ 26,558  ಮತದಾರರು ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ 13,550 ಮತದಾರರು ಅನ್ ಮ್ಯಾಪಿಂಗ್ ಮತದಾರರು ಸೇರಿ 40,108 ಮಂದಿಗೆ ನೋಟಿಸ್ ನೀಡಲಾಗಿತ್ತು.ಅ 12ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಳಿಸಲಾಗಿತ್ತು.ಇದೀಗ ಪ್ರಕ್ರಿಯೆ ಪೂರ್ಣಗೊಂಡಿದ್ದು,

ಮಡಿಕೇರಿ ಕ್ಷೇತ್ರದಲ್ಲಿ 157 ಮಂದಿ‌ ಮತದಾರರು ಅನರ್ಹ;

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‌18,779 ಮತದಾರರಿಗೆ ನೋಟಿಸ್ ನೀಡಲಾಗಿತ್ತು.ಈ ಪೈಕಿ‌ 157 ಮತದಾರರು ಅಂತಿಮ ಪಟ್ಟಿಯಲ್ಲಿ ಅವಕಾಶ ಪಡೆಯಲು  ಅನರ್ಹರಾಗಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 4,077 ನೋಟಿಸ್ ಪಡೆದ ಮತದಾರರ ಪೈಕಿ  32 ಮಂದಿ ಅನರ್ಹರಾಗಿದ್ದಾರೆ.
ಕುಶಾಲನಗರ ತಾಲ್ಲೂಕಿನಲ್ಲಿ 5,684 ನೋಟಿಸ್  ಪಡೆದ ಮತದಾರರಲ್ಲಿ 27 ಮಂದಿ‌ ಅನರ್ಹರಾಗಿದ್ದಾರೆ‌.ಮಡಿಕೇರಿ ತಾಲ್ಲೂಕಿನಲ್ಲಿ‌ 9,018 ಮಂದಿ ಮತದಾರರಿಗೆ ನೋಟಿಸ್ ನೀಡಲಾಗಿತ್ತು,ಈ ಪೈಕಿ 98 ಮತದಾರರು ಅನರ್ಹರಾಗಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲಿ 
465 ಮಂದಿ ಮತದಾರರು ಅನರ್ಹ:

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ  40,104 ಮಂದಿ ಮತದಾರರಿಗೆ ನೋಟಿಸ್  ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು.ಈ ಪೈಕಿ 465 ಮಂದಿ ಮತದಾರರು ಅನರ್ಹರಾಗಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 
ಮಡಿಕೇರಿ ತಾಲ್ಲೂಕಿನಲ್ಲಿ 12,261 ಮತದಾರರಿಗೆ  ನೋಟಿಸ್ ನೀಡಲಾಗಿತ್ತು,ಈ ಪೈಕಿ   123 ಅನರ್ಹ ಮತದಾರರನ್ನು ಗುರುತಿಸಲಾಗಿದೆ.ವಿರಾಜಪೇಟೆ ತಾಲ್ಲೂಕಿನಲ್ಲಿ 11,200 ಮತದಾರರಿಗೆ  ನೋಟಿಸ್  ನೀಡಲಾಗಿತ್ತು ಈ ಪೈಕಿ 44 ಮಂದಿ ಅನರ್ಹರಾಗಿದ್ದಾರೆ.- ಪೊನ್ನಂಪೇಟೆ ತಾಲ್ಲೂಕಿನಲ್ಲಿ 16,643 ಮತದಾರರಿಗೆ ನೋಟಿಸ್ ನೀಡಲಾಗಿತ್ತು,ಇದರಲ್ಲಿ 298 ಮತದಾರರು ಅನರ್ಹರಾಗಿದ್ದಾರೆ.


ಜಿಲ್ಲೆಯಲ್ಲಿ 6,113 ಮತದಾರರು ಹೆಚ್ಚಳ;

ಜಿಲ್ಲೆಯಲ್ಲಿ ಆಗಸ್ಟ್ 24 ರಂದು ಪ್ರಕಟಗೊಂಡ ಕರಡು ಮತದಾರರು ಪಟ್ಟಿಯಲ್ಲಿ ಒಟ್ಟು‌ 4,05,803 ಮತದಾರರು ಇದ್ದಾರೆ.ಇದೀಗ ಅ.15ರವರೆಗೆ ಜಿಲ್ಲೆಯಲ್ಲಿ 4,11,916 ಮಂದಿ ‌ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮತದಾರರ ಪೈಕಿ 3,372 ಮಹಿಳಾ ಮತದಾರರು ಹಾಗೂ 2,741ಪುರುಷ ಮತದಾರರು ಇದ್ದಾರೆ.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿಸಿ‌ 2,01,035 ಪುರುಷರು,‌2,10,877 ಮಹಿಳಾ ಮತದಾರರು ಹಾಗೂ ‌04 ಇತರೆ ಮತದಾರರು ಸೇರಿಸಿ‌ 4,11,916 ಮತದಾರರು ಇದ್ದಾರೆ.

ಕೊಡಗು ಜಿಲ್ಲೆಯಲ್ಲಿ 29,380 ಸಲ್ಲಿಕೆ;

ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಹೆಸರು ತೆಗೆಯುವಿಕೆ,ತಿದ್ದುಪಡಿ ಸೇರಿ ಜೂನ್ 16ರಿಂದ ಅ.15ರವರೆಗೆ ಒಟ್ಟು 29,380 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶ ನೀಡಲಾಗಿತ್ತು.ಸೆ 24 ರಿಂದ ಅ. 22 ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿತ್ತು.ಜಿಲ್ಲೆಯಲ್ಲಿ Form-6 (ಹೊಸ ಸೇರ್ಪಡೆ) 6,950, Form-6A - 22, Form-7 (ಹೆಸರು ತೆಗೆಯುವಿಕೆ) 1,884, Form-8 (ತಿದ್ದುಪಡಿ) 20,524 ಅರ್ಜಿಗಳು ಸಲ್ಲಿಕೆಯಾಗಿದೆ.