ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 10,119 ಮತದಾರರ ವಿಚಾರಣೆ ಪೂರ್ಣ ; 47,341 ಮತದಾರರಿಗೆ ನೋಟಿಸ್ ವಿತರಣೆ
admincoorgdaily

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗು ಜಿಲ್ಲೆಯ 58,883 ಮತದಾರರಿಗೆ ಈಗಾಗಲೇ ನೋಟಿಸ್ ಜನರೇಟ್ ಆಗಿದ್ದು, ಇದುವರೆಗೆ 47,341, ಮತದಾರರಿಗೆ ನೋಟಿಸ್ ವಿತರಣೆ ಮಾಡಲಾಗಿದ್ದು,ಇನ್ನೂ 11,542 ಮತದಾರರಿಗೆ ನೋಟಿಸ್ ವಿತರಣೆ ಮಾಡಬೇಕಿದೆ.
ಮತದಾರರಿಗೆ
ವಿತರಣೆಯಾಗಿರುವ ನೋಟಿಸ್ ಗಳಲ್ಲಿ ಇದುವರೆಗೆ ಕೇವಲ 10,119 ಮತದಾರರ ವಿಚಾರಣೆ ಪೂರ್ಣಗೊಂಡಿದ್ದು,ಇನ್ನೂ ಕೂಡ 37,222 ಮತದಾರರ ವಿಚಾರಣೆ ಬಾಕಿ ಇದೆ.ಜಿಲ್ಲೆಯಲ್ಲಿ 73 ಹೆಚ್ಚುವರಿ ಇ.ಆರ್.ಒ ಗಳನ್ನು ಮತದಾರರ ವಿಚಾರಣೆಗೆ ಹೆಚ್ಚುವರಿಯಾಗಿ ನೇಮಿಸಲಾಗಿದೆ.ಅಕ್ಟೋಬರ್ 12ರವರೆಗೆ ವಿಚಾರಣೆ ನಡೆಯಲಿದೆ.
ಅನಾರೋಗ್ಯ ವೃದ್ಧೆಯನ್ನು ಕಾರಿನಲ್ಲಿ ಕರೆತಂದು ವಿಚಾರಣೆ!
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಒಂದರಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರಿಗೆ ನೋಟಿಸ್ ನೀಡಲಾಗಿತ್ತು. ಸೆಪ್ಟೆಂಬರ್ 10ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಬಿದ್ದು ಕಾಲಿಗೆ ಏಟಾಗಿ ಹಾಸಿಗೆ ಹಿಡಿದಿದ್ದ ವೃದ್ಧೆಯ ಪರವಾಗಿ ಕುಟುಂಬಸ್ಥರು ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿದ್ದರು. ಆದರೆ ಇಆರ್‌ಒ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊರ ಜಿಲ್ಲೆಗಳಲ್ಲಿ 85 ವರ್ಷ ಮೇಲ್ಪಟ್ಟ, ಅನಾರೋಗ್ಯ ಪೀಡಿತ ಮತ್ತು ವಿಶೇಷ ಚೇತನ ಮತದಾರರ ಮನೆಗೆ ಖುದ್ದು ಇಆರ್‌ಒಗಳು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದರೆ, ಸಿದ್ದಾಪುರದಲ್ಲಿ ಮನೆಗೆ ಭೇಟಿ ನೀಡದೆ ಆಯೋಗದ ಆದೇಶ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂತರ ನೆರೆಮನೆಯವರ ಸಹಕಾರದಿಂದ ಕಾರಿನಲ್ಲಿ ವೃದ್ಧೆಯನ್ನು ಕರೆತಂದು ಪಂಚಾಯತ್ ಮುಂಭಾಗದಲ್ಲೇ ಇಆರ್‌ಒ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಬಹುದಿತ್ತು ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ಹಿರಿಯರು, ಅಂಗವಿಕಲರಿಗೆ ರಿಲೀಫ್ - ಕುಟುಂಬಸ್ಥರು ಹಾಜರಾಗಲು ಅವಕಾಶ:
ಎಸ್‌ಐಆರ್-2026 ರ ಅಡಿ ನೋಟಿಸ್ ಪಡೆದಿರುವ ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರು ಸ್ವತಃ ಹಾಜರಾಗಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಚುನಾವಣಾ ನೋಂದಣಿ ಅಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮುಂದೆ ಹಾಜರಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.
ಕುಟುಂಬದ ವಯಸ್ಕ ಸದಸ್ಯರು ಸಂಬಂಧಿತ ಮತದಾರರ ಪರವಾಗಿ ಹಾಜರಾಗಿ ಅಗತ್ಯ ದಾಖಲೆ ಮತ್ತು ಮಾಹಿತಿ ಸಲ್ಲಿಸಬಹುದಾಗಿದ್ದು, ಈ ಅವಕಾಶವನ್ನು ನೋಟಿಸ್ ವಿಲೇವಾರಿ ಪ್ರಕ್ರಿಯೆಯಲ್ಲಿ ಕಲ್ಪಿಸುವಂತೆ ERO ಮತ್ತು AEROಗಳಿಗೆ ಸೂಚನೆ ನೀಡಲಾಗಿದೆ.
ಭಾರತೀಯ ಚುನಾವಣಾ ಆಯೋಗದ ಮೇ 14, 2026ರ ಪತ್ರ ಸಂಖ್ಯೆ 23/2025-ERS (Vol.II) ಉಲ್ಲೇಖಿಸಿ, ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿಯವರು ಸೆ.11ರಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.
ಕೊಡಗಿನಲ್ಲಿ 20 ಸಾವಿರಕ್ಕೂ ಹೆಚ್ಚು ಅರ್ಜಿ:
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR-2026) ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ 16 ರಿಂದ ಸೆಪ್ಟೆಂಬರ್ 9 ರವರೆಗೆ ಒಟ್ಟು 20,021 ಅರ್ಜಿಗಳು ಸಲ್ಲಿಕೆಯಾಗಿವೆ.
ಚುನಾವಣಾ ಆಯೋಗದ ವರದಿ ಪ್ರಕಾರ, ಹೊಸ ಮತದಾರರ ಸೇರ್ಪಡೆಗಾಗಿ FORM-6 - 3,678ಅರ್ಜಿ, ವಿದೇಶದಲ್ಲಿರುವ ಮತದಾರರ ನೋಂದಣಿಗೆ
FORM-6A - 22 ಅರ್ಜಿ ಸಲ್ಲಿಕೆಯಾಗಿವೆ. ಹೆಸರು ತೆಗೆಯಲು FORM-7 - 237 ಅರ್ಜಿ, ಹಾಗೂ ತಿದ್ದುಪಡಿ ಮತ್ತು ವಿಳಾಸ ಬದಲಾವಣೆಗಾಗಿ FORM-8 - 16,084 ಅರ್ಜಿಗಳು ಸಲ್ಲಿಕೆಯಾಗಿದೆ.