‘ಪ್ರೇಮದ ಊರಲಿ’ — ಮನಸ್ಸಿಗೆ ಹತ್ತಿರವಾಗುವ ಮಣ್ಣಿನ ಸೊಗಡಿನ ಪ್ರೇಮಕಥೆ
admincoorgdaily

ಅಜ್ಜಮಾಡ ರಮೇಶ್ ಕುಟ್ಟಪ್ಪ
ಸ್ನೇಹಿತ ನಂಬುಡುಮಾಡ ಪವನ್ ಪೂಣಚ್ಚ ಅವರ ಪುತ್ರಿ ತಪಸ್ವಿನಿ ಪೂಣಚ್ಚ ಅಭಿನಯಿಸಿರುವ ಚಿತ್ರ ಎಂಬ ಕಾರಣಕ್ಕೆ ‘ಪ್ರೇಮದ ಊರಲಿ’ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇತ್ತು. ಇದೇ ಕುತೂಹಲದಿಂದ ಮಿತ್ರ ವಿ.ವಿ. ಅರುಣ್ ಕುಮಾರ್ ಅವರೊಂದಿಗೆ ಗೋಣಿಕೊಪ್ಪದ ಸಿನಿಫ್ಲೆಕ್ಸ್‌ಗೆ ತೆರಳಿ ಚಿತ್ರ ವೀಕ್ಷಿಸಿದೆ. ಚಿತ್ರ ಮುಗಿದಾಗ ‘ಒಳ್ಳೆಯ ಚಿತ್ರವೊಂದನ್ನು ನೋಡಿದೆವು’ ಎಂಬ ತೃಪ್ತಿಯೇ ಉಳಿಯಿತು.
ಗ್ರಾಮೀಣ ಬದುಕಿನ ಸೊಗಡು, ಪ್ರೀತಿ, ಕುಟುಂಬದ ಬಾಂಧವ್ಯ ಮತ್ತು ಮಾನವೀಯ ಭಾವನೆಗಳನ್ನು ಸರಳವಾಗಿ ಕಟ್ಟಿಕೊಟ್ಟಿರುವುದು ಚಿತ್ರದ ಪ್ರಮುಖ ಆಕರ್ಷಣೆ. ದೊಡ್ಡ ತಾರೆಯರ ಅಬ್ಬರವಿಲ್ಲದೆ, ಸಾಮಾನ್ಯ ಜನರ ಬದುಕಿಗೆ ಹತ್ತಿರವಾಗುವ ಕಥೆಯನ್ನು ಹೇಳಿರುವುದರಿಂದ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಸುಲಭವಾಗಿ ತಟ್ಟುತ್ತದೆ. ಕುಟುಂಬ ಸದಸ್ಯರ ಸಹಿತ ಕುಳಿತು ನೋಡಬಹುದಾದ ಚಿತ್ರ ಎನ್ನುವುದು ಇದರ ದೊಡ್ಡ ಪ್ಲಸ್ ಪಾಯಿಂಟ್.
ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ. ಅವರ ಹಿಂದಿನ ಚಿತ್ರ ಅಕ್ಷಿಯ ಸಾಮಾಜಿಕ ವಾಸ್ತವತೆಯ ನಂತರ, ಸಾಮಾನ್ಯ ಪ್ರೇಕ್ಷಕರನ್ನು ತಲುಪುವ ಕುಟುಂಬ ಪ್ರಧಾನ ಪ್ರೇಮಕಥೆಯತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಯಲ್ಲೂ ಮನೋಜ್ ಕುಮಾರ್ ಅವರದೇ ಕೊಡುಗೆ ಇದೆ.
ಶ್ರೀರಾಮ್, ಸಂತೋಷ್ ಪಾತ್ರದಲ್ಲಿ ಸಹಜ ಅಭಿನಯ ನೀಡಿದ್ದಾರೆ. ಅವರೊಂದಿಗೆ ರಂಗಾಯಣ ರಘು, ನಾಗಣ್ಣನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಂದೆ–ಮಗನ ಬಾಂಧವ್ಯವನ್ನು ರಂಗಾಯಣ ರಘು ತಮ್ಮ ಅನುಭವಪೂರ್ಣ ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ರಮಿಕಾ ಶಿವು, ವಸಂತಾ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇಳಾ ವಿಟ್ಲ, ಗೋವಿಂದೇಗೌಡ, ಅಭಿಷೇಕ್ ಕಲ್ಮಣಿ ಸೇರಿದಂತೆ ಪೋಷಕ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಪಸ್ವಿನಿ ಪೂಣಚ್ಚ ರುಕ್ಮಿಣಿಯಾಗಿ ಗಮನ ಸೆಳೆಯುತ್ತಾರೆ. ಭಾವನೆಗಳನ್ನು ಅತಿರೇಕವಿಲ್ಲದೆ ವ್ಯಕ್ತ ಪಡಿಸಿರುವ ಅವರ ಅಭಿನಯ ಸಹಜವಾಗಿದೆ. ಕೊಡಗಿನ ಪ್ರತಿಭೆ ತಪಸ್ವಿನಿ ಕನ್ನಡದ ದೊಡ್ಡ ಪರದೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಸ್ಥಳೀಯ ಪ್ರೇಕ್ಷಕರಿಗೂ ಹೆಮ್ಮೆಯ ಸಂಗತಿ. ವಿಶೇಷವಾಗಿ ಚಿತ್ರದಲ್ಲಿ ಅವರು ‘ಕೆಎ–12’ ನೋಂದಣಿಯ ವಾಹನ ಬಳಸಿರುವುದು ಕೊಡಗಿನ ಪ್ರೇಕ್ಷಕರಿಗೆ ಒಂದು ರೀತಿಯ ಆತ್ಮೀಯತೆಯ ಅನುಭವ ನೀಡುತ್ತದೆ.
ಚಿತ್ರದ ನಿರ್ಮಾಣವನ್ನು ಮಮತಾ ದೇವೇಂದ್ರ, ಪ್ರಶಾಂತ್ ಡಿ.ಎಸ್. ಮತ್ತು ರಮೇಶ್ ಎನ್. ಅವರು ವೆನಿಲ್ಲಾ ಎಂಟರ್‌ಟೈನ್ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಕೈಗೊಂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಚಿತ್ರಕ್ಕೆ ಭಾವನಾತ್ಮಕ ಸ್ಪರ್ಶ ನೀಡುತ್ತದೆ. ರಾಜಕಾಂತ್ ಎಸ್.ಕೆ. ಅವರ ಛಾಯಾಗ್ರಹಣ ಗ್ರಾಮೀಣ ಪರಿಸರದ ಸೌಂದರ್ಯ ವನ್ನು ಚನ್ನಾಗಿ ಸೆರೆಹಿಡಿದಿದೆ. ಹರ್ಷಿತ್ ಪ್ರಭು ಅವರ ಸಂಕಲನ ಕಥೆಯ ಹರಿವಿಗೆ ಪೂರಕವಾಗಿದೆ.
ಒಟ್ಟಿನಲ್ಲಿ, ಪ್ರೀತಿ ಎಂದರೆ ಕೇವಲ ಇಬ್ಬರ ನಡುವಿನ ಸಂಬಂಧವಲ್ಲ. ಕುಟುಂಬ, ಭಾವನೆ, ನಂಬಿಕೆ ಮತ್ತು ಬದುಕಿನೊಂದಿಗೆ ಬೆಸೆದುಕೊಂಡಿರುವ ಅನುಬಂಧ ಎಂಬುದನ್ನು ಹೇಳುವ ಪ್ರಯತ್ನವೇ ‘ಪ್ರೇಮದ ಊರಲಿ’. ಸರಳ ಕಥೆ, ಸಹಜ ಅಭಿನಯ, ಗ್ರಾಮೀಣ ಸೊಗಡು ಮತ್ತು ಕುಟುಂಬದ ಭಾವನೆಗಳೊಂದಿಗೆ ಸಾಗುವ ಈ ಚಿತ್ರ ಒಮ್ಮೆ ಕುಟುಂಬದೊಂದಿಗೆ ಕುಳಿತು ನೋಡಬಹುದಾದ ಮನಮುಟ್ಟುವ ಸಿನಿಮಾ.
ನನ್ನ ಮಟ್ಟಿಗೆ ಹೇಳುವುದಾದರೆ, ತೇಜಸ್ವಿ ಪೂಣಚ್ಚ ಅವರ ಮೇಲಿನ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ತೆರಳಿದ್ದರೂ, ಚಿತ್ರ ಮುಗಿದ ಬಳಿಕ ಸಂಪೂರ್ಣ ಚಿತ್ರತಂಡದ ಪ್ರಯತ್ನದ ಬಗ್ಗೆ ಮೆಚ್ಚುಗೆ ಮೂಡಿತು.