ಕೃಷ್ಣನ ಬಾಲಲೀಲೆಗಳಲ್ಲಿ ಮುದ್ದು ಮಕ್ಕಳ ಕಲರವ
admincoorgdaily


ವಿಶೇಷ ಲೇಖನ:- ಕೌಶಿ ಅಯ್ಯಪ್ಪ ಪೋನ್ನಂಪೇಟೆ
ಮಡಿಕೇರಿ:-ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಸಾಕು... ಮನೆ ಮನೆಗಳಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ಅದರಲ್ಲೂ ಪುಟ್ಟ ಮಕ್ಕಳನ್ನು ಕೃಷ್ಣನ ವೇಷದಲ್ಲಿ ಸಿಂಗರಿಸಿ, ಅವರ ತುಂಟಾಟವನ್ನು ಕಣ್ತುಂಬಿಕೊಳ್ಳುವುದು ಪೋಷಕರಿಗೆ ವಿಶೇಷ ಖುಷಿ. ಪುಟ್ಟ ಕಂದಮ್ಮಗಳ ನಗುವಿನಲ್ಲಿ ಬಾಲಕೃಷ್ಣನನ್ನು ಕಾಣುವ ಈ ಸಂಭ್ರಮವೇ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆ.
ತಲೆಗೆ ನವಿಲುಗರಿ... ಕೈಯಲ್ಲಿ ಕೊಳಲು... ಮೈಮೇಲೆ ಪೀತಾಂಬರ... ಕೊರಳಲ್ಲಿ ಹಾರ... ಮುಖದಲ್ಲಿ ಮುದ್ದಾದ ನಗು...
ಇದು ಯಾವುದೋ ಪೌರಾಣಿಕ ಕಥೆಯ ದೃಶ್ಯವಲ್ಲ. ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪುಟ್ಟ ಮಕ್ಕಳು ಬಾಲಕೃಷ್ಣನ ವೇಷ ಧರಿಸಿ ಕಂಗೊಳಿಸುತ್ತಿರುವ ಮನಮೋಹಕ ದೃಶ್ಯ.
ಕೃಷ್ಣನ ಬಾಲ್ಯದ ತುಂಟಾಟ, ಬೆಣ್ಣೆ ಕದಿಯುವ ಪ್ರಸಂಗ, ಗೋಪಿಕೆಯರ ಜೊತೆಗಿನ ಆಟ, ಕೊಳಲು ನುಡಿಸುವ ಕೃಷ್ಣ... ಹೀಗೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಮಕ್ಕಳ ವೇಷಭೂಷಣದ ಮೂಲಕ ಜೀವಂತಗೊಳಿಸಲಾಗುತ್ತದೆ.
ಪುಟ್ಟ ಕಂದಮ್ಮಗಳಿಗೆ ಕೃಷ್ಣನ ವೇಷ ಹಾಕುವುದು ಕೇವಲ ಅಲಂಕಾರವಲ್ಲ... ಅದರ ಹಿಂದೆ ಪೋಷಕರ ಭಾವನೆ ಇದೆ. ತಮ್ಮ ಮಗುವಿನಲ್ಲಿ ಬಾಲಕೃಷ್ಣನ ರೂಪವನ್ನು ಕಂಡು ಸಂಭ್ರಮಿಸುವ ಸಂತೋಷವಿದೆ.
ಮಕ್ಕಳನ್ನು ಸುಂದರವಾಗಿ ಸಿಂಗರಿಸಿ, ಮನೆಯಲ್ಲೇ ಕೃಷ್ಣನ ಬಾಲಲೀಲೆಗಳನ್ನು ಮರುಸೃಷ್ಟಿಸುವ ಪೋಷಕರು... ಬಳಿಕ ದೇವಸ್ಥಾನಗಳು ಹಾಗೂ ವಿವಿಧ ವೇದಿಕೆಗಳಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲೂ ಮಕ್ಕಳನ್ನು ಪ್ರದರ್ಶಿಸುತ್ತಾರೆ.
ವೇದಿಕೆಯ ಮೇಲೆ ಪುಟ್ಟ ಕೃಷ್ಣರು ಹೆಜ್ಜೆ ಹಾಕುತ್ತಿದ್ದರೆ... ಪ್ರೇಕ್ಷಕರಿಂದ ಚಪ್ಪಾಳೆಯ ಸದ್ದು. ಕೆಲವರು ನೃತ್ಯದ ಮೂಲಕ ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸಿದರೆ, ಇನ್ನೂ ಕೆಲವರು ಕೃಷ್ಣನ ವೇಷದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ.
ಮಕ್ಕಳ ಮುಗ್ಧ ನಗು... ಅವರ ತುಂಟಾಟ... ಕೃಷ್ಣನ ವೇಷದಲ್ಲಿನ ಮುದ್ದುತನ... ಇವೆಲ್ಲವೂ ಜನ್ಮಾಷ್ಟಮಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಶ್ರೀಕೃಷ್ಣನ ಬಾಲ್ಯದಿಂದಲೇ ಮಕ್ಕಳಿಗೆ ನೀತಿ, ಧರ್ಮ, ಪ್ರೀತಿ ಮತ್ತು ತುಂಟತನದ ಹಲವು ಕಥೆಗಳನ್ನು ಪರಿಚಯಿಸುವ ಸಂಪ್ರದಾಯ ನಮ್ಮಲ್ಲಿದೆ.
ಹೀಗಾಗಿ ಜನ್ಮಾಷ್ಟಮಿ ಎನ್ನುವುದು ಕೇವಲ ಧಾರ್ಮಿಕ ಆಚರಣೆಯಲ್ಲ... ಮಕ್ಕಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಪೌರಾಣಿಕ ಕಥೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಒಂದು ಸುಂದರ ಸಂದರ್ಭವೂ ಹೌದು.
ಮನೆ ಮನೆಗಳಲ್ಲಿ ಪುಟ್ಟ ಕೃಷ್ಣರ ಕಲರವ...
ವೇದಿಕೆಗಳಲ್ಲಿ ಬಾಲಕೃಷ್ಣನ ಲೀಲೆಗಳ ಅನಾವರಣ...
ಮಕ್ಕಳ ಮುಗ್ಧ ನಗುವಿನೊಂದಿಗೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮತ್ತಷ್ಟು ಕಳೆಗಟ್ಟಿದ್ದು, ಪೋಷಕರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.