ಹೈಕೋರ್ಟ್ ಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾ ರಾಜ್ಯ ಸರ್ಕಾರ!; ಮೇ ಅಂತ್ಯದೊಳಗೆ ಪ್ರಕಟವಾಗುತ್ತಾ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣಾ ಮೀಸಲಾತಿ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಆಡಳಿತಾವಧಿ ಮುಗಿದು ನಾಲ್ಕು ವರ್ಷ ಪೂರ್ಣಗೊಂಡಿದೆ.ಈ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯದೇ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತಾಗಿದೆ.ಆಡಳಿತ ವಿಕೇಂದ್ರೀಕರಣ ಬಗ್ಗೆ ಪದೇ ಪದೇ ಮಾತಾಡುವ ಸಿ.ಎಂ ಸಿದ್ದರಾಮಯ್ಯ ನವರಿಗೆ,ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆ ನಡೆಯದೇ ನಾಲ್ಕು ವರ್ಷ ಕಳೆದಿದೆ ಎಂಬುದು ನೆನಪಿಲ್ಲ ಎಂದು ಕಾಣುತ್ತೆ.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಸಂಬಂಧಿಸಿದಂತೆ ಕ್ಷೇತ್ರವಾರು ಮೀಸಲು ಪಟ್ಟಿ ಏನೇ ಆಗಲಿ ಮೇ ಅಂತ್ಯದೊಳಗೆ ಚುನಾವಣಾ ಆಯೋಗಕ್ಕೆ ನೀಡುತ್ತೇವೆ ಎಂದು 2025ರ ಫೆಬ್ರವರಿ 17ರಂದು ಹೈಕೋರ್ಟ್ ನಲ್ಲಿ ಸರ್ಕಾರದ ಜನರಲ್ ಅಡ್ವೊಕೇಟ್ ಶಶಿಕಿರಣ್ ಶೆಟ್ಟಿ ಮೌಖಿಕ ಮುಚ್ಚಳಿಕೆ ನೀಡಿದ್ದರು.ಇದೀಗ ಮೇ ತಿಂಗಳು ಅರ್ಧಕ್ಕೆ ಬಂದು ನಿಂತಿದೆ.ಆದರೆ ಇದುವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಿಸಿಲ್ಲ.ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಸಲು ಮೀಸಲಾತಿ ಪಟ್ಟಿಗಾಗಿ ಚುನಾವಣಾ ಆಯೋಗವು ಜಾತಪಕ್ಷಿಯಂತೆ ಕಾದುಕುಳಿತಿದೆ.ಹೈಕೋರ್ಟ್ ಗೆ ಮಾಹಿತಿ ನೀಡಿದರು ಕೂಡ, ರಾಜ್ಯ ಸರ್ಕಾರದ ಈ ತಿಂಗಳು ಕೂಡ ಮೀಸಲಾತಿ ಪಟ್ಟಿ ಪ್ರಕಟಿಸುವ ಸಾಧ್ಯತೆ ತೀರಾ ವಿರಳ ಎನ್ನಲಾಗುತ್ತಿದೆ.ಒಂದು ವೇಳೆ ಮೀಸಲು ಪಟ್ಟಿ ಪ್ರಕಟಿಸಿದರು ಕೂಡ ಚುನಾವಣಾ ಆಯೋಗಕ್ಕೆ ಚುನಾವಣಾ ಸಿದ್ಧತೆ ನಡೆಸಲು ಕನಿಷ್ಠ ಎರಡರಿಂದ ಮೂರು ತಿಂಗಳು ಅತ್ಯವಶ್ಯಕ.ಸರ್ಕಾರ ನೀಡಿರುವ ಮೌಖಿಕ ಮುಚ್ಚಳಿಕೆ ಅನುಸಾರ ನಡೆದುಕೊಳ್ಳದೇ ಹೋದರೆ,ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಂಗ ನಿಂದನೆ ಅರ್ಜಿ ವಿಲೇವಾರಿ ಮಾಡಿದ್ದರು.
2023ರಲ್ಲಿ ಕೊಟ್ಟ ಮಾತಿನಂತೆ ನಡೆಯದ ರಾಜ್ಯ ಸರ್ಕಾರ!
2023ರ ಡಿಸೆಂಬರ್ 19ರಂದು ಹೈಕೋರ್ಟ್ ನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ನಿಗದಿಪಡಿಸದ ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು.ಈ ಸಂದರ್ಭ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ,ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ 30 ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಗಳ ಸದಸ್ಯರ ಸಂಖ್ಯೆ, ವರ್ಗವಾರು ಮೀಸಲು ಸಂಖ್ಯೆ ಹಾಗೂ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.ಕೇವಲ ಒಂದು ವಾರದೊಳಗೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆಯ ಅಧಿಸೂಚನೆ ಹೊರಡಿಸಿ, ಇದಾದ ನಂತರ 07 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ, 10 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು,ತಿಂಗಳೊಳಗೆ ಮೀಸಲು ನಿಗದಿ ಪೂರ್ಣಗೊಳ್ಳಲಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದರು.ವಾದ ಆಲಿಸಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ.ಎಸ್ ದೀಕ್ಷಿತ್ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ, ಅರ್ಜಿ ಇತ್ಯರ್ಥ ಪಡಿಸಿದ್ದರು.ಆದರೆ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದ್ದರು.2024ರ ಲೋಕಸಭಾ ಚುನಾವಣಾ ನೆಪವೊಡ್ಡಿ ಚುನಾವಣೆಯನ್ನು ನಡೆಸಲು ಆಸಕ್ತಿ ತೋರದ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸುವ ಗೋಜಿಗೆ ಹೋಗಲಿಲ್ಲ.ಇದಾದ ಬಳಿಕ ಜೂನ್ ನಲ್ಲಿ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತು.ಕೋರ್ಟ್ ಗೆ ಕೊಟ್ಟ ಭರವಸೆಯಂತೆ ಸರ್ಕಾರ ನಡೆದಿಲ್ಲ ಎಂದು ಚುನಾವಣಾ ಆಯೋಗವು ಹೈಕೋರ್ಟ್ ನಲ್ಲಿ ವಾದ ಮಂಡಿಸಿತ್ತು.ಫೆಬ್ರವರಿ 17ರಂದು ರಾಜ್ಯ ಸರ್ಕಾರ ಮೇ ಅಂತ್ಯದೊಳಗೆ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಹೇಳಿ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥ ಪಡಿಸಿದ್ದರು.ಒಂದು ವೇಳೆ ರಾಜ್ಯ ಸರ್ಕಾರ ಮೇ ಅಂತ್ಯದೊಳಗೆ ಮೀಸಲು ಪಟ್ಟಿ ಚುನಾವಣಾ ಆಯೋಗಕಯ ನೀಡದಿದ್ದರೆ ಮತ್ತೊಮ್ಮೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಕೋರ್ಟ್ ನಲ್ಲಿ ಗುದ್ದಾಟ ನಡೆಯುವ ಸಾಧ್ಯತೆ ಇದೆ.ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ,ಮೀಸಲಾತಿ ನಿಗದಿ ಸಂಬಂಧ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಲೇ ಇತ್ತು.
2020ರಲ್ಲಿ ರಾಜ್ಯ ಸರ್ಕಾರಕ್ಕೆ 05 ಲಕ್ಷ ದಂಡ ವಿಧಿಸಿದ್ದ ಹೈಕೋರ್ಟ್!
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು’ ಎಂದು ಸರ್ಕಾರ 2023ರ ಡಿಸೆಂಬರ್ 19ರಂದು ಹೈಕೋರ್ಟ್‌ಗೆ ಭರವಸೆ ನೀಡಿತ್ತು. ‘ಇದನ್ನು ಪಾಲನೆ ಮಾಡಿಲ್ಲ’ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.ಇದಕ್ಕೂ ಮೊದಲು ಹೈಕೋರ್ಟ್, ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿದೆ’ ಎಂದು ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ ₹5 ಲಕ್ಷ ದಂಡ ವಿಧಿಸಿತ್ತು.2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಇದಕ್ಕಾಗಿ ಪ್ರತ್ಯೇಕ ಸೀಮಾ ನಿರ್ಣಯ ಆಯೋಗ ರಚಿಸಲಾಗಿತ್ತು.ಈ ಕ್ರಮವನ್ನು ಆಯೋಗವು ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಅಧಿಕಾರವಧಿ ಮುಗಿದು ನಾಲ್ಕು ವರ್ಷ ಪೂರ್ಣಗೊಂಡರೆ,ಚುನಾವಣೆ ನಡೆದು ಒಂಭತ್ತು ವರ್ಷ ಕಳೆದಿದೆ.
ಶಾಸಕರಿಗೆ ನಿರಾಸಕ್ತಿ ಮೀಸಲು ಪ್ರಕಟಿಸಲು ಹಿಂದೇಟು ಹಾಕುತ್ತಿರುವ ಸರ್ಕಾರ!
ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.ಆಡಳಿತ ಪಕ್ಷದ ಶಾಸಕರು ಕೂಡ ಸದ್ಯಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಬೇಡಿ ಎಂದು ಸರ್ಕಾರಕ್ಕೆ ಮತ್ತು ಸಚಿವರಿಗೆ ಒತ್ತಡ ಹಾಕುತ್ತಿದ್ದಾರೆ.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆದರೆ ಗ್ರಾಮೀಣ ಭಾಗದಲ್ಲಿ ಶಾಸಕರ ಆಡಳಿತ ಮತ್ತು ನಿಯಂತ್ರಣ ತಪ್ಪುತ್ತದೆ ಎಂಬ ಕಾರಣದಿಂದ ಚುನಾವಣೆಯ ಬಗ್ಗೆ ಯಾವ ಶಾಸಕರು ಕೂಡ ಆಸಕ್ತಿ ತೋರುತ್ತಿಲ್ಲ.ಒಂದು ವೇಳೆ ರಾಜ್ಯ ಸರ್ಕಾರ ಇದೇ ತಿಂಗಳು ಅಂತ್ಯದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿದರು ಕೂಡ,ಮುಂದಿನ ಮೂರು ತಿಂಗಳಿಗೆ ಚುನಾವಣೆ ನಡೆಸುವುದು ಕಷ್ಟಸಾಧ್ಯ.ಮೇ ತಿಂಗಳ ಅಂತ್ಯದೊಳಗೆ ಮೀಸಲು ಪಟ್ಟಿ ಚುನಾವಣಾ ಆಯೋಗಕ್ಕೆ ನೀಡಿದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಚುನಾವಣಾ ಆಯೋಗ ಚುನಾವಣಾ ನಡೆಸಬಹುದು.ಮೀಸಲು ಪಟ್ಟಿ ನೀಡಲು ಸರ್ಕಾರ ಮತ್ತಷ್ಟು ತಡಮಾಡಿದ್ದಲ್ಲಿ ಚುನಾವಣೆ ಕೂಡ ವಿಳಂಬವಾಗಲಿದೆ.ಕಳೆದ ನಾಲ್ಕು ವರ್ಷಗಳಿಂದ ಚುನಾವಣಾ ನಡೆಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಆಡಳಿತಕ್ಕೆ ಯಾವಾಗ ಮುಹೂರ್ತ ಕೂಡಿ ಬರಲಿದೆ ಎಂದು ಕಾದುನೋಡಬೇಕಾಗಿದೆ.
What's Your Reaction?






