ವಿರಾಜಪೇಟೆ: ತಾಯಿಯನ್ನೇ ಕೊಲೆಗೈದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ : 2020ರ ಡಿಸೆಂಬರ್ ನಲ್ಲಿ ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ👇🏻

ವಿರಾಜಪೇಟೆ(Coorgdaily): ವೃದ್ಧೆ ತಾಯಿಯು ಮನೆಯಲ್ಲಿದ್ದ ಸಂದರ್ಭದಲ್ಲಿ ಹೊಡೆದು,ಆತ್ಮಹತ್ಯೆಯಂದು ಬಿಂಬಿಸಿದ ಮಗ,ನಂತರದಲ್ಲಿ ವಿಧಿ ವಿಜ್ಞಾನ ಕೇಂದ್ರದ ವರದಿಯ ಆಧಾರದ ಮೇಲೆ ಕೊಲೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಇದೀಗಾ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವದಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ವಿರಾಜಪೇಟೆ ತಾಲೂಕಿನ ಕೊಳ್ತೋಡು ಬೈಗೋಡು ಗ್ರಾಮದ ನಿವಾಸಿ ಎಂ.ಬಿ. ಕಾರ್ಯಪ್ಪ ಅವರ ಪುತ್ರ ಎಂ.ಕೆ.ದೇವಯ್ಯ (53 ವರ್ಷ) ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ಸಾರಾಂಶ ಇಲ್ಲಿದೆ ಓದಿ👇🏻:
ವಿರಾಜಪೇಟೆ ತಾಲೂಕಿನ ಕೊಳ್ತೋಡು ಬೈಗೋಡು ನಿವಾಸಿ ದಿವಂಗತ ಎಂ.ಬಿ ಕಾರ್ಯಪ್ಪ ಮತ್ತು ಕಾಮವ್ವ ( ಕಾಮಿ) ದಂಪತಿಗಳಿಗೆ ಮೂವರು ಮಕ್ಕಳು.ಅಣ್ಣ ನಾಣಯ್ಯ ಅವರು ಐನ್ ಮನೆಯ ಸಮೀಪ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಕ್ಕಾ ಎಂ.ಕೆ. ವಿಮಲ ಅವರು ಮೈಸೂರು ನಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಆರೋಪಿ ದೇವಯ್ಯ ಮತ್ತು( 83 ವರ್ಷ ಪ್ರಾಯದ)ತಾಯಿ ಕಾಮವ್ವ ಅವರು ವಾಸವಿದ್ದರು. ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 02-12-2020 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಕಾಮವ್ವ ಅವರು ದಿನಾಂಕ 03-12-2020 ರ ಬೆಳಿಗ್ಗೆ ಕಾಣೆಯಾಗಿದ್ದರು. ತೋಟದ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಯಲ್ಲಿ ಮನೆಯ ಆವರಣದಲ್ಲಿದ್ದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದರು ಎಂದು ಮಗ ದೇವಯ್ಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ 50/2020 ವಿಧಿ 174(ಸಿ) ಸಿ.ಆರ್.ಪಿ.ಸಿ ದೂರು ದಾಖಲಿಸಿದ್ದರು. ಶವ ಪರೀಕ್ಷೆಗೆ ಒಳಪಡಿಸಿದ ವೇಳೆಯಲ್ಲಿ ಮೃತರ ಮಗಳು ವಿಮಲ ಅವರು ಪ್ರಕರಣದಲ್ಲಿ ಸಂಶಯವಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಠಾಣೆಯಲ್ಲಿ ವಿಧಿ 174(ಸಿ) ಎಂದು ಪ್ರಕರಣ ದಾಖಲಾಗುತ್ತದೆ. ಮೃತರ ಮಗಳು ಸಂಶಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀಧರ್ ಬಿ.ಎಸ್ ಅವರು ಹೆಚ್ಚುವರಿ ತನಿಖೆಗೆ ಮುಂದಾಗುತ್ತಾರೆ. ಮೃತೆಯ ಮರಣೋತ್ತರ ಪರೀಕ್ಷೆಯಲ್ಲಿ ಮೃತ ದೇಹದಲ್ಲಿ ದೊರಕಿರುವ ನೀರು ಮತ್ತು ಬಾವಿಯಲ್ಲಿರುವ ನೀರನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ರವಾನಿಸುತ್ತಾರೆ. ವಿಧಿ ವಿಜ್ಞಾನ ಪ್ರಯೋಗ ಕೇಂದ್ರದ ತಜ್ಞರು ಪರೀಕ್ಷೆ ಮಾಡಿದ ಬಳಿಕ ಮೃತದೇಹದಲ್ಲಿ ದೊರಕಿರುವ ನೀರು ಮತ್ತು ಬಾವಿಯ ನೀರು ಹೊಂದಾಣಿಕೆಯಾಗಿರುವುದಿಲ್ಲಾ ಎಂದು ವರದಿ ನೀಡಿದ್ದರು. ದಿನಾಂಕ 02-12-2020 ರಂದು ಕಾಮವ್ವ ಅವರನ್ನು ಅನಾಮಿಕ ವ್ಯಕ್ತಿ ಕೊಲೆ ಮಾಡಿದ್ದು ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮೃತದೇಹವನ್ನು ಬಾವಿಗೆ ಹಾಕಿರುತ್ತಾರೆ ತನಿಖೆಯಿಂದ ಧೃಡವಾಗುತ್ತದೆ. ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಿರುವುವರ ವಿರುದ್ದ ದಿನಾಂಕ 09-02-2021 ರಂದು ವಿಧಿ 302, 201 ಐ.ಪಿ.ಸಿ ಕಾಯ್ದೆಯಂತೆ ಮರು ಪ್ರಕರಣ ದಾಖಲಾಗುತ್ತದೆ. ದಿನಾಂಕ 16/03/2021 ರಂದು ತನಿಖಾ ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸತತ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ದಿನಾಂಕ 02-07-2025 ರಂದು ತನ್ನ ಅಂತಿಮ ತೀರ್ಪು ಪ್ರಕಟಿಸಿತು. ಕೊಲೆ ಆರೋಪವು ಸಾಬೀತಾದ ಹಿನ್ನಲೆಯಲ್ಲಿ ದಿನಾಂಕ 04-07-2025 ರಂದು ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌ. ನ್ಯಾಯಾಧೀಶರಾದ ಎಸ್. ನಟರಾಜು ಅವರು ಆರೋಪಿ ಎಂ.ಕೆ. ದೇವಯ್ಯ (ಪ್ರಾಯ 53 ವರ್ಷ) ಕಲಂ 302 ಐ.ಪಿ.ಸಿ ಗೆ ಜೀವಾವಧಿ, ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 06 ತಿಂಗಳ ಹೆಚ್ಚುವರಿ ಕಾರಾಗೃಹ ವಾಸ ಅನುಭವಿಸುವ ಶಿಕ್ಷೆ, ಕಲಂ. 201 ಐ.ಪಿ.ಸಿ ಗೆ 3 ವರ್ಷಗಳ ಸಾದಾ ಕಾರಾಗೃಹ ಅನುಭವಿಸುವ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದ್ದು. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ವಾಸ ಅನುಭವಿಸುವಂತೆ ಶಿಕ್ಷೆ ವಿಧಿಸಿತು.
ಪ್ರಕರಣದಲ್ಲಿ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಗೌ. ಎಸ್, ನಟರಾಜು ಅವರು ಆರೋಪಿಗೆ ಶಿಕ್ಷೆಯ ತೀರ್ಪು ನೀಡಿರುತ್ತಾರೆ. ಯಾಸೀನ್ ಅಹಮ್ಮದ್ ಸರಕಾರಿ ಅಭಿಯೋಜಕರು ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವರು ವಾದವನ್ನು ಮಂಡಿಸಿದರು.
(ವಿಶೇಷ ವರದಿ:ಟಿ.ಜೆ ಕಿಶೋರ್ ಕುಮಾರ್ ಶೆಟ್ಟಿ)
What's Your Reaction?






