ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಎ.ಎಸ್ ಪೊನ್ನಣ್ಣ! :ಸಚಿವ ಸಂಪುಟ ಪುನರ್ ರಚನೆ ವೇಳೆ ಕೊಡಗಿಗೆ ಸಿಗುತ್ತಾ ಮಂತ್ರಿ ಭಾಗ್ಯ!

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಎ.ಎಸ್ ಪೊನ್ನಣ್ಣ! :ಸಚಿವ ಸಂಪುಟ ಪುನರ್ ರಚನೆ ವೇಳೆ ಕೊಡಗಿಗೆ ಸಿಗುತ್ತಾ ಮಂತ್ರಿ ಭಾಗ್ಯ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ವರ್ಷ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಪುನರ್ ರಚನೆ ಮಾಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ.ಸಚಿವ ಸಂಪುಟದಿಂದ 8 ರಿಂದ 12 ಮಂದಿಗೆ ಕೊಕ್ ನೀಡುವುದು ಬಹುತೇಕ ಖಚಿತ.ಈಗಾಗಲೇ ಸಚಿವರ ಕಾರ್ಯವೈಖರಿಯ ರಿಪೋರ್ಟ್ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.ಸಚಿವ ಸಂಪುಟ ಪುನರ್ ರಚನೆ ವೇಳೆಯಲ್ಲಿ ಕೊಡಗಿಗೆ ಈ ಬಾರಿ ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರಿಗೆ ಮಂತ್ರಿ ಭಾಗ್ಯ ಒಲಿಯುವ ಸಾಧ್ಯತೆ ಇದೆ.ಕೊಡಗು ಜಿಲ್ಲೆಯ ಒಬ್ಬ ಕಾಂಗ್ರೆಸ್ ಶಾಸಕನಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ ದಿನಗಳಿಂದಲೇ ಕೇಳಿಬರುತ್ತಿದೆ.ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಅಲ್ಲದಿದ್ದರೂ ಕೂಡ ಸಚಿವ ಕೊಟ್ಟರೆ ನಿಭಾಯಿಸುತ್ತೇನೆ ಎಂಬ ಮನಸ್ಥಿತಿಯಲ್ಲಿದ್ದಾರೆ.ಆದರೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ನವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ.

ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಎ.ಎಸ್ ಪೊನ್ನಣ್ಣ!

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಕೊಡವ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,ಎ.ಕೆ ಸುಬ್ಬಯ್ಯ ನವರು ಫೈಯರ್ ಬ್ರ್ಯಾಂಡ್ ಆಗಿದ್ದರು,ಪೊನ್ನಣ್ಣ ನವರಿಗೆ ಫೈಯರ್ ಬ್ರ್ಯಾಂಡ್ ಆಗುವ ಎಲ್ಲಾ ಲಕ್ಷಣಗಳಿವೆ,ಫೈಯರ್ ಬ್ರ್ಯಾಂಡ್ ಆಗುತ್ತಾರಾ ಎಂದು ಕಾದುನೋಡಬೇಕಿದೆ ಎಂದು ಸಿ.ಎಂ ಸಿದ್ದರಾಮಯ್ಯ ನವರು ಹೇಳಿದ್ದರು.ಕಡಿಮೆ ಅವಧಿಯಲ್ಲಿಯೇ ರಾಜ್ಯದಲ್ಲಿ ಪ್ರಭಾವಿ ಶಾಸಕನಾಗಿ ಎ.ಎಸ್ ಪೊನ್ನಣ್ಣ ಗುರುತಿಸಿಕೊಂಡಿದ್ದಾರೆ.ಸರ್ಕಾರದಲ್ಲಿ ತನ್ನದೇ ಪ್ರಭಾವ ಹಾಗೂ ಎಲ್ಲಾ ಸಚಿವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.ವಿಶೇಷವಾಗಿ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿ‌ಎಂ ಡಿಕೆ ಶಿವಕುಮಾರ್ ಅವರ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಕೂಡ ಪೊನ್ನಣ್ಣ ಸಂಪರ್ಕ ಬೆಳೆಸಿಕೊಂಡಿದ್ದಾರೆ.2023ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರಕಾರ ರಚಿಸುವ ಸಂದರ್ಭದಲ್ಲಿ ಕೊಡಗಿಗೆ ಮಂತ್ರಿ ಸ್ಥಾನ ಒಲಿಯುತ್ತೆ ಎಂದು ನಿರೀಕ್ಷಿಸಲಾಗಿತ್ತು.ಆದರೆ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಶಾಸಕರಾಗಿ ಗೆಲುವು ಸಾಧಿಸಿದವರು ಮೊದಲ ಬಾರಿಗೆ ಶಾಸಕರಾಗಿರುವ ಕಾರಣದಿಂದಾಗಿ ಮಂತ್ರಿ ಸ್ಥಾನ ನೀಡಿಲ್ಲ ಎಂದು ಸ್ವತಃ ಸಿ.ಎಂ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದರು.ಸಚಿವ ಸ್ಥಾನ ಕೈ ತಪ್ಪಿದ ಎ‌ಎಸ್ ಪೊನ್ನಣ್ಣ ನವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಕಾನೂನು ಸಲಹೆಗಾರ ಸಚಿವ ಸಂಪುಟದ ದರ್ಜೆ ಸ್ಥಾನ ನೀಡಲಾಗಿತ್ತು.ಸಾಮಾನ್ಯವಾಗಿ ಯಾವುದೇ ಸರ್ಕಾರದಲ್ಲಿ ಕೊಡಗಿನ ಬಗ್ಗೆ ತಾತ್ಸರ ಮನೋಭಾವ ಸಹಜ.ಯಾಕೆಂದರೆ ಕೇವಲ ಎರಡು ಶಾಸಕರಿಂದ ಸರ್ಕಾರಕ್ಕೇನೂ ಆಪತ್ತು ಇಲ್ಲ ಎಂಬ ಭಾವನೆ ಈ ಹಿಂದಿನ ಎಲ್ಲಾ ಸರ್ಕಾರದಲ್ಲಿ ಕೂಡ ಇತ್ತು.ಪ್ರಭಾವಿ ಜಿಲ್ಲೆಗಳ ಶಾಸಕರ ನಡುವೆ ಕೊಡಗಿನ ಶಾಸಕರ ಮಾತಿಗೆ ಸರ್ಕಾರಗಳು 2004ರಿಂದೀಚಿಗೆ ಮನ್ನಣೆ ನೀಡಿದ್ದು ತೀರಾ ಕಡಿಮೆ.

ಕಳೆದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಕೊಡಗಿನ ಶಾಸಕರಾಗಿದ್ದ ಕೆ.ಜಿ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಪಕ್ಷಾತೀತ ಕೂಗು ಇದ್ದರೂ ಕೂಡ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ‌ ನೀಡಿರಲಿಲ್ಲ.ಇದೀಗ ಕೊಡಗಿನ ಇಬ್ಬರು ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಭಾವಿ ಶಾಸಕರಾಗಿದ್ದಾರೆ.1999-2004ರವರೆಗಿನ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಕೊಡಗಿನ ಮೂವರು ಸಚಿವರಾಗಿದ್ದು ಇತಿಹಾಸ.ತದನಂತರ 2012ರಲ್ಲಿ ಜಗದೀಶ್ ಶೆಟ್ಟರ್ ಅವರ ಸರ್ಕಾರದಲ್ಲಿ ಅಂದಿನ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಕೊಡಗಿನ ಉಸ್ತುವಾರಿ ಸಚಿವ ಸ್ಥಾನವನ್ನು ಬೆರಳೆಣಿಕೆಯ ತಿಂಗಳುವರೆಗೆ ವಹಿಸಿಕೊಂಡಿದ್ದರು.ಇದೀಗ 13 ವರ್ಷಗಳ ನಂತರ ಕೊಡಗಿನ ಶಾಸಕರೊಬ್ಬರು ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ವಹಿಸಿಕೊಳ್ಳುವುದು ಬಹುತೇಕ ಖಚಿತಗೊಂಡಿದೆ.ಸಚಿವ ಸಂಪುಟ ಪುನರ್ ರಚನೆ ವೇಳೆಯಲ್ಲಿ ಕೊಡಗಿಗೆ ಈ ಬಾರಿ ಮೊದಲ ಪ್ರಾಶಸ್ತ್ಯ ನೀಡುವ ಸಾಧ್ಯತೆ ಇದೆ.ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನದೊಂದಿಗೆ ಕೊಡಗಿನ ಉಸ್ತುವಾರಿ ಸಚಿವ ಸ್ಥಾನವನ್ನು ಕಾಂಗ್ರೆಸ್ ಸರ್ಕಾರ ನೀಡುವ ಲೆಕ್ಕಾಚಾರಗಳಿವೆ.

ಕಂದಾಯ ಅಥವಾ ಅರಣ್ಯ ಮಂತ್ರಿ ಭಾಗ್ಯ ಒಲಿಯುತ್ತಾ ಕಾವೇರಿ ತವರಿಗೆ!

ಕರ್ನಾಟಕ ಕಾಂಗ್ರೆಸ್ ನಲ್ಲಿ‌ ಸದ್ಯಕ್ಕೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಕ್ರಾಂತಿಯ ಬಲವಾದ ಚರ್ಚೆಗಳು ನಡೆಯುತ್ತಿದೆ‌.ಆದರೆ ನವೆಂಬರ್ ವೇಳೆಯಲ್ಲಿ ಗ್ಯಾರಂಟಿಯಾಗಿ ಸಚಿವ ಸಂಪುಟ ಪುನರ್ ರಚನೆ ಕ್ರಾಂತಿ ನಡೆಯಲಿದೆ.ಇಲ್ಲದಿದ್ದರೆ ಕಾಂಗ್ರೆಸ್ ನಲ್ಲಿ ಮತ್ತಷ್ಟು ಶಾಸಕರ ಅಸಮಾಧಾನ ಹೊರಬೀಳಲಿದೆ.08ರಿಂದ 12 ಸಚಿವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ಹೊಂದಿರುವ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ಪುನರ್ ರಚನೆ ವೇಳೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.ಅದಲ್ಲದೇ ಕೆಲವೊಂದು ಸಚಿವರ ಖಾತೆ ಕೂಡ ಬದಲಾವಣೆ ಮಾಡುವ ಚರ್ಚೆಗಳು ಕೂಡ ನಡೆಯುತ್ತಿದೆ.ಒಂದು ವೇಳೆ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಪ್ರಬಲ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.ಕಾನೂನು-ಸಂಸದೀಯ ವ್ಯವಹಾರಗಳ ಸಚಿವರಾಗಿ ಹೆಚ್.ಕೆ ಪಾಟೀಲ್ ಉತ್ತಮ‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರ ಖಾತೆ ಬದಲಾವಣೆ ಮಾಡುವುದು ಅನುಮಾನ.ಎ.ಎಸ್ ಪೊನ್ನಣ್ಣ ಸಚಿವರಾದರೆ ಕಂದಾಯ,ಅರಣ್ಯ ಖಾತೆ ನೀಡಬಹುದು ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.ಮತ್ತೊಂದೆಡೆ ಎ.ಎಸ್ ಪೊನ್ನಣ್ಣ ಸಚಿವರಾದರೆ ತನ್ನ ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ. ಎ.ಎಸ್ ಪೊನ್ನಣ್ಣ ಅವರಿಗೆ ಈ ಒಂದು ಅವಧಿಗೆ ಕಾನೂನು ಸಲಹೆಗಾರರ ಹುದ್ದೆ ಉತ್ತಮ ಎಂಬ ವಾದ ಕೂಡ ಒಂದೆಡೆ ಇದ್ದರೆ,ಮುಂದಿನ ಬಾರಿ ಒಂದು ವೇಳೆ ಎ.ಎಸ್ ಪೊನ್ನಣ್ಣ ಅವರು ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಸಿಗದಿದ್ದರೆ ಮಂತ್ರಿ ಸ್ಥಾನ ಕೇವಲ ಕನಸು ಮಾತ್ರ ಎಂಬಿತ್ಯಾದಿ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ಸಚಿವ ಸಂಪುಟ ಪುನರ್ ರಚನೆಯಾದರೆ ಕೊಡಗಿನ ಶಾಸಕರೊಬ್ಬರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ವಹಿಸಿಕೊಳ್ಳುವುದು ಗ್ಯಾರಂಟಿ.ಆದರೆ ಕೊಡಗಿನ ಗಡಿ ದಾಟಿ ಪ್ರಬಲ ಜಿಲ್ಲೆಗಳ,ಪ್ರಬಲ ಜಾತಿಗಳ ಶಾಸಕರ ರಾಜಕೀಯ ಜೋರಾಗಿ ಕಾಂಗ್ರೆಸ್ ನಲ್ಲಿ ನಡೆದರೆ ಕೊಡಗಿಗೆ ಸಚಿವ ಸ್ಥಾನ ಕೇವಲ ಎಂದಿನಂತೆ ಕನಸಿಗೆ ಉಳಿಯಲಿದೆ.ತನ್ನ 51ನೇ ವರ್ಷಕ್ಕೆ ಕಾಲಿರಿಸಿರುವ ಎ.ಎಸ್ ಪೊನ್ನಣ್ಣ ನವರಿಗೆ 51ನೇ ವರ್ಷದಲ್ಲಿ ಮಂತ್ರಿ ಭಾಗ್ಯ ಸಿಗುತ್ತಾ ಎಂದು ಕಾದುನೋಡಬೇಕಿದೆ.