ಅಂತ್ಯ ಸಂಸ್ಕಾರಕ್ಕೆ ಮುನ್ನ ಶವಪೆಟ್ಟಿಗೆಯೊಳಗಿನಿಂದ ಕೇಳಿದ ಶಬ್ದ; ಮುಂದಾಗಿದ್ದೇನು?
ಬ್ಯಾಂಕಾಕ್ (ಥೈಲ್ಯಾಂಡ್): ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದಾಗಲೇ ಶವಪೆಟ್ಟಿಗೆಯೊಳಗಿನ ಮಹಿಳೆ ಅಚಾನಕ್ಕಾಗಿ ಚಲಿಸಿದ ರೋಚಕ ಘಟನೆ ಥೈಲ್ಯಾಂಡ್‌ನ ನೊಂಥಬುರಿ ಪ್ರಾಂತ್ಯದಲ್ಲಿ ದಾಖಲಾಗಿದೆ.
ಮೃತಪಟ್ಟಿದ್ದಾರೆಂದು ಭಾವಿಸಿದ್ದ 65 ವರ್ಷದ ಮಹಿಳೆ, ದೇವಾಲಯದ ಬಳಿ ಶವಪೆಟ್ಟಿಗೆಯೊಳಗಿಂದಲೇ ಶಬ್ಧ ಹೊರಡಿಸಿದ ಬಳಿಕ ಜೀವಂತವಾಗಿರುವುದು ಪತ್ತೆಯಾಗಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ.
ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್ ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ಫಿಟ್ಸಾನುಲೋಕ್ ಪ್ರಾಂತ್ಯದಿಂದ ಸಹೋದರ ಅಂತ್ಯಸಂಸ್ಕಾರಕ್ಕೆ ಕರೆತಂದು, ಪಿಕಪ್ ಟ್ರಕ್‌ನ ಹಿಂಭಾಗದಲ್ಲಿರಿಸಿದ ಶವಪೆಟ್ಟಿಗೆಯಲ್ಲಿ ದೇವಾಲಯಕ್ಕೆ ತಂದಿದ್ದರು. ಸಿಬ್ಬಂದಿ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ ಮಾಡುತ್ತಿದ್ದ ವೇಳೆ ಪೆಟ್ಟಿಗೆಯಿಂದ ವಿಚಿತ್ರ ಶಬ್ಧ ಕೇಳಿಬಂದಿದೆ.
ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್‌ಥೂಪ್ ಅವರು, “ಶವಪೆಟ್ಟಿಗೆಯಿಂದ ಶಬ್ಧ ಕೇಳಿ ಆಶ್ಚರ್ಯಗೊಂಡೆ. ತೆರೆಯಲು ಹೇಳಿದಾಗ ಮಹಿಳೆ ಒಳಗಿಂದಲೇ ಪೆಟ್ಟಿಗೆಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಂಡುಬಂತು,” ಎಂದು ತಿಳಿಸಿದ್ದಾರೆ. ದೇವಾಲಯವೇ ಶೇರ್ ಮಾಡಿದ ವೀಡಿಯೊದಲ್ಲೂ ಮಹಿಳೆಯ ತೋಳು ಹಾಗೂ ತಲೆ ಚಲಿಸುವ ದೃಶ್ಯಗಳು ದಾಖಲಾಗಿವೆ.
ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆ, ಎರಡು ದಿನಗಳಿಂದ ಪ್ರತಿಕ್ರಿಯಿಸದೆ ಇದ್ದ ಕಾರಣ ಸತ್ತಿದ್ದಾರೆಂದು ಕುಟುಂಬ ತಪ್ಪಾಗಿ ಭಾವಿಸಿತ್ತು. ಮನೆಯಲ್ಲೇ ಅಂತ್ಯಕ್ರಿಯೆಗೆ ಮುನ್ನ ಮಾಡಲಾಗುವ ವಿಧಿವಿಧಾನಗಳನ್ನು ನೆರವೇರಿಸಿ, ಶವಪೆಟ್ಟಿಗೆಯಲ್ಲಿ ಇಟ್ಟು 500 ಕಿಲೋಮೀಟರ್ ದೂರದ ಬ್ಯಾಂಕಾಕ್‌ಗೆ ಕರೆತಂದಿದ್ದರು.
ಅಧಿಕೃತ ಮರಣ ಪ್ರಮಾಣಪತ್ರವಿಲ್ಲದೆ ಇದ್ದ ಕಾರಣ ಆಸ್ಪತ್ರೆ ಅಂಗಾಂಗ ದಾನಕ್ಕೂ ದೇಹ ಸ್ವೀಕರಿಸಲು ನಿರಾಕರಿಸಿತ್ತು. ದೇವಾಲಯದಲ್ಲಿ ಉಚಿತ ಅಂತ್ಯಸಂಸ್ಕಾರಕ್ಕೆ ಅಗತ್ಯ ದಾಖಲೆಗಳು ಬೇಕಿದ್ದರಿಂದ ಅದರಲ್ಲೂ ವಿಳಂಬ ಉಂಟಾಗಿತ್ತು. ಇದರ ನಡುವೆ ಪೆಟ್ಟಿಗೆಯೊಳಗಿಂದಲೇ ಶಬ್ಧ ಕೇಳಿಬಂದು ಘಟನೆ ತಿರುವು ಪಡೆದಿದೆ.
ನಂತರ ದೇವಾಲಯದ ಸಹಾಯದೊಂದಿಗೆ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದೇವಾಲಯವೇ ಭರಿಸುವುದಾಗಿ ಮಠಾಧೀಶರು ತಿಳಿಸಿದ್ದಾರೆ.
ಅಪರೂಪದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
