ಕತಾರ್ ನಲ್ಲಿ ಹಮಾಸ್ ನಾಯಕರ ಹತ್ಯಾ ಯೋಜನೆಗೆ ಮೊಸಾದ್ ವಿರೋಧ

ದೋಹಾ/ಜೆರುಸಲೆಮ್: ಕತಾರ್‌ನಲ್ಲಿ ಹಮಾಸ್ ಹಿರಿಯ ನಾಯಕರನ್ನು ಗುರಿಯಾಗಿಸಿ ತಳಮಟ್ಟದ ಏಜೆಂಟ್‌ಗಳನ್ನು ಬಳಸುವ ಯೋಜನೆಯನ್ನು ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ತಿರಸ್ಕರಿಸಿದೆ ಎಂದು Washington Post ವರದಿ ಮಾಡಿದೆ.
ಮಂಗಳವಾರ ಇಸ್ರೇಲ್ ಕತಾರ್ ನಲ್ಲಿ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿದ್ದರೂ, ಮೊಸಾದ್ ಕಾರ್ಯಾಚರಣೆಯಿಂದ ದೂರವಿತ್ತು. ಇಸ್ರೇಲಿ ಮೂಲಗಳ ಪ್ರಕಾರ, ನೇರ ಹತ್ಯಾ ದಾಳಿ ನಡೆಸುವ ಯೋಜನೆಗೆ ಮೊಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದರು vb ಎಂದು ತಿಳಿದು ಬಂದಿದೆ.
“ಇಂತಹ ಕ್ರಮವು ಕತಾರ್ ನೊಂದಿಗೆ ಬೆಳೆಸಿಕೊಂಡಿರುವ ರಾಜ ತಾಂತ್ರಿಕ ಸಂಬಂಧ ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆಗೆ ಗಂಭೀರ ಹಾನಿ ಉಂಟುಮಾಡಬಹುದು” ಎಂದು ಬಾರ್ನಿಯಾ ಎಚ್ಚರಿಕೆ ನೀಡಿದ್ದಾರೆ.
ಕತಾರ್ ಹಮಾಸ್ ನಾಯಕರಿಗೆ ಆಶ್ರಯ ನೀಡಿರುವುದರೊಂದಿಗೆ, ಕದನ ವಿರಾಮ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವುದು ಇಲ್ಲಿ ಗಮನಾರ್ಹ.
ಹಮಾಸ್ ಮೂಲಗಳ ಪ್ರಕಾರ, ದಾಳಿಯಲ್ಲಿ ಹಿರಿಯ ನಾಯಕ ಖಲೀಲ್ ಅಲ್-ಹಯ್ಯ ಪಾರಾದರೂ, ಅವರ ಕುಟುಂಬ ಸದಸ್ಯರು, ಸಹಾಯಕರು ಹಾಗೂ ಒಬ್ಬ ಕತಾರ್ ಅಧಿಕಾರಿ ಸಾವನ್ನಪ್ಪಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮ ಮಾತುಕತೆಗಳ ನಿಧಾನಗತಿಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಝಮೀರ್ ದಾಳಿಯ ಸಂದರ್ಭವನ್ನು ವಿರೋಧಿಸಿದ್ದರು. ಸಚಿವ ರಾನ್ ಡೆರ್ಮರ್ ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ರಧಾನಿಗೆ ಬೆಂಬಲ ನೀಡಿದರು.
“ಈಗಲೇ ಏಕೆ? ಅವಶ್ಯಕತೆ ಇದ್ದರೆ ನಾವು ಅವರನ್ನು ಕೆಲವು ವರ್ಷಗಳ ನಂತರವೂ ಹೊಡೆದುರುಳಿಸಬಹುದು, ಮೊಸಾದ್ ಅದನ್ನು ಹೇಗೆ ಮಾಡಬೇಕೆಂದು ತಿಳಿದಿದೆ” ಎಂದು ಒಬ್ಬ ಇಸ್ರೇಲಿ ಅಧಿಕಾರಿ ಹೇಳಿದ್ದಾರೆ.
ಕತಾರ್ ದಾಳಿಯನ್ನು “ ಪ್ರಾಯೋಜಿತ ಭಯೋತ್ಪಾದನೆ” ಎಂದು ಖಂಡಿಸಿದ್ದು, ಮಧ್ಯಸ್ಥಿಕೆ ಪ್ರಕ್ರಿಯೆಗೆ ಇದು ನೇರ ದ್ರೋಹ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ. ಇಸ್ರೇಲ್ ಮಾತ್ರ, ಜೆರುಸಲೆಮ್ ನಲ್ಲಿ ನಡೆದ ಹಮಾಸ್ ದಾಳಿ ಹಾಗೂ ಗಾಝಾದಲ್ಲಿ ನಾಲ್ವರು ಸೈನಿಕರ ಸಾವಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಪ್ರಧಾನಿ ನೆತನ್ಯಾಹು ಹಮಾಸ್‌ನ ಅಕ್ಟೋಬರ್ 7 ದಾಳಿಯನ್ನು ಇಸ್ರೇಲ್‌ನ “9/11 ಕ್ಷಣ” ಎಂದು ವರ್ಣಿಸಿದ್ದು, “ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರಗಳು ಅವರನ್ನು ಹೊರಹಾಕಬೇಕು ಅಥವಾ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಇಸ್ರೇಲ್ ಕ್ರಮ ಕೈಗೊಳ್ಳುತ್ತದೆ” ಎಂದು ಎಚ್ಚರಿಸಿದ್ದಾರೆ.
ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಯ ಕಾರ್ಯತಂತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಈ ಕಾರ್ಯಾಚರಣೆಯ ಪ್ರತಿಯೊಂದು ಅಂಶದಲ್ಲಿ ನನಗೆ ಅತೃಪ್ತಿ ಇದೆ” ಎಂದು ಪ್ರತಿಕ್ರಿಯಿಸಿದ್ದಾರೆ.