ಕಾಂಗೋದಲ್ಲಿ ದೋಣಿ ದುರಂತ: 86 ಮಂದಿ ಮೃತ್ಯು

ಕಿನ್ಶಾಸಾ: ಕಾಂಗೋ ದೇಶದಲ್ಲಿ ಭೀಕರ ದೋಣಿ ದುರಂತ ಸಂಭವಿಸಿದ್ದು, ಕನಿಷ್ಠ 86 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ವಾಯುವ್ಯ ಕಾಂಗೋದ ಈಕ್ವೆಟರ್ ಪ್ರಾಂತ್ಯದ ಬಸಾಂಕುಸು ಪ್ರದೇಶದಲ್ಲಿ ಮೋಟಾರು ಚಾಲಿತ ದೋಣಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.
ಶುಕ್ರವಾರ ದೇಶ ಮಾಧ್ಯಮಗಳು ಘಟನೆಯ ವಿವರಗಳನ್ನು ಪ್ರಕಟಿಸಿವೆ. ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗದಿದ್ದರೂ, ದೋಣಿಯಲ್ಲಿ ಅಸಮರ್ಪಕ ಲೋಡಿಂಗ್ ಹಾಗೂ ರಾತ್ರಿ ವೇಳೆ ಸಂಚಾರವೇ ಇದಕ್ಕೆ ಕಾರಣವಾಗಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಸ್ಥಳೀಯ ಆಡಳಿತ ಹಾಗೂ ರಕ್ಷಣಾ ತಂಡಗಳು ಮೃತ ದೇಹಗಳನ್ನು ಹೊರತೆಗೆಯುವ ಕಾರ್ಯ ಕೈಗೊಂಡಿದ್ದು, ಹಲವರು ಇನ್ನೂ ಕಣ್ಮರೆಯಾಗಿರುವ ಸಾಧ್ಯತೆಯಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.