'ಜೆನ್ ಝಡ್' ಪ್ರತಿಭಟನೆ | ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ, ಹುತಾತ್ಮರ ಕುಟುಂಬಕ್ಕೆ ಪರಿಹಾರ ಘೋಷಣೆ: ನೇಪಾಳ ಪ್ರಧಾನಿ ಸುಶೀಲಾ ಕರ್ಕಿ

ಕಠ್ಮಂಡು: ‘ಜೆನ್ ಝಡ್’ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರನ್ನು, ಆಸ್ತಿ ದ್ವಂಸ ಮಾಡಿದವರನ್ನು ಶಿಕ್ಷಿಸಲಾಗುವುದು ಎಂದು ನೇಪಾಳದ ಹೊಸ ಪ್ರಧಾನಮಂತ್ರಿ ಸುಶೀಲಾ ಕರ್ಕಿ ಘೋಷಿಸಿದ್ದಾರೆ.
73 ವರ್ಷದ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುವ ಕರ್ಕಿ, ಕಠ್ಮಂಡುವಿನ ಸಿಂಗ್‌ದರ್ಬಾರ್ ಸಂಕೀರ್ಣದಲ್ಲಿರುವ ಹೊಸ ಗೃಹ ಸಚಿವಾಲಯದ ಕಟ್ಟಡದಲ್ಲಿ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದರು.
ಪ್ರತಿಭಟನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರನ್ನು “ಹುತಾತ್ಮರು” ಎಂದು ಘೋಷಿಸಲಾಗುವುದು ಮತ್ತು ಅವರ ಕುಟುಂಬಗಳಿಗೆ ತಲಾ ಒಂದು ಮಿಲಿಯನ್ ನೇಪಾಳಿ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
ಗಾಯಾಳುಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದೂ ಭರವಸೆ ನೀಡಿದರು.
ಮಂಗಳವಾರ ಕೆ.ಪಿ. ಶರ್ಮಾ ಓಲಿ ಸರ್ಕಾರವನ್ನು ಪತನವಾದ ನಂತರ, ‘ಜೆನ್ ಝಡ್’ ಗುಂಪಿನ ಶಿಫಾರಸಿನ ಮೇರೆಗೆ ಕರ್ಕಿಯವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣವೇ ಹಿರಿಯ ಸರ್ಕಾರಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆಯ ಸಮಯದಲ್ಲಿ ನಡೆದ ಬೆಂಕಿ ಹಚ್ಚುವಿಕೆ ಮತ್ತು ಆಸ್ತಿ ನಾಶದಂತಹ ಘಟನೆಗಳು “ಪೂರ್ವ ಯೋಜಿತ ಕ್ರಿಮಿನಲ್ ಚಟುವಟಿಕೆ” ಆಗಿದ್ದು, ಇದರಲ್ಲಿ ಪ್ರತಿಭಟನಾಕಾರರು ನೇರವಾಗಿ ಭಾಗಿಯಾಗಿಲ್ಲ ಎಂದರು. “ಇಂತಹ ಕೃತ್ಯಗಳನ್ನು ಸಂಘಟಿತವಾಗಿ ನಡೆಸಲಾಗಿದೆ, ಆರೋಪಿಗಳಿಗೆ ಶಿಕ್ಷೆ ಖಚಿತ” ಎಂದು ಕರ್ಕಿ ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 8 ಮತ್ತು 9 ರಂದು ನಡೆದ ಪ್ರತಿಭಟನೆಯ ವೇಳೆ ಸಿಂಗ್‌ದರ್ಬಾರ್ ಸಂಕೀರ್ಣದೊಳಗಿನ ಪ್ರಧಾನ ಮಂತ್ರಿ ಕಚೇರಿಗೆ ಬೆಂಕಿ ಹಚ್ಚಲ್ಪಟ್ಟ ಹಿನ್ನೆಲೆಯಲ್ಲಿ, ಹೊಸದಾಗಿ ನಿರ್ಮಿತ ಗೃಹ ಸಚಿವಾಲಯದ ಕಟ್ಟಡವನ್ನು ತಾತ್ಕಾಲಿಕವಾಗಿ ಪ್ರಧಾನ ಮಂತ್ರಿ ಕಚೇರಿಯಾಗಿ ಬಳಸಲು ನಿರ್ಧರಿಸಲಾಗಿದೆ. ಅಲ್ಲದೆ, ಪ್ರತಿಭಟನೆ ವೇಳೆ ಹಾನಿಗೊಳಗಾದ ಪೊಲೀಸ್ ಠಾಣೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮುಖ್ಯ ಕಾರ್ಯದರ್ಶಿ ಏಕ್ ನಾರಾಯಣ್ ಆರ್ಯಲ್ ಅವರಿಗೆ ನಿರ್ದೇಶನ ನೀಡಿದರು.
ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧದ ವಿರುದ್ಧ ಆರಂಭವಾದ ಈ ಚಳವಳಿ, ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ನೇತಾರರ ನಿರಾಸಕ್ತಿಯನ್ನು ಪ್ರತಿಬಿಂಬಿಸುವ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿತು. ಸೆಪ್ಟೆಂಬರ್ 9 ರಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 19 ಮಂದಿ ಸಾವಿಗೀಡಾದ ನಂತರ, ನೂರಾರು ಚಳವಳಿಗಾರರು ಓಲಿ ಅವರ ರಾಜೀನಾಮೆಯನ್ನು ಒತ್ತಾಯಿಸಿದ್ದರು. ಓಲಿ ಮಂಗಳವಾರ ರಾಜೀನಾಮೆ ನೀಡಿದರು.
ಪ್ರತಿಭಟನೆಯಲ್ಲಿ ಇದುವರೆಗೆ ಮೂವರು ಪೊಲೀಸರು ಸೇರಿದಂತೆ ಒಟ್ಟು 72 ಮಂದಿ ಸಾವಿಗೀಡಾಗಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಆರ್ಯಲ್ ತಿಳಿಸಿದ್ದಾರೆ. ಇದರಲ್ಲಿ 59 ಪ್ರತಿಭಟನಾಕಾರರು ಮತ್ತು 10 ಕೈದಿಗಳು ಸೇರಿದ್ದಾರೆ.