ಗೋಣಿಕೊಪ್ಪ: ಡ್ರೈವರ್ ಹತ್ಯೆ ಪ್ರಕರಣ, ಮಹಿಳೆ ಸೇರಿ ಐವರ ಬಂಧನ
ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದ ಕಾಫಿ ಕ್ಯೂರಿಂಗ್ ವರ್ಕ್ಸ್ ಬಳಿ ಡಿಸೆಂಬರ್ 31ರ ಮಧ್ಯರಾತ್ರಿ ವೇಳೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಕೊಲೆ ಆರೋಪಿಗಳಾದ ಪೂರ್ಣಚಂದ್ರ ತೇಜಸ್ವಿ, ಕಾವ್ಯ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಎಂಬವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ: ಡಿಸೆಂಬರ್ 31ರಂದು ಗೋಣಿಕೊಪ್ಪ ಹರಿಶ್ಚಂದ್ರಪುರ ನಿವಾಸಿ ಲಾರಿ ಚಾಲಕ ನವಾಜ್ ತನ್ನ ಕಾರಿನಲ್ಲಿ ಕುಂದ ಗ್ರಾಮಕ್ಕೆ ನಡುರಾತ್ರಿಯ ವೇಳೆ ತೆರಳಿದ್ದ. ಕುಂದ ಗ್ರಾಮದಲ್ಲಿರುವ ಕಾಫಿ ಕ್ಯೂರಿಂಗ್ ವರ್ಕ್ಸ್ ಬಾಡಿಗೆ ಮನೆಯಲ್ಲಿದ್ದ ಮಹಿಳೆ ಕಾವ್ಯಾಳ ಮನೆಯ ಕದ ತಟ್ಟಿ ಮಹಿಳೆಯನ್ನು ಹೊರ ಬರುವಂತೆ ಕರೆದಿದ್ದ. ಈ ವೇಳೆ ಕಾವ್ಯಳ ಪತಿ ಪೂರ್ಣಚಂದ್ರ ತೇಜಸ್ವಿ ಮನೆಯ ಬಾಗಿಲನ್ನು ತೆರೆದು ನವಾಜ್‌ನನ್ನು ಮನೆಯ ಬಳಿ ಬಂದ ಬಗ್ಗೆ ವಿಚಾರಣೆ ಮಾಡಿದ್ದಾನೆ.
ಈ ಸಂದರ್ಭ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯು ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಕಾವ್ಯಳ ಪತಿ ಪೂರ್ಣಚಂದ್ರ ತೇಜಸ್ವಿ ಅಕ್ಕಪಕ್ಕದಲ್ಲಿದ್ದ ಕಾರ್ಮಿಕರನ್ನು ಸಹಾಯಕ್ಕಾಗಿ ಜೋರಾಗಿ ಕರೆದಿದ್ದಾನೆ. ಈ ವೇಳೆ ಕಾರ್ಮಿಕರಾದ ಅಶೋಕ್, ಕುಮಾರ್, ಮಹೇಂದ್ರ ಸ್ಥಳಕ್ಕೆ ಆಗಮಿಸಿದ್ದು ಮಾತಿನ ಚಕಮಕಿ ಜೋರಾಗಿ ನಡೆದಿದೆ. ಈ ಸಂದರ್ಭ ಕಾವ್ಯಳ ಪತಿ ಪೂರ್ಣಚಂದ್ರ ತೇಜಸ್ವಿ ನವಾಜ್‌ನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಗಲಾಟೆಯ ಗಂಭೀರತೆ ಅರಿತ ನವಾಜ್ ಮನೆಯ ಬಳಿಯಿಂದ ಓಡಿ ಹೋಗಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಮೀಪದ ಹಳ್ಳಕ್ಕೆ ಬಿದ್ದಿದ್ದಾನೆ.
ಈ ವೇಳೆ ಬಿದ್ದ ಸ್ಥಳದಲ್ಲಿಯೇ ನಾಲ್ವರೂ ಸೇರಿ ನವಾಜ್‌ನ ಮೇಲೆ ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿದ ನವಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಗಾಬರಿಗೊಂಡ ನಾಲ್ವರು ಸೇರಿ ನವಾಜ್‌ನನ್ನು ಎತ್ತಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆತನ ಕಾರಿನ ಬಳಿ ಮಲಗಿಸಿ ಆತನ 800 ಮಾರುತಿ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ಪ್ರಕರಣವನ್ನು ಅಪಘಾತ ಎಂಬ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದರು.
ನಂತರ ವಿಷಯ ತಿಳಿದ ಗೋಣಿಕೊಪ್ಪ ಪೊಲೀಸರು ನವಾಜ್‌ನನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದರು. ಆದರೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ನವಾಜ್ ಮೃತಪಟ್ಟಿದ್ದ. ಪೊಲೀಸರು ತನಿಖೆ ಕೈಗೊಂಡು ಮೇಲ್ನೋಟಕ್ಕೆ ಪ್ರಕರಣವು ಕೊಲೆ ಎಂದು ತಿಳಿಯುತ್ತಿದ್ದಂತೆಯೇ ಕಾವ್ಯ ಸೇರಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಗೋಣಿಕೊಪ್ಪ ವೃತ್ತನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸಿಸಿ ಕ್ಯಾಮರಾ ಫೂಟೇಜ್‌ಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.