ಅಬುಧಾಬಿಯಲ್ಲಿ ರಸ್ತೆ ಅಪಘಾತ: ಒಂದೇ ತಾಯಿಯ ನಾಲ್ವರು ಮಕ್ಕಳು ಮೃತ್ಯು

ಅಬುಧಾಬಿಯಲ್ಲಿ ರಸ್ತೆ ಅಪಘಾತ: ಒಂದೇ ತಾಯಿಯ ನಾಲ್ವರು ಮಕ್ಕಳು ಮೃತ್ಯು
Photo credit:VB

ಅಬುಧಾಬಿ: ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಒಂದೇ ಕುಟುಂಬದ, ಒಂದೇ ತಾಯಿಗೆ ಜನಿಸಿದ ನಾಲ್ವರು ಮಕ್ಕಳು ಹಾಗೂ ಮನೆಕೆಲಸದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಕ್ಕಳ ಪೋಷಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಮಕ್ಕಳು ಕಿಝಿಸ್ಸೇರಿ ಪುಲಿಯಕ್ಕೋಡ್ ನಿವಾಸಿಗಳಾದ ಮಲಯನ್ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ದಂಪತಿಯವರಾಗಿದ್ದು, ಆಶಾಸ್ (14), ಅಮ್ಮರ್ (12), ಅಝಂ (7) ಮತ್ತು ಅಯಾಶ್ (5) ಎಂದು ಗುರುತಿಸಲಾಗಿದೆ. ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಮ್ರವಟ್ಟಂ ಮೂಲದ ಬುಶ್ರಾ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹೊಸ ವರ್ಷದ ಆಚರಣೆಯ ಅಂಗವಾಗಿ ಅಬುಧಾಬಿಯಲ್ಲಿ ಆಯೋಜಿಸಲಾಗಿದ್ದ ಲಿವಾ ಫೆಸ್ಟ್ ವೀಕ್ಷಿಸಿ ಕುಟುಂಬ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಏಳು ಸದಸ್ಯರಿದ್ದ ಕುಟುಂಬ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಐವರು ಮಕ್ಕಳಿದ್ದ ಈ ಕುಟುಂಬದಲ್ಲಿ ನಾಲ್ವರು ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದು, ತಂದೆ–ತಾಯಿ ಹಾಗೂ ಏಕೈಕ ಪುತ್ರಿ ಬದುಕುಳಿದಿದ್ದಾರೆ.

ಮೃತ ನಾಲ್ವರು ಮಕ್ಕಳು ಹಾಗೂ ಬುಶ್ರಾ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12.30ಕ್ಕೆ ದುಬೈನ ಸೋನಾಪುರದಲ್ಲಿರುವ ಮಸೀದಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.