ಸಮಾತ್ರಾ ಉತಾರಾ ರ‍್ಯಾಲಿ: ಅಂತರರಾಷ್ಟ್ರೀಯ ರ‍್ಯಾಲಿ ಪ್ರವೇಶದಲ್ಲೇ ಅಬ್ಬಿನ್ ರೈ ಮಿಂಚು

ಮಡಿಕೇರಿ : ಸಮಾತ್ರಾ ಉತಾರಾ, ಇಂಡೋನೇಷ್ಯಾ – ಎಫ್‌ಐಎ ಏಷ್ಯಾ–ಪೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ (ಎಪಿಆರ್ಸಿ) ಮೂರನೇ ಸುತ್ತು, ಸಮಾತ್ರಾ ಉತಾರಾದ ಕಠಿಣ ಹಂತಗಳಲ್ಲಿ ಜರುಗಿದ ಸ್ಪರ್ಧೆಯಲ್ಲಿ ಭಾರತೀಯ ರ‍್ಯಾಲಿ ತಂಡಗಳು ಅದ್ಭುತ ಪ್ರದರ್ಶನ ತೋರಿದ್ದು, ದೇಶದ ಮೋಟರ್‌ಸ್ಪೋರ್ಟ್ ಇತಿಹಾಸದಲ್ಲಿ ಹೆಮ್ಮೆ ತರುವ ಹೊಸ ಇತಿಹಾಸ ಸೖಷ್ಟಿಸಿದೆ.
ವ್ಯಾಮ್‌ಸಿ ಮೆರ್ಲಾ ಪ್ರಾಯೋಜಿತ ವಿಎಂ ಮೋಟರ್‌ಸ್ಪೋರ್ಟ್‌ನ ಪರವಾಗಿ, ಚಾಲಕ ಕೊಡಗು ಜಿಲ್ಲೆಯ ಮೇಕೇರಿಯ ಅಬ್ಬಿನ್ ರೈ ಹಾಗೂ ಸಹ ಚಾಲಕ ಶ್ರೀಕಾಂತ್ ಗೌಡ ತಮ್ಮ ಅಂತರರಾಷ್ಟ್ರೀಯ ಮೋಟಾರ್ ರ್ಯಾಲಿಯ ಪ್ರವೇಶದಲ್ಲೇ ಶ್ರೇಷ್ಠ ಸಾಧನೆ ತೋರಿದರು. ಅವರು ಎನ್‌ವಿಎ ವರ್ಗದಲ್ಲಿ ದ್ವಿತೀಯ ಸ್ಥಾನ, ಜೂನಿಯರ್ ಎಪಿಆರ್ಸಿ 2ನೇ ಸ್ಥಾನ, ಎಂ1 ವರ್ಗದಲ್ಲಿ ಮೂರನೇ ರನ್ನರ್-ಅಪ್ ಹಾಗೂ ಎಪಿಆರ್ಸಿ ಒಟ್ಟು ಅಂಕಪಟ್ಟಿಯಲ್ಲಿ 8 ನೇ ಸ್ಥಾನ ಪಡೆದರು.
ರ್ಯಾಲಿಯಲ್ಲಿನ ಸವಾಲಿನ ಕಲ್ಲುಮಣ್ಣು ಹಂತಗಳಲ್ಲಿ ಅವರ ಸ್ಥಿರ ಚಾಲನೆ ಮತ್ತು ವೇಗವು ಸ್ಪರ್ಧಿಗಳು ಹಾಗೂ ಅಭಿಮಾನಿಗಳ ಶ್ಲಾಘನೆಗೆ ಪಾತ್ರವಾಯಿತು. ಮತ್ತೊಂದು ಗಮನಾರ್ಹ ಫಲಿತಾಂಶದಲ್ಲಿ, ಬೋಪಯ್ಯ ಕೊಂಗಟ್ಟೀರ ಹಾಗೂ ಸಹ ಚಾಲಕ ಪಿ.ವಿ.ಎಸ್ ಮೂರ್ತಿ ತಮ್ಮ ವಿಬಾಗಗಳಲ್ಲಿ ಪ್ರಥಮ ಸ್ಥಾನ ಮತ್ತು ಎಪಿಆರ್ಸಿ ಸೇರಿದಂತೆ ಒಟ್ಟಾರೆ ನಾಲ್ಕನೇ ಸ್ಥಾನ ಗಳಿಸಿದರು. ಇದರಿಂದ ಭಾರತೀಯ ರ‍್ಯಾಲಿ ಚಾಲಕರು ಅಂತಾರಾಷ್ಟ್ರೀಯ ಸ್ಪರ್ಧಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ ಅನಿಶ್ಚಿತ ಹವಾಮಾನ, ತಿರುವು ತಿರುವಿನ ರಸ್ತೆ ಮತ್ತು ಕಠಿಣ ಭೂಪ್ರದೇಶಗಳೊಂದಿಗೆ ಸಮಾತ್ರಾ ಉತಾರಾ ರ‍್ಯಾಲಿ 2025 ಸ್ಪಧಾ೯ ತಂಡಗಳಿಗೆ ಭಾರೀ ಸವಾಲು ಎಸೆದರೂ, ಭಾರತೀಯ ತಂಡಗಳು ಅದನ್ನು ಸಮರ್ಥವಾಗಿ ಎದುರಿಸಿ, ವಿಶ್ವ ರ‍್ಯಾಲಿ ವೇದಿಕೆಯಲ್ಲಿ ಭಾರತದ ಹಿರಿಮೆಗೆ ಕಾರಣವಾದರು. ಈ ಫಲಿತಾಂಶಗಳಿಂದ, ವಿಎಂ ಮೋಟರ್‌ಸ್ಪೋರ್ಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ಹೆಗ್ಗುರುತು ಮೂಡಿಸಿದ್ದು, ಮುಂದಿನ ಎಪಿಆರ್ಸಿ ಸುತ್ತುಗಳಲ್ಲಿ ಇನ್ನಷ್ಟು ದೊಡ್ಡ ಸಾಧನೆಗೆ ಪ್ರೋತ್ಸಾಹ ದೊರಕಿದಂತಾಗಿದೆ