ಇಸ್ಲಾಮಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ; ಸಿರಾಜುದ್ದೀನ್ ಖಾಸಿಮಿ ಕರೆ

Feb 13, 2026 - 19:31
 0  263
ಇಸ್ಲಾಮಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ; ಸಿರಾಜುದ್ದೀನ್ ಖಾಸಿಮಿ ಕರೆ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ಇಸ್ಲಾಮಿನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಂತರರಾಷ್ಟ್ರೀಯ ಪ್ರಭಾಷಣಗಾರ ಯುವವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರು ಕರೆ ನೀಡಿದರು.

 ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ ಸಮಾರಂಭದ ಸಾರ್ವಜನಿಕ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು ಇತ್ತೀಚಿನ ಯುಗದಲ್ಲಿ ಯುವ ಪೀಳಿಗೆ ಇಸ್ಲಾಮಿನ ಆದರ್ಶ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಕಲಿಸಿಕೊಟ್ಟಂತೆ ಗುರು, ಹಿರಿಯರಿಗೆ ಗೌರವವನ್ನು ಕೊಡುತ್ತ ಇಸ್ಲಾಮಿನ ಆದರ್ಶ ತತ್ವಗಳನ್ನು ಪೋಷಕರು ತಮ್ಮ ಮಕ್ಕಳ ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಪಾಲ್ಗೊಂಡು ಮಾತನಾಡಿ ಧರ್ಮಭೇದವಿಲ್ಲದೆ ಎಲ್ಲಾ ಧರ್ಮವೂ ಒಂದುಗೂಡಿ ಉರೂಸ್ ಕಾರ್ಯಕ್ರಮ ಆಚರಿಸುತ್ತಿರುವುದು ನಾಡಿನ ಅಭಿವೃದ್ಧಿಗೆ ಮುನ್ನುಡಿಯಾಗಿದೆ. ವಿದ್ಯಾಭ್ಯಾಸ ವಿಚಾರವಂತಿಕೆ ಅಭಿವೃದ್ಧಿ, ಎಲ್ಲಿ ಹೆಚ್ಚಾಗಿರುತ್ತದೆಯೋ ಅಂತಹ ಕಡೆಗಳಲ್ಲಿ ಕೋಮುಗಲಭೆ ಉಂಟಾಗಲು ಸಾಧ್ಯವಿಲ್ಲ. ಜಾತಿಭೇದವಿಲ್ಲದೆ ನಡೆಯುವ ಇಂತಹ ಉರೂಸ್ ಸಮಾಜದಲ್ಲಿ ಉತ್ತಮ ವಾತಾವರಣ ಮೂಡಿಸುತ್ತಿರುವುದು ಶ್ಲಾಘನಿಯ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮೊದಲಿಗೆ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಹಿಬ್ ಖಾಝಿಗಳು ಹಾಗೂ ಕೇಂದ್ರಮುಶಾವರ ಸದಸ್ಯರಾದ ಅಬ್ದುಲ್ಲಾ ಫೈಝಿ ಅವರು ಉದ್ಘಾಟಿಸಿ ಮಾತನಾಡಿದರು. ಉರೂಸ್ ಸಮಾರಂಭದ ಅಂಗವಾಗಿ ಹಿರಿಯರ ಮತ್ತು ವಿದ್ಯಾರ್ಥಿಗಳ ದಫ್ ಪ್ರದರ್ಶನ,ಬುರ್ದಾ ಮಜ್ಲಿಸ್, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ವಾರ್ಷಿಕ ಉರೂಸ್ ಸಮಾರಂಭದ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ಚೆರಿಯಪರಂಬು ಜಮಾಅತ್ ಅಧ್ಯಕ್ಷ ಪಿ.ಎ. ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿ ಮಹಮ್ಮದ್ ಇರ್ಫಾನ್,ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ. ಪಿ. ಗೋಪಾಲ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಪಿ.ಜಿ. ರಾಘವೇಂದ್ರ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್,ಕೆ ಡಿ ಪಿ ಸದಸ್ಯ ಕೋಳುಮಂಡ ರಫೀಕ್, ಟಾಟೂ ಮೊಣ್ಣಪ್ಪ, ಮಾದಂಡ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್, ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷ ಪಿ.ಎಂ. ಇಬ್ರಾಹಿಂ, ಕೋಶಾಧಿಕಾರಿ ಪಿ. ಎಚ್. ಬಷೀರ್, ಸಹ ಕಾರ್ಯದರ್ಶಿ ಆಲಿ, ಸದಸ್ಯರಾದ ಅಶ್ರಫ್,ಮೊಯ್ದು ಕುಂಞಿ,ಇಸ್ಮಾಯಿಲ್ ಸಾಖಾಫಿ ಕೊಂಡಂಗೇರಿ,ಮಸೀದಿಯ ಖತೀಬರಾದ ಮೊಹಮ್ಮದ್ ಶಫೀಕ್ ಅಲಿ ಸಿರಾಜಿ,ಸೇರಿದಂತೆ ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು,ಸದಸ್ಯರು,ಭಕ್ತಾಧಿಗಳು ಅಧಿಕಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಜಮಾಅತ್ ಮಾಜಿ ಕಾರ್ಯದರ್ಶಿ ಸಿ.ಎಂ. ಉಸ್ಮಾನ್ ನಿರೂಪಿಸಿದರು. ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0