ಮಂಗಳೂರು: ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ! ಮಗಳನ್ನು ಕೊಂದು ತಂದೆಗೆ ಕರೆ ಮಾಡಿದ ಪಾಗಲ್ ಪ್ರೇಮಿ ಪೊಲೀಸರ ವಶ

Jul 17, 2026 - 17:57
 0  483
ಮಂಗಳೂರು: ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ! ಮಗಳನ್ನು ಕೊಂದು ತಂದೆಗೆ ಕರೆ ಮಾಡಿದ ಪಾಗಲ್ ಪ್ರೇಮಿ ಪೊಲೀಸರ ವಶ

ಮಂಗಳೂರು, ಜು.17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿಯ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿಯನ್ನು ತಲ್ವಾರ್‌ನಿಂದ ಕಡಿದು ಕೊಲೆ ಮಾಡಲಾಗಿದೆ. ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿ ಲಾವಣ್ಯ (21)ಎಂದು ಗುರುತಿಸಲಾಗಿದೆ.

 ನಡೆದಿದ್ದೇನು?

ಮೃತ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ‌ ಕೆಲಸ ಮಾಡುತ್ತಿದ್ದರು. ಆರೋಪಿ ಚೇತನ್ ಮತ್ತು ಲಾವಣ್ಯ ದೂರದ ಸಂಬಂಧಿಗಳಾಗಿದ್ದು, ಆರೋಪಿ ಯುವತಿಯನ್ನು ಏಕಮುಖವಾಗಿ ಇಷ್ಟಪಡುತ್ತಿದ್ದ ಎನ್ನಲಾಗಿದೆ. ಗುರುವಾರ ಜು.16 ಸಂಜೆ 6 ಗಂಟೆ ಸುಮಾರಿಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವುಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿ ಆಕೆಯ ಪಕ್ಕದಲ್ಲಿ ಬಂದು ಕುಳಿತಿದ್ದ. ಅನುಮಾನಗೊಂಡ ಲಾವಣ್ಯ ಸಂಬಂಧಿಕರಿಗೆ ಫೋನ್ ಮಾಡಿ "ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ" ಎಂದು ತಿಳಿಸಿದ್ದರು. ಬಳಿಕ ಕರೆ ಕಟ್ ಆಗಿದೆ. ಬಸ್‌ನಿಂದ ಇಳಿದ ತಕ್ಷಣ ಚೇತನ್ ಲಾವಣ್ಯಳನ್ನು ಬೆನ್ನಟ್ಟಿದ್ದಾನೆ. ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದು ಮಾರಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಲಾವಣ್ಯ ಅವರನ್ನು ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತಂದೆಗೆ ಕರೆ ಮಾಡಿ ಒಪ್ಪಿಕೊಂಡಿದ್ದ ಆರೋಪಿ: ಕೃತ್ಯದ ನಂತರ ಆರೋಪಿ ಆಲ್ಟೋ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದ. ಈ ಮಧ್ಯೆ ಲಾವಣ್ಯ ತಂದೆಗೆ ಕರೆ ಮಾಡಿ "ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ. ಮಾಹಿತಿ ಪಡೆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.

ಮೊಬೈಲ್ ನೆಟ್‌ವರ್ಕ್ ಮತ್ತು ಸಿಸಿಟಿವಿ ಆಧರಿಸಿ ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ. ತಿಂಗಳ ಹಿಂದೆಯೇ ಗಲಾಟೆ: ಪೊಲೀಸ್ ಮೂಲಗಳ ಪ್ರಕಾರ, ಒಂದು ತಿಂಗಳ ಹಿಂದೆ ಆರೋಪಿ ಲಾವಣ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದ. ಸಿಬ್ಬಂದಿ ಮಧ್ಯಪ್ರವೇಶಿಸಿ ತಡೆದಿದ್ದರೂ ಆ ಸಮಯದಲ್ಲಿ ಪೊಲೀಸ್ ದೂರು ದಾಖಲಾಗಿರಲಿಲ್ಲ. ಇದೇ ದುರಂತಕ್ಕೆ ಕಾರಣವಾಯಿತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 0
Wow Wow 0