ಬ್ರಿಟನ್ | ಲೈಂಗಿಕ ದೌರ್ಜನ್ಯ ಪ್ರಕರಣ; ಭಾರತೀಯ ಮೂಲದ ಹೃದ್ರೋಗ ತಜ್ಞನಿಗೆ 6 ವರ್ಷಗಳ ಜೈಲು ಶಿಕ್ಷೆ

ಲಂಡನ್: ಭಾರತೀಯ ಮೂಲದ ಹೃದಯ ಶಸ್ತ್ರಚಿಕಿತ್ಸಕ ಡಾ. ಅಮಲ್ ಕೃಷ್ಣ ಬೋಸ್ (55) ಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬ್ರಿಟನ್ ನ ಪ್ರೆಸ್ಟನ್ ಕ್ರೌನ್ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಲಂಕಾಷೈರ್‌ನ ಬ್ಲ್ಯಾಕ್‌ಪೂಲ್ ವಿಕ್ಟೋರಿಯಾ ಆಸ್ಪತ್ರೆಯ ಐದು ಮಹಿಳಾ ಸಿಬ್ಬಂದಿಯ ಮೇಲೆ 2017ರಿಂದ 2022ರ ನಡುವೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೋಸ್ ತಪ್ಪಿತಸ್ಥ ಎಂದು ತೀರ್ಪು ನೀಡಲಾಗಿದೆ. ಬೋಸ್ ವಿರುದ್ಧದ ಅನುಚಿತ ಸ್ಪರ್ಶ ಹಾಗೂ ಅಸಭ್ಯ ಮಾತು ಸೇರಿದಂತೆ 12 ಪ್ರಕರಣಗಳು ಸಾಬೀತಾಗಿವೆ.
ಬೋಸ್ ತಮ್ಮ ನಡೆ “ಪ್ರೀತಿ” ಮತ್ತು “ಕೆಲಸದ ಸ್ಥಳದ ಹಾಸ್ಯ” ಎಂದೇ ಸಮರ್ಥಿಸಿಕೊಂಡರೂ, ನ್ಯಾಯಾಲಯವು ಅದನ್ನು ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಿದೆ.
“ಕೆಲಸದ ಸ್ಥಳದಲ್ಲಿ ಸುರಕ್ಷತೆ ಪ್ರತಿಯೊಬ್ಬರ ಹಕ್ಕು. ಬೋಸ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಲಂಕಾಷೈರ್ ಪೊಲೀಸರ ಇನ್ಸ್‌ಪೆಕ್ಟರ್ ಕಿರ್ಸ್ಟಿ ವ್ಯಾಟ್ ಪ್ರತಿಕ್ರಿಯಿಸಿದ್ದಾರೆ.
ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ಪ್ರಕಾರ, ಬೋಸ್ ಆಸ್ಪತ್ರೆಯಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರು. ಸಂತ್ರಸ್ತರು ನ್ಯಾಯಾಲಯದಲ್ಲಿ ಲೈಂಗಿಕ ಕಿರುಕುಳದಿಂದ ತಮ್ಮ ಮೇಲಾದ ಪರಿಣಾಮಗಳನ್ನು ತೆರೆದಿಟ್ಟರು.
“ಈ ಪ್ರಕರಣ ನಮಗೆ ಆಘಾತ ಉಂಟುಮಾಡಿದೆ. ಸಂತ್ರಸ್ತರ ಧೈರ್ಯ ಶ್ಲಾಘನೀಯ. ನಮ್ಮ ಸಿಬ್ಬಂದಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ", ಎಂದು ಬ್ಲ್ಯಾಕ್‌ಪೂಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಾಹಕಿ ಮ್ಯಾಗಿ ಓಲ್ಡ್‌ಹ್ಯಾಮ್ ಹೇಳಿದ್ದಾರೆ.
ದೂರುಗಳು ಬಂದ ನಂತರ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಸ್ಥಾನದಿಂದ ಬೋಸ್ ರನ್ನು ಅಮಾನತುಗೊಳಿಸಲಾಗಿತ್ತು. ಪ್ರಕರಣದ ಬಗ್ಗೆ NHS ಟ್ರಸ್ಟ್ ಮಾರ್ಚ್ 2023ರಲ್ಲಿ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿತ್ತು.