ಎರಡು ಮಕ್ಕಳ ತಂದೆಯ ಜೊತೆ ಇನ್ಸ್ಟಾಗ್ರಾಮ್ನಲ್ಲಿ ಪ್ರೀತಿ, ಮದುವೆ:ಪತ್ನಿಯನ್ನು ಕೊಲೆ ಮಾಡಿ ಪತಿ ಮಾಡಿದ್ದೇನು ಗೊತ್ತಾ?
ಭೋಪಾಲ್ (ಮಧ್ಯಪ್ರದೇಶ): ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಶವವನ್ನು ಪೆಟ್ಟಿಗೆಯಲ್ಲಿ ತುಂಬಿ ಸೆಪ್ಟಿಕ್ ಟ್ಯಾಂಕ್ನಲ್ಲಿ ಎಸೆದಿರುವ ಪ್ರಕರಣ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆಯನ್ನು ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ಬೋಫಾಲ್ ನಿವಾಸಿ ಸಮೀರ್ ಖಾನ್ ಕೊಲೆಗೈದ ಆರೋಪಿ ಪತಿಯಾಗಿದ್ದು, ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಆರೋಪಿಯ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೆಪ್ಟಿಕ್ ಟ್ಯಾಂಕ್ನಲ್ಲಿ ತೇಲುತ್ತಿದ್ದ ಶವ ಪೆಟ್ಟಿಗೆ:
ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ನಗರದಲ್ಲಿ ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟಿಕ್ ಟ್ಯಾಂಕ್‌ನಿಂದ ದುರ್ವಾಸನೆ ಬಂದ ಹಿನ್ನೆಲ್ಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಶವ ಪೆಟ್ಟಿಗೆ ಕಂಡುಬಂದಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಗಮಿಸಿ, ಪೆಟ್ಟಿಗೆ ಹೊರ ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಾಗ, ಪತಿಯೇ ಪತ್ನಿಯನ್ನು ಕೊಂದಿರುವುದು ಗೊತ್ತಾಗಿದೆ.
ಇಬ್ಬರು ಮಕ್ಕಳ ತಂದೆಯೊಂದಿಗಿನ ಪ್ರೀತಿ, ಮದುವೆ, ಕೊಲೆ:
ಮಹಾರಾಷ್ಟ್ರದ ಮೂಲದ ಅಶ್ರಫಿ ಮತ್ತು ಭೋಪಾಲ್ ಮೂಲದ ಆಟೋ ಚಾಲಕ ಸಮೀರ್ ಖಾನ್ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಇವರ ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿತ್ತು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ ಸಮೀರ್ ಪ್ರೀತಿ ಮಾಡಿದ್ದ. ಜೊತೆಗೆ ಈ ವಿಷಯ ಮುಚ್ಚಿಟ್ಟು ಆಶ್ರಫಿಯನ್ನು ಮದುವೆಯಾಗಿ ನಾಲ್ಕೈದು ತಿಂಗಳಿನಿಂದ ಜೊತೆಯಾಗಿ ಸಂಸಾರ ಮಾಡುತ್ತಿದ್ದರು. ಇತ್ತೀಚೆಗೆ ಸಮೀರ್ನ ಮೊದಲ ಮದುವೆ ಮಕ್ಕಳ ಬಗ್ಗೆ ಅಶ್ರಫಿಗೆ ಗೊತ್ತಾದಾಗ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಪತ್ನಿಯನ್ನು ಆತ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಮಾಡಿ ಆರೋಪಿ ಪರಾರಿ:
ಮೃತ ಮಹಿಳೆ ಮಹಾರಾಷ್ಟ್ರದ ಗೋಡಿಯಾ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ (33) ಎಂದು ಗುರುತಿಸಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಸಮೀರ್ ಖಾನ್ ಜೊತೆ ಸ್ನೇಹ, ಪ್ರೀತಿ ಬೆಳೆಸಿ ಬಳಿಕ ಅವನೊಂದಿಗೆ ಮದುವೆಯಾಗಿ ಭೋಪಾಲ್ಗೆ ಬಂದಿದ್ದಳು ಎಂದು ಎಸ್ಐ ಶ್ರೀಕಾಂತ್ ದಿವೇದಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷಿಗಳು ಮತ್ತು ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಶೀಘ್ರದಲ್ಲೇ ಈ ಕೊಲೆಯ ಸಂಪೂರ್ಣ ತನಿಖೆ ಮಾಡಿ ಮಾಹಿತಿ ಬಹಿರಂಗಪಡಿಸಲಿದ್ದಾರೆ. ಜೊತೆಗೆ ಪರಾರಿಯಾಗಿರುವ ಆರೋಪಿಯನ್ನು ಬಂಧಿಸುತ್ತಾರೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಂದು, ನಂತರ ಶವವನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಸೆಪ್ಟಿಕ್ ಟ್ಯಾಂಕ್ಗೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಮೂರ್ನಾಲ್ಕು ದಿನಗಳ ಹಿಂದೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಇದೆ" ಎಂದು ಹೆಚ್ಚುವರಿ ಡಿಸಿಪಿ ಮಲ್ಕಿತ್ ಸಿಂಗ್ ತಿಳಿಸಿದ್ದಾರೆ.
ಶಂಕಿತ ಆರೋಪಿಯು ಘಟನಾ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ವಾಸವಾಗಿದ್ದಾನೆ. ಆರೋಪಿಯ ಇಡೀ ಕುಟುಂಬವನ್ನು ಬೆಳಗ್ಗೆ ವಶಕ್ಕೆ ಪಡೆದಿದ್ದೇವೆ. ಈ ಪ್ರಕರಣದಲ್ಲಿ 20 ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.