ಔಷಧಿ ಕುಡಿಯಲು ನೀರು ಕೇಳಿದ ಅಜ್ಜಿಗೆ ಐಸ್ ನೀಡಿದರು! | ಅಮೆರಿಕದಿಂದ ಗಡೀಪಾರಾದ 73 ವರ್ಷದ ಸಿಖ್ ಅಜ್ಜಿ ಹಂಚಿಕೊಂಡ ಭಯಾನಕ ಅನುಭವ

ಹೊಸದಿಲ್ಲಿ: ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ನೆಲೆಸಿದ್ದ 73 ವರ್ಷದ ಸಿಖ್ ಮಹಿಳೆ ಹರ್ಜಿತ್ ಕೌರ್ ಅವರನ್ನು ಅಮೆರಿಕ ವಲಸೆ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಬಂಧನದ ವೇಳೆ ಅವರಿಗೆ ಸರಿಯಾದ ಆಹಾರ, ಔಷಧಿ ನೀಡದೇ, ಔಷಧಿ ಸೇವಿಸಲು ನೀರು ಕೇಳಿದಾಗ ಕೇವಲ ತಟ್ಟೆಯಲ್ಲಿ ಐಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
"ಕೌರ್ ಅವರಿಗೆ ಚೀಸ್ ಸ್ಯಾಂಡ್‌ವಿಚ್ ನೀಡಲಾಯಿತು. ಔಷಧಿ ಸೇವಿಸಲು ನೀರು ಕೇಳಿದಾಗ ಐಸ್ ನೀಡಲಾಯಿತು. ತಿನ್ನಲು ಸಾಧ್ಯವಿಲ್ಲವೆಂದು ಹೇಳಿದಾಗ ಗಾರ್ಡ್, 'ಅದು ನಿಮ್ಮ ತಪ್ಪು' ಎಂದು ಪ್ರತಿಕ್ರಿಯಿಸಿದ" ಎಂದು ಕೌರ್ ಅವರ ವಕೀಲ ದೀಪಕ್ ಅಹ್ಲುವಾಲಿಯಾ ಆರೋಪಿಸಿದ್ದಾರೆ.
ಬಂಧನದ ವೇಳೆ ಸ್ನಾನ ಮಾಡುವ ಅವಕಾಶವನ್ನೂ ನಿರಾಕರಿಸಲಾಯಿತು. ಸೆಪ್ಟೆಂಬರ್ 22 ರಂದು ಜಾರ್ಜಿಯಾದಿಂದ ಅರ್ಮೇನಿಯಾಗೆ ವಿಮಾನವೇರುವ ಮುನ್ನ ಬಂಧಿತರಿಗೆ ಕೇವಲ ಒದ್ದೆಯಾದ ಬಟ್ಟೆಗಳನ್ನು ನೀಡಿ ಸ್ವಚ್ಛಗೊಳಿಸಿಕೊಳ್ಳಲು ಸೂಚಿಸಲಾಯಿತು. ಬಳಿಕ ICE ಚಾರ್ಟರ್ಡ್ ವಿಮಾನದ ಮೂಲಕ ಕೌರ್ ಅವರನ್ನು ದೆಹಲಿಗೆ ಗಡೀಪಾರು ಮಾಡಲಾಯಿತು.
ದೆಹಲಿಗೆ ಬಂದಿಳಿದ ನಂತರ ಕೌರ್ ತಮ್ಮ ಅನುಭವವನ್ನು ಹಂಚಿಕೊಂಡು ಕಣ್ಣೀರಿಟ್ಟರು. "ಇಷ್ಟು ವರ್ಷಗಳ ನಂತರ ಇದ್ದಕ್ಕಿದ್ದಂತೆ ಬಂಧಿಸಿ ಗಡೀಪಾರು ಮಾಡುವುದೆಂದರೆ ಬದುಕುವುದಕ್ಕಿಂತ ಸಾಯುವುದೇ ಉತ್ತಮ. ನನ್ನ ಪಾದಗಳು ಊದಿಕೊಂಡಿವೆ, ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಔಷಧಿ ದೊರಕಲಿಲ್ಲ" ಎಂದು ಅವರು ಅಳಲು ತೋಡಿಕೊಂಡರು.
ಪಂಜಾಬ್‌ನ ತರಣ್ ಜಿಲ್ಲೆಯ ಪಂಗೋಟಾ ಗ್ರಾಮದ ಮೂಲದ ಹರ್ಜಿತ್ ಕೌರ್, ಪತಿಯ ಮರಣದ ನಂತರ ಇಬ್ಬರು ಪುತ್ರರೊಂದಿಗೆ ಸುಮಾರು 33 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅವರು ಇತ್ತೀಚಿನವರೆಗೂ ಕ್ಯಾಲಿಫೋರ್ನಿಯಾದ ಬರ್ಕ್ಲಿಯ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಸೆಪ್ಟೆಂಬರ್ 8ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಲಸೆ ಅಧಿಕಾರಿಗಳ ನಿಯಮಿತ ಚೆಕ್-ಇನ್ ವೇಳೆ ಹರ್ಜಿತ್ ಕೌರ್ ಅವರನ್ನು ಬಂಧಿಸಿದ್ದರು. ಆ ಬಳಿಕ ಮೆಸಾ ವರ್ಡೆ ಬಂಧನ ಕೇಂದ್ರಕ್ಕೆ ಕರೆದೊಯ್ದರು. ಸೆಪ್ಟೆಂಬರ್ 10ರಂದು ಲಾಸ್ ಏಂಜಲೀಸ್, ಜಾರ್ಜಿಯಾ, ಅರ್ಮೇನಿಯಾ ಮುಖಾಂತರ ದೆಹಲಿಗೆ ಗಡೀಪಾರು ಮಾಡಲಾಯಿತು.
ಹರ್ಜಿತ್ ಕೌರ್ ಅವರ ಗಡೀಪಾರು ಕ್ರಮವು ಸಿಖ್ ಸಮುದಾಯ ಮತ್ತು ವಲಸಿಗರ ಹಕ್ಕಿಗಾಗಿ ಹೋರಾಟ ನಡೆಸುವ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಕ್ಯಾಲಿಫೋರ್ನಿಯಾದಲ್ಲಿ "ನಮ್ಮ ಅಜ್ಜಿಯನ್ನು ಮನೆಗೆ ಕರೆತನ್ನಿ" ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆಗಳು ನಡೆದಿದ್ದವು.
ಕೌರ್ ಅವರ ಮೊಮ್ಮಗಳು ಸುಖದೀಪ್ ಕೌರ್ ಅವರನ್ನು "ಸ್ವತಂತ್ರ ಹಾಗೂ ಶ್ರಮಶೀಲ ಮಹಿಳೆ" ಎಂದು ಬಣ್ಣಿಸಿದರೆ, ಸಹೋದರ ಕುಲ್ವಂತ್ ಸಿಂಗ್, "ಅವರನ್ನು ಕುಟುಂಬದಿಂದ ಬೇರ್ಪಡಿಸಿದ್ದು ದುಃಖಕರ. ಈಗ ಪಂಜಾಬ್‌ನಲ್ಲಿ ನಾವು ಅವರನ್ನು ನೋಡಿಕೊಳ್ಳುತ್ತೇವೆ" ಎಂದಿದ್ದಾರೆ.
ಬಂಧನ ಹಾಗೂ ಗಡೀಪಾರು ಸಂದರ್ಭಗಳಲ್ಲಿ ಮಾನವೀಯ ಮೌಲ್ಯಗಳನ್ನು ಉಲ್ಲಂಘಿಸಿರುವ ಬಗ್ಗೆ ಪ್ರತ್ಯೇಕ ದೂರು ದಾಖಲಿಸುವುದಾಗಿ ವಕೀಲ ಅಹ್ಲುವಾಲಿಯಾ ತಿಳಿಸಿದ್ದಾರೆ.