ಜಲ ಜೀವನ್ ಮಿಷನ್‌ಗೆ ಕಾಯಕಲ್ಪ ನೀಡಿ, ಡಿಸೆಂಬರ್ 2028 ರವರೆಗೆ ವಿಸ್ತರಿಸಿದ್ದು ಸ್ವಾಗತಾರ್ಹ; ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಯದುವೀರ್ ಒಡೆಯರ್
ಮೈಸೂರು, ಮಾ. 12: ಜಲ ಜೀವನ್ ಮಿಷನ್ (JJM) 2.0 ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ವಲಯದಲ್ಲಿ ಸುಧಾರಣೆಗಳ ಮೇಲೆ ಗಮನಹರಿಸಿ, ಯೋಜನೆಯ ವೆಚ್ಚವನ್ನು ಹೆಚ್ಚಿಸುವ ಮೂಲಕ ಮತ್ತು ಅನುಷ್ಠಾನವನ್ನು ಮರು ರಚಿಸುವ ಮೂಲಕ ಜಲ ಜೀವನ್ ಮಿಷನ್ ಅವಧಿಯನ್ನು ಡಿಸೆಂಬರ್ 2028 ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್ ಒಡೆಯರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸುಸ್ಥಿರ ಗ್ರಾಮೀಣ ಪೈಪ್‌ಲೈನ್ ಕುಡಿಯುವ ನೀರು ಪೂರೈಕೆಗಾಗಿ 'ಜಲ ಜೀವನ್ ಮಿಷನ್' (JJM) ಯೋಜನೆಯನ್ನು ಮರುಸಂಘಟಿಸುವ ಜಲಶಕ್ತಿ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಈ ನಿರ್ದಾರದಿಂದ ಯೋಜನೆಯ ಗಮನವು ಕೇವಲ 'ಮೂಲಸೌಕರ್ಯ ನಿರ್ಮಾಣ' ಮಾತ್ರ ಆಗಿರುವುದಿಲ್ಲ 'ಸೇವಾ ವಿತರಣೆ'ಯೂ (Service Delivery) ಆಗಿರಲಿದೆ. ಕುಡಿಯುವ ನೀರು ಪೂರೈಕೆಗೆ ಹೆಚ್ಚು ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನಾನು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಕ್ರಿಯಾ ಯೋಜನೆ ರೂಪಿಸಲು ಸೂಚಿಸುತ್ತೇನೆ. ನಮ್ಮ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಸಂಸದ ಯದುವೀರ್ ಒಡೆಯರ್
ಜೆಜೆಎಂ ಮಾಹಿತಿ;
ದೇಶದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಿರುವ 19.36 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ, ಇಂದಿನವರೆಗೆ ಸುಮಾರು 15.80 ಕೋಟಿ (81.61%) ಕುಟುಂಬಗಳು ನಲ್ಲಿ ನೀರು ಸಂಪರ್ಕ ಹೊಂದಿವೆ ಎಂದು ವರದಿಯಾಗಿದೆ. ಎಸ್.ಬಿ.ಐ ರಿಸರ್ಚ್ (SBI Research) ವರದಿಯ ಪ್ರಕಾರ, ಜಲ ಜೀವನ್ ಮಿಷನ್ 9 ಕೋಟಿ ಮಹಿಳೆಯರನ್ನು ನೀರು ತರುವ ಕಷ್ಟದ ಕೆಲಸದಿಂದ ಮುಕ್ತಗೊಳಿಸಿದೆ, ಇದು ಅವರು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದೆ. ಜೆಜೆಎಂ (JJM) 2.0 ಅಡಿಯಲ್ಲಿ, ಡಿಸೆಂಬರ್ 2028ರ ವೇಳೆಗೆ ದೇಶಾದ್ಯಂತ ಇರುವ ಎಲ್ಲಾ 19.36 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕವನ್ನು ಒದಗಿಸುವ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ಗಳನ್ನು ‘ಹರ್ ಘರ್ ಜಲ್’ ಎಂದು ಪ್ರಮಾಣೀಕರಿಸಲು ಅನುವು ಮಾಡಿಕೊಡಲಾಗುವುದು.
ಜಲ ಜೀವನ್ ಮಿಷನ್ ಮರುರಚನೆಗಾಗಿ, 8.69 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಕೇಂದ್ರದ ಒಟ್ಟು ಸಹಾಯಧನವು 3.59 ಲಕ್ಷ ಕೋಟಿ ರೂಪಾಯಿಗಳಾಗಿದೆ. ಈ ಗುರಿ ಸಾಧನೆಗಾಗಿ "ಸುಜಲಂ ಭಾರತ್" ಎಂಬ ರಾಷ್ಟ್ರೀಯ ಡಿಜಿಟಲ್ ಚೌಕಟ್ಟನ್ನು ರೂಪಿಸಲಾಗುವುದು. ಇದರ ಅಡಿಯಲ್ಲಿ ಪ್ರತಿ ಹಳ್ಳಿಗೂ ವಿಶಿಷ್ಟವಾದ 'ಸುಜಲ್ ಗಾಂವ್' ಅಥವಾ 'ಸೇವಾ ಪ್ರದೇಶದ ಐಡಿ' (Service Area ID) ನೀಡಲಾಗುವುದು.
ಇದು ನೀರಿನ ಮೂಲದಿಂದ ಮನೆಮನೆಯ ನಲ್ಲಿಯ ಸಂಪರ್ಕದವರೆಗೆ ಸಂಪೂರ್ಣ ಪೂರೈಕೆ ವ್ಯವಸ್ಥೆಯನ್ನು ಡಿಜಿಟಲೈಸ್ ನಕ್ಷೆ ಮಾಡುತ್ತದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, "ಜಲ ಅರ್ಪಣ್" ಮೂಲಕ ಯೋಜನೆಗಳ ಕಾರ್ಯಾರಂಭ ಮತ್ತು ಹಸ್ತಾಂತರದಲ್ಲಿ ಗ್ರಾಮ ಪಂಚಾಯತ್ ಗಳು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು (VWSCs) ತೊಡಗಿಸಿಕೊಳ್ಳಲಾಗುತ್ತದೆ.