ಕೇಂದ್ರ ಬಿಜೆಪಿ ಸರ್ಕಾರದ ಜಾತಿ ಗಣತಿ ನಿರ್ಧಾರದಿಂದ ಜನಹಿತ: ಯದುವೀರ್‌ ಒಡೆಯರ್‌

ಕೇಂದ್ರ ಬಿಜೆಪಿ ಸರ್ಕಾರದ ಜಾತಿ ಗಣತಿ ನಿರ್ಧಾರದಿಂದ ಜನಹಿತ: ಯದುವೀರ್‌ ಒಡೆಯರ್‌

ಬೆಂಗಳೂರು: ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಅವರ ಆಶಯದಂತೆ "ವಿಕಸಿತ ಭಾರತ" ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ತೊಟ್ಟಿದ್ದೇವೆ. ಇದರ ಭಾಗವಾಗಿ ಎಲ್ಲರಿಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಂಸದರು, ಜಾತಿ ಜನ ಗಣತಿ ಎಲ್ಲರಿಗೂ ಪೂರಕವಾಗಿರುತ್ತದೆ. ಇದು ಇಂದಿನ ಅತ್ಯಗತ್ಯ ಕಾರ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

1931ರಲ್ಲಿ ಅಂದಿನ ಬ್ರಿಟಿಷ್‌ ಆಡಳಿತ ಜಾತಿ ಗಣತಿ ನಡೆಸಿತ್ತು. ಹಲವು ದಶಕಗಳಾದರೂ ಇದನ್ನು ಮತ್ತೆ ನಡೆಸಿರಲಿಲ್ಲ. ಈಗ ಜಾತಿ ಗಣತಿಯನ್ನು ಅತ್ಯಂತ ವೈಜ್ಞಾನಿಕವಾಗಿ ಸಂವಿಧಾನದ ಆಧಾರದ ಮೇಲೆಯೇ ಇದನ್ನು ನಡೆಸಲು ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಎಂದು ಯದುವೀರ್‌ ಹೇಳಿದರು. 

ಬಿಜೆಪಿಯಿಂದ ಜನಪರ ಆಡಳಿತ:

ಬಿಜೆಪಿ ಎಂದಿಗೂ ಜನಪರವಾದ ಆಡಳಿತ ನೀಡುತ್ತದೆ. ಜಾತಿ ಗಣತಿ ನಡೆಸುವ ಪ್ರಕ್ರಿಯೆಯು ಇದರ ಪ್ರಮುಖ ಭಾಗವಾಗಿದೆ. ಇದು ಅಭಿವೃದ್ಧಿಗೆ ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾಗಿಯೇ ಇರುತ್ತದೆಯೇ ಹೊರತು ಯಾವುದೇ ರೀತಿಯ ಓಲೈಕೆ ರಾಜಕಾರಣವಾಗಿರುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು.  

ಕೇಂದ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚಿದೆಯೇ ಹೊರತು ಗಣತಿ ಮಾಡಲು ಕ್ರಮ ಕೈಗೊಳ್ಳಲೇ ಇಲ್ಲ. ಈಗ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಆರೋಪ ಮಾಡಲು ಯಾವುದೇ ನೈತಿಕತೆ ಹೊಂದಿಲ್ಲ ಎಂದು ಮೈಸೂರು-ಕೊಡಗು ಸಂಸದರು ಹೇಳಿದರು.

ಜಾತಿ ಗಣತಿ ಮಾಡುವ ನಿರ್ಧಾರ ಕೈ ನೇತೃತ್ವದ ಸರ್ಕಾರದ ಕೈಯಲ್ಲಿತ್ತು. ಆದರೆ ಜನರ ಅಭಿವೃದ್ಧಿಗಿಂತ ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಕಾಂಗ್ರೆಸ್‌ ನಾಯಕರು ಈ ಬಗ್ಗೆ ಚಿಂತನೆ ನಡೆಸಲೇ ಇಲ್ಲ. ಆದರೆ ಈಗ ತಗಾದೆ ತೆಗೆಯುವುದು ಅಕ್ಷಮ್ಯ ಎಂದು ಕಿಡಿಕಾರಿದರು.

ಇಷ್ಟು ವರ್ಷ ಸುಮ್ಮನಿದ್ದ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಈಗ ನಮ್ಮ ಒತ್ತಡದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. 246ನೇ ವಿಧಿಯ ಅನ್ವಯ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ಯದುವೀರ್‌ ವಿವರಿಸಿದರು.ಜಾತಿ ಗಣತಿ ಹೆಸರಿನಲ್ಲಿ ಹತ್ತು ವರ್ಷಗಳ ಕಾಲ ರಾಜ್ಯ ಕಾಂಗ್ರೆಸ್‌ ಸರ್ಕಾರ ಸವಾರಿ ಮಾಡಿತೇ ಹೊರತು ಯಾವುದೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇದಕ್ಕೆ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿದೆ ಎಂದು ದೂರಿದರು.

ಹಿಂದುಳಿದ ಜಾತಿಗಳಿಗೆ ಕಾಂಗ್ರೆಸ್‌ನಿಂದ ಮೋಸ:

ಅತಿ ಹಿಂದುಳಿದ ವರ್ಗದ ಜಾತಿಗಳಿಗೆ ಪವರ್ಗ-1ರಲ್ಲಿ ಕಾಂಗ್ರೆಸ್‌ ಮೋಸ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ಸಣ್ಣ ಸಣ್ಣ ಉಪ ಜಾತಿಗಳಿಗೂ ಸೂಕ್ತ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರೇ ರಾಜ್ಯ ಸರ್ಕಾರದ ಜಾತಿ ಗಣತಿಯನ್ನು ವಿರೋಧಿಸಿದ್ದಾರೆ ಎಂದು ಸಂಸದರು ತಿಳಿಸಿದರು.ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ ಸಾಕಷ್ಟು ಲೋಪ-ದೋಷಗಳಿವೆ. ಅವೈಜ್ಞಾನಿಕತೆ ಕೂಡಿದೆ. ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಇವುಗಳಿಗೆ ಪರಿಹಾರ ಒದಗಿಸಲು ಅತ್ಯಂತ ಸೂಕ್ತಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಲು ಬದ್ಧತೆ ತೋರಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

ಮೋದಿ ಸರ್ಕಾರವೇ ಪರಿಹಾರ:

ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಎಂದಿಗೂ ಜನೋಪಯೋಗಿ ಯೋಜನೆಗಳನ್ನೇ ಜಾರಿಗೆ ತರುತ್ತಿದೆ. ಇದು ಮತ್ತೊಂದು ಮಹತ್ವದ ನಿರ್ಧಾರವಾಗಿದೆ. ಇದು ದೇಶದ ಎಲ್ಲರಿಗೂ ನೆರವಾಗಲಿದೆ. ಎಲ್ಲ ಸಮಸ್ಯೆಗಳಿಗೆ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಪರಿಹಾರ ಒದಗಿಸಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.