ಆಪರೇಷನ್‌ ಸಿಂಧೂರ: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿಗೆ ಸಂಸದ ಯದುವೀರ್‌ ಮೆಚ್ಚುಗೆ

ಆಪರೇಷನ್‌ ಸಿಂಧೂರ: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿಗೆ ಸಂಸದ ಯದುವೀರ್‌ ಮೆಚ್ಚುಗೆ

ಮೈಸೂರು : ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಕಿಸ್ತಾನದ ಉಗ್ರರಿಗೆ ನಮ್ಮ ಭಾರತೀಯ ಸೇನಾ ಪಡೆಗಳು ತಕ್ಕ ಉತ್ತರ ನೀಡಿದೆ. "ಆಪರೇಷನ್‌ ಸಿಂಧೂರ" ಮೂಲಕ ನಡೆಸಿರುವ ಸೇನಾ ಕಾರ್ಯಾಚರಣೆ ಅತ್ಯಂತ ನಿಖರ, ನಿರ್ದಿಷ್ಟ ಗಟ್ಟಿ ನಿರ್ಧಾರದ ಪ್ರತಿಫಲವಾಗಿದೆ ಎಂದು *ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಸಂಕಲ್ಪ ತೊಟ್ಟಿದೆ. ಅದು "ಆಪರೇಷನ್‌ ಸಿಂಧೂರ" ಮೂಲಕ ಕಾರ್ಯಾರಂಭವಾಗಿದೆ ಎಂದರು.

ಪಹಲ್ಗಾಮ್‌ ದಾಳಿಯನ್ನು ನೋಡಿದ ಪ್ರತಿಯೊಬ್ಬರಿಗೂ ರಕ್ತ ಕುದಿಯುತ್ತಿತ್ತು. ಇಂಥ ಹೀನ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಅಮಾಯಕರನ್ನು ಕೊಂದು, ಹಲವಾರು ಮಹಿಳೆಯರ "ಸಿಂಧೂರ" ಕಸಿದ ಉಗ್ರರಿಗೆ ತಕ್ಕ ಉತ್ತರ ಕೊಡಬೇಕೆಂಬುದು ಭಾರತೀಯರ ನಿರೀಕ್ಷೆಯಾಗಿತ್ತು. ಅದರಂತೆ ಮೋದಿ ಸರ್ಕಾರ "ಆಪರೇಷನ್‌ ಸಿಂಧೂರ" ಹೆಸರಿನಲ್ಲೇ ದಾಳಿ ನಡೆಸಿ "ನ್ಯಾಯ" ಒದಗಿಸುತ್ತಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.

ಸೇನಾ ಪಡೆಗಳು ಸದಾ ಸನ್ನದ್ಧ

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಗಳು ಈಗ ಭಾರತೀಯ ವಾಯುಪಡೆಯ ದಾಳಿಯಲ್ಲಿ ನಾಶಗೊಂಡಿವೆ. ಮುಂಬರುವರ ದಿನಗಳಲ್ಲಿ ಇನ್ನಷ್ಟು ಪಾಠ ಕಲಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿದೆ ಎಂದರು.ಇಡೀ ವಿಶ್ವದಲ್ಲಿ ಉಗ್ರವಾದವನ್ನು ತೊಡೆದು ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಜ್ಜಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಯುವ ಸಾಧ್ಯತೆಯೂ ಇದೆ ಎಂದು ಸಂಸದರು ವಿವರಿಸಿದರು.

ನಾಗರಿಕರು ಎಚ್ಚರಿಕೆಯಿಂದಿರಬೇಕು

ನಾಗರಿಕರು ಕೂಡ ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಜಾಗರೂಕತೆಯಿಂದ ಇರಬೇಕು. ಮಾಕ್‌ ಡ್ರಿಲ್‌ಗಳು ನಡೆಯುತ್ತಿರುತ್ತವೆ. ಆಡಳಿತಾಧಿಕಾರಿಗಳು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಆದರೆ ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಜನರ ರಕ್ಷಣೆ ಜೊತೆಗೆ ದೇಶದ ರಕ್ಷಣೆಗೂ ಸಜ್ಜಾಗಿದೆ ಎಂದರು.

ಕಾಂಗ್ರೆಸ್‌ ಇನ್ನಾದರೂ ಸುಧಾರಿಸಲಿ

ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ದೇಶದಲ್ಲಿ ಮಾತ್ರವಲ್ಲ ವಿದೇಶಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಫೋಟೋ ಹಾಕಿ ಶಾಂತಿ ಮಂತ್ರ ಪಠಿಸಬೇಕು ಎಂದು ಸಂದೇಶ ನೀಡಿದ ಕಾಂಗ್ರೆಸ್‌ಗೆ ಸಮಯ ಪ್ರಜ್ಞೆ ಇಲ್ಲ ಎನಿಸುತ್ತದೆ ಎಂದರು.ಇದು ಶಾಂತಿ ಸಾರುವ ಸಮಯವಲ್ಲ, ನಮ್ಮ ನಾಗರಿಕರ ಹತ್ಯೆ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುವ ಕಾಲ. ಈ ವೇಳೆಯಲ್ಲಿ ರಾಜಕೀಯ ಮಾಡುವುದು ಘೋರ ಅಪರಾಧ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಡಿಲೀಟ್‌ ಮಾಡಿದೆ. ಕಾಂಗ್ರೆಸ್‌ ಪಕ್ಷ ಇನ್ನಾದರೂ ಸುಧಾರಿಸಲಿ ಎಂದು ಯದುವೀರ್‌ ತಿರುಗೇಟು ನೀಡಿದರು.ನಾವೆಲ್ಲರೂ ಸರ್ಕಾರದ ಜೊತೆಗೆ ಮತ್ತು ನಮ್ಮ ವೀರ ಸೇನಾ ಪಡೆಗಳ ಜೊತೆ ನಿಲ್ಲೋಣ. ದೇಶದ ಮೇಲೆ ಮತ್ತು ನಮ್ಮ ನಾಗರಿಕರ ಮೇಲೆ ದಾಳಿ ನಡೆಸುವವರಿಗೆ "ಪ್ರತಿದಾಳಿ"ಯೇ ತಕ್ಕ ಉತ್ತರ ಎಂಬ ಸಂದೇಶ ಸಾರಿದ್ದೇವೆ. ಉಗ್ರವಾದ, ದೇಶ ದ್ರೋಹಕ್ಕೆ ತಕ್ಕ ಪಾಠವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಮಹಿಳಾ ಅಧಿಕಾರಿಗಳ ಮೂಲಕ ಮಾಹಿತಿ:

ದಾಳಿ ಕುರಿತು ಇಬ್ಬರು ಮಹಿಳಾ ಅಧಿಕಾರಿಗಳು ಮಾಹಿತಿ ನೀಡಿದ್ದು ಕೂಡ ಕೇಂದ್ರ ಸರ್ಕಾರದ ಸ್ಪಷ್ಟ ಸಂದೇಶವಾಗಿದೆ. ಕರ್ನಲ್‌ ಸೋಷಿಯಾ ಖುರೇಷಿ ಹಾಗೂ ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮಾಹಿತಿ ಒದಗಿಸಿದ್ದಾರೆ. ಭಯೋತ್ಪಾದನೆ ಮೂಲೋತ್ಪಾಟನೆಯಲ್ಲಿ ಎಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಜಗತ್ತಿಗೆ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಾರಿದೆ ಎಂದು ಯದುವೀರ್‌ ತಿಳಿಸಿದರು.